Advertisement

ಸಮಾಜ ಶಾಸ್ತ್ರ ಕಲಿಯಲೇಬೇಕಾದ ಆಸಕ್ತಿಯ ಪಠ್ಯ

11:07 PM Feb 04, 2020 | mahesh |

ಸಮಾಜ ಶಾಸ್ತ್ರ ಕಲಿಯಬೇಕಾದ್ದು ನಮ್ಮ ಅಭಿವೃದ್ಧಿಗೆ, ಸಮಾಜದ ಅಭಿವೃದ್ಧಿಗೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಉದ್ಯೋಗ ಮಾಡಿಕೊಳ್ಳಲು ಬಯಸುವವರಿಗೂ ಹಲವಾರು ಅವಕಾಶಗಳಿವೆ. ಈ ಕುರಿತೇ ಸಮಾಜಶಾಸ್ತ್ರದ ಅಗತ್ಯ ಹಾಗೂ ಲಭ್ಯ ಅವಕಾಶಗಳ ಕುರಿತು ಬರೆದಿದ್ದಾರೆ ಉಪನ್ಯಾಸಕಿಯೊಬ್ಬರು.

Advertisement

ಸಮಾಜಶಾಸ್ತ್ರದಲ್ಲಿ ಏನಿದೆ ಎಂದು ಹಲವರು ಪ್ರಶ್ನಿಸುವುದುಂಟು. ಆದರೆ ಅದು ನಿಜವಾಗಲೂ ಅತ್ಯಂತ ಆಸಕ್ತಿಕರವಾದ ಕ್ಷೇತ್ರ. ಸಂಕೀರ್ಣ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವಂಥದ್ದು. ಇದರ ಅಧ್ಯಯನವೂ ಜಾಗತಿಕ ಮಹತ್ವವನ್ನು ಹೊಂದಿದೆ. ಆಧುನಿಕ ಸಮಾಜದಲ್ಲಿ ಮಕ್ಕಳಲ್ಲಿ ಹಾಗೂ ಸಮಾಜದಲ್ಲಿ ನೈತಿಕತೆ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕೆ ಸಮಾಜ ಶಾಸ್ತ್ರದ ಅರಿವಿನ ಕೊರತೆ ಕಡಿಮೆ ಇರುವುದೂ ಒಂದು ಕಾರಣ ಎಂದರೆ ತಪ್ಪಾಗಲಾರದು.

ಕೇವಲ ವಸ್ತು ಸ್ಥಿತಿಯನ್ನು ವಿವರಿಸುವ ವಿಷಯಗಳೊಂದಿಗೆ ಸಮಾಜದಲ್ಲಿರುವ ವ್ಯಕ್ತಿ ಸ್ಥಿತಿಯನ್ನು ಮಾತ್ರ ಅರಿಯುವ, ತಿಳಿದುಕೊಳ್ಳುವಂಥ, ಸಾಮಾಜಿಕ ಮೌಲ್ಯಗಳನ್ನು ತಿಳಿಸುವಂಥ ವಿಷಯವೂ ಬೇಕು. ಅದು ಸಮಾಜಶಾಸ್ತ್ರ. ಹಿಂದಿನ ಕಾಲದಲ್ಲಿ ಕೇವಲ ಕಲಾ ವಿಭಾಗ ಮಾತ್ರ ವ್ಯಾಸಂಗಕ್ಕೆ ಲಭ್ಯವಿತ್ತು. ವಾಣಿಜ್ಯ, ವಿಜ್ಞಾನ ವಿಭಾಗಗಳಿರಲಿಲ್ಲ. ಆಗ ಸಮಾಜ ಶಾಸ್ತ್ರದ ಪ್ರತ್ಯೇಕ ಅಧ್ಯಯನ ಬೇಕಿರಲಿಲ್ಲ. ಯಾಕೆಂದರೆ ಕಲಾವಿಭಾಗದ ಭಾಗವಾಗಿತ್ತು. ಸಮಾಜ, ಕುಟುಂಬ, ಕೂಡು ಕುಟುಂಬಂದಂಥ ಕಲ್ಪನೆಗಳು ಪಕ್ಕನೆ ಅರ್ಥವಾಗುತ್ತಿದ್ದವು. ಈಗ ಅವಿಭಕ್ತ ಕುಟುಂಬಗಳು ಕಂಡು ಬರುವುದೇ ಕಡಿಮೆ. ನೈತಿಕತೆ ಇದ್ದರೂ ಅದರ ಕಡೆ ಗಮನ ಹರಿಸುತ್ತಿಲ್ಲ. ವಿವಾಹದಂತಹ ಸಾಮಾಜಿಕ ಪದ್ಧತಿಗಳು ವಿಚ್ಛೇದನದ ಮಟ್ಟಕ್ಕೆ ತಲುಪುತ್ತಿವೆ.

“ಮಾನವ ಸಂಘ ಜೀವಿ’, ಎಂಬ ಅರಿಸ್ಟಾಟಲ್‌ರ ವ್ಯಾಖ್ಯೆಯಂತೆ ಸಮಾಜ ಜೀವಿಯಾದ ಮಾನವ, ತನ್ನ ಸಮಾಜದ ಬಗ್ಗೆಯೇ ಅಧ್ಯಯನ ಮತ್ತು ಕಾರ್ಯೋನ್ಮುಖವಾಗಬೇಕು, ಇಲ್ಲವಾದರೆ ಉತ್ತಮ ಸಮಾಜ ನಿರ್ಮಾಣ ಅಸಾಧ್ಯ ಎಂಬುದು ಸ್ಪಷ್ಟ.

ಸಮಾಜಶಾಸ್ತ್ರದ ಪ್ರಾಮುಖ್ಯತೆ
ಸಮಾಜಶಾಸ್ತ್ರವು ಈಗಾಗಲೇ ತಿಳಿಸಿದಂತೆ ಮಾನವನ ಸಾಮಾಜಿಕ ಜೀವನವನ್ನು ಅಧ್ಯಯನ ಮಾಡುವ ಶಾಸ್ತ್ರ. ಇದು ಸಾಮಾಜಿಕ ಮೂಲ ಘಟಕಗಳಾದ ಸಂಬಂಧಗಳು, ವ್ಯಕ್ತಿಯ ವ್ಯಕ್ತಿತ್ವ, ಸಮೂಹ, ಗ್ರಾಮ, ನಗರ, ಸಂಘ, ಸಂಸ್ಥೆಗಳ ಬಗ್ಗೆ ಹಾಗೂ ಕುಟುಂಬ, ಬಂಧುತ್ವ ಧರ್ಮ, ಆಸ್ತಿ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ವೈಜ್ಞಾನಿಕ, ಕಾನೂನಾತ್ಮಕ ಹಲವಾರು ವಿಷಯಗಳ ಕುರಿತು ಅಧ್ಯಯನದ ಜತೆಗೆ ಸಹಕಾರ, ಸ್ಪರ್ಧೆ, ಹೊಂದಾಣಿಕೆ, ಸ್ಪಾಂಗೀಕರಣ, ಸಂವಹನ, ಸಾಮಾಜಿಕ ಪರಿವರ್ತನೆ, ಸಾಮಾಜೀಕರಣ, ತತ್ವಬೋಧನೆ, ಸಾಮಾಜಿಕ ನಿಯಂತ್ರಣ, ಸಾಮಾಜಿಕ ಸಮಗ್ರತೆ, ಏಕತೆ ಕುರಿತು ಅಧ್ಯಯನ ಮಾಡುವಂಥದ್ದು.

Advertisement

ಅಷ್ಟಕ್ಕೂ ಸಮಾಜಶಾಸ್ತ್ರದ ಅಧ್ಯಯನದಿಂದ ನಮಗೇನು ಉಪಯೋಗವೆಂದು ಪ್ರಶ್ನಿಸುವವರಿಗೆ ಸಮಾಜಶಾಸ್ತ್ರಜ್ಞರಾದ ಪ್ರೊ ಗಿಡ್ಡಿಂಗ್ಸ್‌ರವರ ಮಾತೇ ಉತ್ತರ. “ಸಮಾಜದಲ್ಲಿ ಏನಾಗಬೇಕೆಂದು ಬಯಸುತ್ತೇವೆಯೋ ಅದಾಗುವ ಕ್ರಮವನ್ನು ಹೇಳಿಕೊಡುತ್ತದೆ’ , (Sociology tells us how to becomes, What we want to become)ಇದೇ ಇದರ ವಿಶೇಷ,.

ಸಮಾಜಶಾಸ್ತ್ರದ ಅಧ್ಯಯನ ಪ್ರತಿ ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆ, ಧರ್ಮ, ಸಂಪ್ರದಾಯಗಳು, ನೀತಿ-ನಿಯಮಗಳು, ಸಂಸ್ಥೆಗಳು, ಮೌಲ್ಯಗಳು, ಆದರ್ಶಗಳು, ಮುಂತಾದವುಗಳ ಬಗ್ಗೆ ವೈಜ್ಞಾನಿಕ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುವಲ್ಲಿ ಉಪಯುಕ್ತವಾಗುತ್ತದೆ. ವರ್ಗ, ಜಾತಿ, ಮತ, ದ್ವೇಷ ತಪ್ಪು ಕಲ್ಪನೆಗಳು, ಅಹಂಭಾವ ಪ್ರಜ್ಞೆ-ಎಲ್ಲವನ್ನೂ ಹೋಗಲಾಡಿಸುವಲ್ಲಿ ನೆರವಾಗುತ್ತದೆ. ಸಮಾಜದಲ್ಲಿರುವ ಬಡತನ, ನಿರುದ್ಯೋಗ ಭಯೋತ್ಪಾದನೆ, ಅಪ‌ರಾಧ, ಗಲಭೆ, ಭ್ರಷ್ಟಾಚಾರ, ಅಸ್ಪೃಶ್ಯತೆ, ಜಾತೀಯತೆ ಇತ್ಯಾದಿ ಕುರಿತು, ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ಹೀಗೆ ಹಲವಾರು ಸಮಸ್ಯೆಗಳ ಕುರಿತಾದ ವಸ್ತುನಿಷ್ಠಅಧ್ಯಯನಕ್ಕೆ ಸಹಾಯಕವಾಗಿದೆ.

ಅರಿಸ್ಟಾಟಲ್‌ರು ಹೇಳುತ್ತಾರೆ ಮಾನವ ಸಮಾಜವನ್ನು ಬಿಟ್ಟು ಬದುಕಲಾರ ಹಾಗೇನಾದರೂ ಬದುಕಿದರೆ ಆತ ದೇವರಾಗಿರುತ್ತಾನೆ ಇಲ್ಲವೇ ದೆವ್ವವಾಗಿರುತ್ತಾನೆ ಎಂಬ ಮಾತು ನಿಜ. ಸಮಾಜದ ಅಭಿವೃದ್ಧಿ, ದೇಶದ ಅಭಿವೃದ್ಧಿ, ವೈಯಕ್ತಿಕ ಅಭಿವೃದ್ಧಿಯಾಗಬೇಕಾದರೆ, ಪ್ರತೀ ಹಂತದಲ್ಲಿ ಸಮಾಜಶಾಸ್ತ್ರದ ಅಧ್ಯಯನ ಅಗತ್ಯ. ಆದ ಕಾರಣ, ವೃತ್ತಿಪರ ತರಬೇತಿ, ಕಲಾ ವಿಭಾಗದಲ್ಲಿ ಸಮಾಜ ಶಾಸ್ತ್ರ ಅಧ್ಯಯನಕ್ಕೆ ಲಭ್ಯ ಇರುವಂತೆ ಉಳಿದವರಿಗೂ ಆವಶ್ಯ.

ಸಾಮಾನ್ಯವಾಗಿ ಸಮಾಜಶಾಸ್ತ್ರ ಅಧ್ಯಯನ ಮಾಡಿದವರು ಹಲವು ಕ್ಷೇತ್ರಗಳಿಗೆ ಸೇರಿಕೊಳ್ಳಬಹುದು. ಸಮಾಜ ಕಾರ್ಯ, ಶಿಕ್ಷಣ, ಆರೈಕೆ ಸೇವೆ, ಸರಕಾರಿ ವಿವಿಧ ಉದ್ಯೋಗಗಳು, ಸಲಹಾಕಾರರು, ಸೇವಾ ಕಾರ್ಯ ಕ್ಷೇತ್ರದಲ್ಲಿ ಪಾಲ್ಗೊಳ್ಳಬಹುದು. ವಿವಿಧ ಸರ್ಕಾರದ ಯೋಜನೆಗಳನ್ನು ರೂಪಿಸುವಲ್ಲಿ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಸಮಾಜಶಾಸ್ತ್ರಜ್ಞರ ಸಲಹೆಗಳನ್ನು, ಅಭಿಪ್ರಾಯಗಳನ್ನು ಅವಶ್ಯಕವಾಗಿ ಪರಿಗಣಿಸಲಾಗುತ್ತಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಮಾಜಶಾಸ್ತ್ರದ ಪಾತ್ರ ಬಹುಮುಖ್ಯ. ಸಮಾಜಶಾಸ್ತ್ರವನ್ನು ಕೇವಲ ಭೋಧನಾ ವಿಷಯವಾಗಿ ಮಾತ್ರವಲ್ಲದೆ ಐಎಎಸ್‌, ಐಪಿಎಸ್‌, ಐಎಫ್ಎಸ್‌, ಕೆಎಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಅಧ್ಯಯನ ವಿಷಯವಾಗಿ ಆಯ್ಕೆ ಮಾಡಿಕೊಂಡು ಕಲಿಯಬಹುದು.

- ಗೀತಾ ಸಣ್ಣಕ್ಕಿ, ಸಮಾಜಶಾಸ್ತ್ರ ಉಪನ್ಯಾಸಕಿ 
ಅ.ರಾ.ಸ. ಪದವಿಪೂರ್ವ ಕಾಲೇಜು ಹರಿಹರಪುರ

Advertisement

Udayavani is now on Telegram. Click here to join our channel and stay updated with the latest news.

Next