Advertisement

ಸಮಾಜಕ್ಕೆ ಅನ್ನದಾಸೋಹ ಅಗತ್ಯ

06:51 AM May 15, 2019 | Lakshmi GovindaRaj |

ನೆಲಮಂಗಲ: ಸಮಾಜಕ್ಕೆ ಮೊದಲು ಅನ್ನದಾಸೋಹ ಮಾಡಬೇಕು. ನಂತರ ಸಮಾಜ ಸುಧಾರಣೆಗೆ ಮುಂದಾಗಬೇಕು. ತ್ರಿವಿಧ ದಾಸೋಹದ ಸಾಧನೆಯನ್ನು ನಮ್ಮ ಪರಮ ಪೂಜ್ಯ ಸ್ವಾಮೀಜಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತುಮಕೂರು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಇಸುವನಹಳ್ಳಿ ಗ್ರಾಮದಲ್ಲಿ ಶ್ರೀ ಬಸವಾಂಜನೇಯ ಸೇವಾ ಸಮಿತಿ ಹಮ್ಮಿಕೊಂಡಿದ್ದ ಶ್ರೀ ಈಶ್ವರ ದೇವಾಲಯದ ನವೀಕರಣ, ಗೋಪುರ ಉದ್ಘಾಟನೆ ಹಾಗೂ ಕಳಶ ಪ್ರತಿಷ್ಠಾಪನೆ ಮತ್ತು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಪುಣ್ಯಸ್ಮರಣೆ ಮತ್ತು ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಶರಣ ತತ್ವ ಪಾಲಿಸಿ: ಪ್ರಸ್ತುತ ಸಮಾಜದಲ್ಲಿ ನೈತಿಕತೆಯ ಬದುಕಿನಿಂದ ಹೊರಬಂದು, ಸಂಬಂಧಗಳನ್ನು ಕಡಿದು ಹಾಕಿ ಏಕಾಂಗಿಯಾಗಿ ಬದುಕಲು ಮಾನವರು ಹೊರಟಿದ್ದಾರೆ. ಆದರೆ, ಇದು ಮನುಕುಲದ ವಿನಾಶದ ಸಂಕೇತವಾಗಿದೆ. ನಮ್ಮ ತಾಯಿಯೇ ನಮಗೆ ಮಾರ್ಗದರ್ಶಕಿಯಾಗಿದ್ದಾಳೆ. ಆಕೆಯ ತ್ಯಾಗದ ಮನೋಭಾವವನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ವಚನ ಯುಗದ ಶಿವಶರಣ ಅನುಭವದ ಬದುಕು ಮತ್ತು ವಚನಗಳು ಇಂದು ಪ್ರಸ್ತುತವಾಗಿದೆ ಎಂದು ತಿಳಿಸಿದರು.

ಸ್ವಾರ್ಥ ಸಾಧನೆಗೆ ಆದ್ಯತೆ ಸಲ್ಲದು: ಆಧುನಿಕತೆಯ ಬದುಕಿನಲ್ಲಿ ಮನುಷ್ಯ ಆಡಂಬರದ ಜೀವನದ ಮೂಲಕ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾನೆ. ಬಹುತೇಕ ಇಂದು ಸೋಮಾರಿಗಳು ಹೆಚ್ಚಾಗುತ್ತಿದ್ದಾರೆ. ಇಂದು ಸಮಾಜದಲ್ಲಿ ಲಿಂಗಾಯತ ಧರ್ಮವನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಬಂದು ಧರ್ಮವನ್ನು ಒಡೆದರು ಎಂದು ಜನ ಮಾತನಾಡಿಕೊಳ್ಳುತ್ತಾರೆ.

ಆದರೆ, ಸತ್ಯಾಂಶವೆಂದರೆ, ಜೈನ ಧರ್ಮದ ಅನುಯಾಯಿಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಧರ್ಮನಿಷ್ಠರಾಗಿದ್ದಾರೆ. ನಮ್ಮ ಜನ ವೇದಿಕೆಯನ್ನು ಕೇವಲ ಹಣ ಗಳಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಅದರ ಬದಲಿಗೆ ಸಮಾಜಮುಖೀ ಸೇವೆಯಲ್ಲಿ ತೊಡಗಬೇಕು. ಅದರಿಂದ, ಜೀವನ ಸಾರ್ಥಕವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

Advertisement

ಉಪನ್ಯಾಸ: ಕಾರ್ಯಕ್ರಮದಲ್ಲಿ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಡಾ.ಎಂ.ಪೊನ್ನಾಂಬಲೇಶ್ವರಿ ಅವರು ವಚನ ಸಾಹಿತ್ಯ ಹಾಗೂ ಡಾ.ಶಿವಕುಮಾರ ಸ್ವಾಮೀಜಿ ಬದುಕು, ಬರಹದ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ್ವರ ಗದ್ದುಗೆ ಮಠದ ಶ್ರೀ ಮಹಾಂತ ಸ್ವಾಮಿಗಳು, ಶ್ರೀ ಹೊನ್ನಮ್ಮ ಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು,

-ಶ್ರೀ ಕಾಲುವೆ ಮಠದ ಶ್ರೀ ರುದ್ರಮುನಿ ಸ್ವಾಮಿಜಿ, ಕಂಚುಗಲ್‌ ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಜಂಗಮ ಮಠದ ಗಂಗಾಧರ ಸ್ವಾಮೀಜಿ, ಶ್ರೀ ಕಂಬಾಳು ಮಹಾ ಸಂಸ್ಥಾನ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಸ್ಥಳೀಯ ಮುಖಂಡರಾದ ಗುರುಸಿದ್ದಪ್ಪ, ಕಾಂತರಾಜು, ಪ್ರಭು, ಯೋಮಕೇಶ್‌, ಹೊನ್ನಸ್ವಾಮಯ್ಯ ಸೇರಿದಂತೆ ಶ್ರೀ ಬಸವಾಂಜನೇಯ ಸೇವಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next