ಗುಳೇದಗುಡ್ಡ: ಉಡುಪಿಯ ಪೇಜಾವರ ಶ್ರೀಗಳಿಗೂ ಗುಳೇದಗುಡ್ಡಕ್ಕೂ ಅವಿನಾಭಾವ ಸಂಬಂಧವಿದೆ. ಅನೇಕ ಜನರೊಂದಿಗೆ ಒಡನಾಟ ಹೊಂದಿದ್ದರು. ಆದರೆ, ಹರಿಪಾದ ಸೇರಿರುವುದು ಜನತೆಗೆ ನೋವು ತರಿಸಿದೆ.
ಪೇಜಾವರ ಶ್ರೀಗಳು ಗುಳೇದಗುಡ್ಡದ ರಾಘವೇಂದ್ರ ಮಠ, ಪರ್ವತಿಯ ಪರ್ವತೇಶ ದೇವಸ್ಥಾನ, ಲಕ್ಷ್ಮೀ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ಸೇರಿದಂತೆ ಸುಮಾರು 10-15 ಬಾರಿ ಗುಳೇದಗುಡ್ಡಕ್ಕೆ ಭೇಟಿ ನೀಡಿದ್ದರು.
ಬರಗಾಲದಲ್ಲಿ ಹಸಿವು ನೀಗಿಸಿದ್ದ ಶ್ರೀಗಳು: ಪಟ್ಟಣದಲ್ಲಿ 1972ರಲ್ಲಿ ಭೀಕರ ಬರಗಾಲ ಎದುರಾಗಿತ್ತು. ಆ ಸಮಯದಲ್ಲಿ ಆರ್ ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಮುರುಘಾಮಠದಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು. ಹುಬ್ಬಳ್ಳಿ ಮೂರುಸಾವಿರ ಮಠದ ಮಹಾಸ್ವಾಮಿಗಳು ಪಟ್ಟಣದಲ್ಲಿ ಜೋಳಿಗೆ ಹಿಡಿದು ಸಂಚರಿಸಿ 40 ಸಾವಿರ ರೂ. ಸಂಗ್ರಹಿಸಿದ್ದರು.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಪೇಜಾವರ ಶ್ರೀಗಳು ಗಂಜಿ ಕೇಂದ್ರ ಆರಂಭಿಸಿದ್ದರು, 1972ರಲ್ಲಿ 1400ಜನರಿಗೆ ಪ್ರತಿದಿನ ಊಟ ನೀಡುವ ಕೆಲಸ ಮಾಡಿದ್ದರು. ಪೇಜಾವರ ಶ್ರೀಗಳೊಂದಿಗೆ ಪಟ್ಟಣದ ಘನಶ್ಯಾಮದಾಸ್ ರಾಠಿ, ರಂಗಪ್ಪ ಶೇಬಿನಕಟ್ಟಿ, ಡೀಕಪ್ಪ ಕಂಠಿ, ಮಧುಸೂದನ ರಾಂದಡ, ರಾಮಬಿಲಾಸ ಧೂತ, ರಾಮಣ್ಣ ಮುರನಾಳ, ಕೂಡ್ಲೆಪ್ಪ ರಂಜಣಗಿ ಸೇರಿದಂತೆ ಅನೇಕರು ಗಂಜಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು.
ಕೃಷ್ಣ ಪೂಜೆ : ಪೇಜಾವರ ಶ್ರೀಗಳು ಪಟ್ಟಣಕ್ಕೆ ಬಂದರೇ ಪರಿಮಳಾ ಪರ್ವತಿಕರ ಅವರ ಮನೆಯಲ್ಲಿಯೇ ಪೂಜೆ ಸಲ್ಲಿಸುತ್ತಿದ್ದರು. ಜನವರಿಯಲ್ಲಿ ಲಕ್ಷ್ಮೀ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
10-15 ಬಾರಿ ಭೇಟಿ: ಗುಳೇದಗುಡ್ಡ ಪಟ್ಟಣಕ್ಕೆ ಸುಮಾರು 10-15 ಬಾರಿ ಬಂದಿದ್ದು, 1976ರಿಂದ ಇಲ್ಲಿಯವರೆಗೂ ಶ್ರೀಗಳಿಗೂ ಗುಳೇದಗುಡ್ಡಕ್ಕೂ ಅವಿನಾಭಾವ ಸಂಬಂಧವಿದೆ. 1976ರಲ್ಲಿ ಪರ್ವತಿಯ ಪರ್ವತೇಶ ದೇವಸ್ಥಾನ ಉದ್ಘಾಟನೆ, 1986ರಲ್ಲಿ ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ದ್ವಿತೀಯ ಸಮ್ಮೇಳನದಲ್ಲಿಯೂ ಭಾಗವಹಿಸಿದ್ದರು.
2009, 2014ರಲ್ಲಿ ಪರ್ಯಾಯ ನಿಮಿತ್ತ ಆಗಮಿಸಿದ್ದರು. 2015ರಲ್ಲಿ ಪರ್ವತೇಶ ದೇವಸ್ಥಾನದ ನವಗ್ರಹ ದೇವರ ಪ್ರತಿಷ್ಠಾಪನೆ, ಗುರುವಂದನೆ ಸಮಾರಂಭಕ್ಕೆ ಬಂದಿದ್ದರು.
-ಮಲ್ಲಿಕಾರ್ಜುನ ಕಲಕೇರಿ