ನಟ ಶಿವರಾಜ ಕುಮಾರ್ ಅಭಿನಯದ ಮತ್ತೂಂದು ಬಹು ನಿರೀಕ್ಷಿತ ಚಿತ್ರ “ಕವಚ’ ತೆರೆಗೆ ಬರೋದಕ್ಕೆ ಮುಹೂರ್ತ ನಿಗಧಿಯಾಗಿದೆ. ಅಂದಹಾಗೆ, “ಕವಚ’ ಚಿತ್ರ ಇದೇ ಏಪ್ರಿಲ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ.
ಇನ್ನು ಇದರ ನಡುವೆಯೇ ನಟ ಶಿವರಾಜ ಕುಮಾರ್ ಅಭಿಮಾನಿಗಳು “ಕವಚ’ ಚಿತ್ರದ ಬಿಡುಗಡೆಯ ದಿನದಂದು ಒಂದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕೆ ಕಾರಣ “ಕವಚ’ ಚಿತ್ರದ ಕಥಾಹಂದರ ಮತ್ತು ಚಿತ್ರದಲ್ಲಿ ಶಿವರಾಜ ಕುಮಾರ್ ನಿರ್ವಹಿಸುವ ಪಾತ್ರ.
ಹೌದು, “ಕವಚ’ ಚಿತ್ರದಲ್ಲಿ ಶಿವರಾಜ ಕುಮಾರ್ ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಂಧರ ಬದುಕು, ಅವರ ಮುಂದಿರುವ ಸವಾಲುಗಳನ್ನು ತೆರೆಮೇಲೆ ತರಲಾಗುತ್ತಿದೆಯಂತೆ.
ಅಲ್ಲದೆ ಮೊದಲಿನಿಂದಲೂ ಶಿವಣ್ಣ ಸೇರಿದಂತೆ ರಾಜಕುಮಾರ್ ಕುಟುಂಬದ ಸದಸ್ಯರು ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತ, ನೇತ್ರದಾನವನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಹೀಗಾಗಿ, ಶಿವಣ್ಣ ಅವರ “ಕವಚ’ ಚಿತ್ರದ ಬಿಡುಗಡೆಯ ದಿನದಂದು ಅವರ “ಶಿವಸೈನ್ಯ’ ಅಭಿಮಾನಿಗಳ ಸಂಘದ ಸದಸ್ಯರು ಉಚಿತ ನೇತ್ರ ತಪಾಸಣೆ, ನೇತ್ರ ಚಿಕಿತ್ಸೆ, ನೇತ್ರದಾನ ಶಿಬಿರವನ್ನು ಆಯೋಜಿಸಿದ್ದಾರೆ.
“ಕವಚ’ ಚಿತ್ರ ಬಿಡುಗಡೆಯಾಗುತ್ತಿರುವ ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ವರ್ಧಮಾನ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಈ ಸಾಮಾಜಿಕ ಕಾರ್ಯ ನಡೆಯಲಿದೆ.
ಇನ್ನು ಅಭಿಮಾನಿಗಳ ಈ ಸಾಮಾಜಿಕ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಶಿವರಾಜ ಕುಮಾರ್, “ಏಪ್ರಿಲ್ 5ರಂದು “ಕವಚ’ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ನಾನು ಅಂಧನ ಪಾತ್ರ ಮಾಡಿದ್ದೇನೆ. ಅಂಧತ್ವದ ಬಗ್ಗೆ ಸಿಂಬಾಲಿಕ್ ಆಗಿ ರೆಪ್ರಸೆಂಟ್ ಮಾಡ್ತಿರೋ ಸಿನಿಮಾ ಇದು.
ಅಂದು ಶಿವಸೈನ್ಯ ನೇತ್ರದಾನ, ನೇತ್ರಚಿಕಿತ್ಸೆ, ಉಚಿತ ನೇತ್ರ ತಪಾಸಣೆ ಹಮ್ಮಿಕೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ. ನಮ್ಮ ತಂದೆ ಕೂಡ ನೇತ್ರದಾನ ಮಾಡಿದ್ರು. ನೇತ್ರದಾನ ಮಹಾದಾನ. ಇದು ನಿಜಕ್ಕೂ ಖುಷಿ ವಿಷಯ. ಎಲ್ಲರೂ ನೇತ್ರದಾನಕ್ಕೆ ಮುಂದಾಗಿ’ ಎಂದು ವಿಡಿಯೋ ತುಣುಕೊಂದರ ಮೂಲಕ ಮನವಿ ಮಾಡಿದ್ದಾರೆ.