ಕೊಪ್ಪಳ: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಜಾ ದಿನಗಳು ಮುಗಿದು ಶಾಲಾ, ಕಾಲೇಜು ಆರಂಭವಾಗುತ್ತಿವೆ. ಇತ್ತ ಸಮಾಜ ಕಲ್ಯಾಣ ಇಲಾಖೆಯು ಎಸ್‌ಸಿ, ಎಸ್‌ಟಿ ವಸತಿ ನಿಲಯಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು, ಆರಂಭದ ದಿನದಿಂದಲೂ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು ಪಾಲಕರಲ್ಲಿ ಆತಂಕ ಮೂಡಿಸುತ್ತಿದೆ.
ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಪ್ರತಿ ವರ್ಷದಂತೆ ಸಮಾಜ ಕಲ್ಯಾಣ ಇಲಾಖೆ ರಾಜ್ಯಾದ್ಯಂತ ಇರುವ ಎಸ್‌ಸಿ ಮತ್ತು ಎಸ್‌ಟಿ ವಸತಿ ನಿಲಯಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಪ್ರಕ್ರಿಯೆ ಆರಂಭಿಸಿದೆ. ಆದರೆ ವಿದ್ಯಾರ್ಥಿಗಳ ಒಂದೇ ಒಂದು ಅರ್ಜಿಯೂ ಅಪಲೋಡ್ ಆಗುತ್ತಿಲ್ಲ. ಇಲಾಖೆ ವೆಬ್‌ಸೈಟ್ ಜೊತೆಗೆ ಅರ್ಜಿ ಪ್ರವೇಶದ ತಾಣವೂ ತಾಂತ್ರಿಕ ತೊಂದರೆ ತೋರುತ್ತಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ನಗರ ಪ್ರದೇಶದಲ್ಲಿ ಇಡೀ ದಿನ ನೆಟ್ ಸೆಂಟರ್, ಆನ್‌ಲೈನ್ ಸರ್ವಿಸ್ ಸೆಂಟರ್‌ನಲ್ಲಿ ನಿಂತು ಅರ್ಜಿ ಹಾಕಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇಂಟರ್‌ನೆಟ್ ಸೆಂಟರ್‌ನಲ್ಲಿ ಇಡೀ ದಿನ ನಿಂತು ಪಾಲಕರು ಸುಸ್ತಾಗುತ್ತಿದ್ದಾರೆ. ವಸತಿ ನಿಲಯದಲ್ಲಿ ಮಕ್ಕಳಿಗೆ ಶಿಕ್ಷಣ ದೊರೆತರೆ ಅವರ ಭವಿಷ್ಯ ಮುಂದೆ ಉತ್ತಮವಾಗಲಿದೆ. ಊಟ, ವಸತಿ ದೊರೆತರೆ ನಮಗೆ ತುಂಬ ಅನುಕೂಲವಾಗಲಿದೆ ಎಂದು ಪಾಲಕರು ಅಲವತ್ತುಕೊಳ್ಳುತ್ತಿದ್ದಾರೆ.
ಜೂ.15 ಕಡೆ ದಿನ:ವಸತಿ ನಿಲಯಗಳಿಗೆ ಜೂ.15ರಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲಾಖೆಯು ಕೊನೆ ದಿನ ನಿಗದಿ ಮಾಡಿದೆ. ಇದರಿಂದ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅರ್ಜಿ ಸಲ್ಲಿಕೆಗೆ 13 ದಿನ ಮಾತ್ರ ಬಾಕಿಯಿವೆ. ಪದೇ ಪದೆ ಸರ್ವರ್ ಬ್ಯೂಸಿ ತೋರಿಸುತ್ತಿರುವುದರಿಂದ ಮಕ್ಕಳಿಗೆ ಪ್ರವೇಶ ಸಿಗುವುದೋ ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ. ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿ ಕೊಡಬೇಕು. ಇಲ್ಲವೇ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಣೆ ಮಾಡಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ರಾಜ್ಯಾದ್ಯಂತ ಸಮಸ್ಯೆ: ಇದು ಕೇವಲ ಕೊಪ್ಪಳ ಜಿಲ್ಲೆಯಲ್ಲಿನ ಒಂದೇ ಸಮಸ್ಯೆಯಲ್ಲ. ರಾಜ್ಯಾದ್ಯಂತ ಇದೇ ಸಮಸ್ಯೆ ಎದುರಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು, ಪಾಲಕರು ನಮಗೆ ಕರೆ ಮಾಡಿ ಸರ್ವರ್ ಬ್ಯೂಸಿ ಇರುವುದಾಗಿ ತಿಳಿಸುತ್ತಿದ್ದಾರೆ. ತಾಂತ್ರಿಕ ಸಮಸ್ಯೆ ನಮಗೂ ಗೊತ್ತಾಗುತ್ತಿಲ್ಲ. ನಾವು ಸಹಿತ ರಾಜ್ಯಮಟ್ಟದ ಅಧಿಕಾರಿಗಳಿಗೆ ವಿಡಿಯೋ ಕಾನ್ಫ್ರೆನ್ಸ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದೇವೆ. ಸಮಸ್ಯೆ ಬಗೆಹರಿಸುವ ಕುರಿತು ಅವರು ಹೇಳುತ್ತಿದ್ದಾರೆ. ಎನ್‌ಐಸಿ ಈ ಸರ್ವರ್ ನಿರ್ವಹಣೆ ಮಾಡುತ್ತಿದ್ದು, ಅದು ಯಾವಾಗ ಬಗೆಹರಿಯಲಿದೆ ಎನ್ನುವುದನ್ನು ನಾವು ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ ಅಧಿಕಾರಿಗಳು.
•ದತ್ತು ಕಮ್ಮಾರ