ಬೆಳಗಾವಿ: ದೇಶದಲ್ಲಿ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸಿದ, ಸಾಮಾಜಿಕ ಹಾಗೂ ಸಾಹಿತ್ಯಿಕ ಚಿಂತನೆಗಳನ್ನು ಬಿತ್ತಿದ ಮಹಾನುಭಾವರ ಉತ್ತರಾಧಿಕಾರಿಗಳು ಕನ್ನಡಿಗರು ಎಂದು ರಾಜ್ಯ ನಿವೃತ್ತ ಪೊಲೀಸ್ ನಿರ್ದೇಶಕ ಶಂಕರ ಬಿದರಿ ಹೇಳಿದರು.
ನಗರದ ಕೆಎಲ್‌ಇ ಡಾ| ಎಂ.ಎಸ್. ಶೇಷಗಿರಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಬಳಗ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯದ ವಿಸ್ತೀರ್ಣ ಶ್ರೀಲಂಕಾ, ಇಸ್ರೇಲ್ ದೇಶಗಳಿಗಿಂತ ದೊಡ್ಡದಾಗಿದ್ದರೂ ರಾಜ್ಯದ ಸಮಗ್ರ, ಸಮಾನ, ಅಭಿವೃದ್ಧಿಯಾಗಿಲ್ಲ ಇದಕ್ಕೆ ಕಾರಣ ನಾಯಕರಲ್ಲಿ ಇರುವ ಇಚ್ಛಾಶಕ್ತಿ, ದೂರದೃಷ್ಟಿತ್ವದ ಕೊರತೆ. ರಾಜ್ಯದಲ್ಲಿ ಇರುವ ಸಂಪನ್ಮೂಲಗಳ ಸದ್ಭಳಕೆ ಮಾಡಿಕೊಳ್ಳುವಲ್ಲಿ ನಮ್ಮ ನಾಯಕರು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಸೂಕ್ತ ವಿಕೇಂದ್ರೀಕರಣವಾಗಬೇಕು ಎಂದರು.
ರಾಜ್ಯವನ್ನು ಸಾಮಾಜಿಕ, ಸಾಹಿತ್ಯಿಕ ಹಾಗೂ ಅಭಿವೃದ್ಧಿ ಪಥದಲ್ಲಿ ಕೊಂಡೊಯುವ ಶಕ್ತಿ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಲ್ಲಿ ಇದೆ ಎಂದು ಹೇಳಿದರು. ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಮುಖ್ಯಸ್ಥ ಎಸ್.ಸಿ. ಮೆಟಗುಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತರ ಕರ್ನಾಟಕದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಆಗಿ ಸೇವೆ ಸಲ್ಲಿಸಿದ ಶಂಕರ ಬಿದರಿ ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಸಮಾಜಮುಖೀ ಕಾರ್ಯಗಳನ್ನು ಪ್ರಶಂಸಿಸಿದರು. ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕನ್ನಡ ಬಳಗದ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಪ್ರಾಚಾರ್ಯ ಡಾ| ಬಸವರಾಜ ಕಟಗೇರಿ ಮಾತನಾಡಿ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದವನ್ನು ಸ್ಮರಿಸಿದ ವಿದ್ಯಾರ್ಥಿಗಳು ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಹನಾ ಹಾಗೂ ಸೃಷ್ಟಿನಾಡಗೀತೆ ಹಾಡಿದರು. ಈರಣ್ಣ ಆನಿಕಿವಿ ವಂದಿಸಿದರು. ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಹಾಗೂ ಸಂಗೀತ ನಿರ್ದೇಶಕ ಸುನೀಲ ಕೋಶಿ ಹಾಗೂ ತಂಡದವರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.