Advertisement

ಸಂಘದಿಂದ ಸಮಾಜ ಸೇವೆ: ಸೇವೆ ಲೋಕ

09:48 PM Jul 22, 2019 | mahesh |

ಬೆಂಗಳೂರಿನಿಂದ 200 ಕಿ.ಮೀ ದೂರದ ಯಾವುದೇ ಸರ್ಕಾರಿ ಶಾಲಾ ಕಾಲೇಜು, ವೃದ್ಧಾಶ್ರಮಗಳಲ್ಲಿ ಸ್ನೇಹದ ಗುರುತು ಕಂಡರೆ ಅದು ಈ ಸ್ನೇಹಿತರ ಹೆಜ್ಜೆಯೇ. ಸ್ನೇಹ ಸಹಾಯ ಸಂಘ, ಸ್ನೇಹ ಲೋಕ ಅಂತ ಎರಡು ಹೆಸರಲ್ಲಿ ಮಾಡುವುದು ಸಮಾಜ ಸೇವೆಯೇ. ಈ ತಂಡದಲ್ಲಿ 70ಯುವಕರ ದಂಡಿದೆ. ಅದರಲ್ಲಿ ಎಂಜಿನಿಯರ್‌ಗಳು, ಅಕೌಂಟೆಂಟ್‌, ಡಾಕ್ಟರ್‌ಗಳು, ಐಟಿ ಕಂಪನಿ ಉದ್ಯೋಗಿಗಳು ಇದ್ದಾರೆ.

Advertisement

ಸೇರುವುದು ಕಣ್ಣೀರು ಒರೆಸಲು ಮಾತ್ರ. ಲೋಕ ಮತ್ತು ಸಂಘಕ್ಕೆ ಒಂದು ದಶಕ ಕಳೆದಿದೆ. ನೂರಾರು ಶಾಲೆಗಳು, ಆಶ್ರಮಗಳಿಗೆ ಹೋಗಿ- ನಿಮಗೆ ಏನು ಬೇಕು, ಯಾವ ಯಾವ ವಸ್ತುಗಳ ಅಗತ್ಯವಿದೆ ಎಂದೆಲ್ಲ ಕೇಳಿರುವ ಈ ತಂಡ, ಪುಸ್ತಕ, ಪೆನ್ನು ಪೆನ್ಸಿಲ್‌, ಔಷಧಗಳನ್ನು ನೂರಾರು ಮಂದಿಗೆ ಕೊಟ್ಟು ಬಂದಿದೆ. ಯಾವತ್ತೂ, ನಾನು ಕೊಟ್ಟಿದ್ದೀನಿ ಅಂತ ಯಾರೂ ಹೇಳಿಕೊಂಡಿಲ್ಲ. ಬಲಗೈ ಕೊಟ್ಟಿದ್ದು, ಎಡಗೈಗೂ ಗೊತ್ತಾಗಬಾರದು ಅನ್ನೋ ನಿಯಮ.

ಇದನ್ನು ಶುರು ಮಾಡಿದ್ದು ಏಕೆ?
ಈ ಪ್ರಶ್ನೆಗೆ ಇದರ ಎರಡೂ ಸಂಘಗಳ ರುವಾರಿ ರಮೇಶ್‌ ಹೀಗೆ ಹೇಳುತ್ತಾರೆ; ನಾನು ಮೂಲತಃ ಕೊಳ್ಳೇಗಾಲದ ಹಳ್ಳಿಯಿಂದ, ಅದರಲ್ಲೂ ಬಡತನದ ಜೊತೆಗೆ ಬೆಳೆದು ಬಂದವನು. ಶಾಲೆಯಲ್ಲಿ ಓದುವಾಗ ಪುಸ್ತಕಕ್ಕೂ ಹಣ ವಿರಲಿಲ್ಲ. ಒಂದೇ ಪುಸ್ತಕದಲ್ಲಿ ಎಲ್ಲಾ ವಿಷಯ ಬರೆದುಕೊಳ್ಳುತ್ತಿದ್ದೆ. ಹೊಸ ಪುಸ್ತಕಕೊಂಡರೆ ಅದೇ ದೊಡ್ಡ ಸಂಗತಿ. ಕೆಲಸಕ್ಕೆ ಅಂತ ಬೆಂಗಳೂರಿಗೆ ಬಂದ ಮೇಲೆ – ಹಳೇ ನೆನಪುಗಳು ಕಾಡಿ, ನಮ್ಮಂತೆ ಬೇರೆಯವರು ನರಳಬಾರದು ಅಂತ ಈ ರೀತಿ ಸಮಾಜ ಸೇವೆ ಶುರು ಮಾಡಿದೆ. ನನ್ನ ಬದುಕೇ ಇದಕ್ಕೆ ಪ್ರೇರಣೆ’ .

ರಮೇಶ್‌ ಅವರ ಮೊದಲ ಸೇವೆ ಶುರುವಾದ್ದು ಬುಲ್‌ಟೆಂಪಲ್‌ ರಸ್ತೆಯ ಶಿಶು ಮಂದಿರದಿಂದ. ನಾಲ್ಕು ಜನ ಗೆಳೆಯರಿಂದ. ಅಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ, ಕೈಯಿಂದ ದುಡ್ಡು ಹಾಕಿ ಒಂದಷ್ಟು ಗಿಫ್ಟ್ಗಳನ್ನು ಕೊಟ್ಟು ಬಂದಾಗ ಮನದಲ್ಲಿ ಆನಂದ, ಹೃದಯದ ಭಾರ ಇಳಿದಂತಾಯಿತು. ಇದನ್ನು ಏಕೆ ಮುಂದುವರಿಸಬಾರದು ಅಂತ ಆಕೂಟ್‌ನಲ್ಲಿ ಗ್ರೂಪ್‌ ಮಾಡಿ, ನಾವು ಇಂತಿಂಥ ಕೆಲಸ ಮಾಡೋಣ ಅಂತಿದ್ದೀವಿ. ಆಸಕ್ತರು ನಮ್ಮೊಂದಿಗೆ ಕೈ ಜೋಡಿಸಬಹುದು ಅಂದಾಗ ಒಬ್ಬೊಬ್ಬರೇ ಸೇರಿಕೊಂಡರು. ಈಗ ನೋಡಿದರೆ, 70 ಜನರ ದೊಡ್ಡ ಗುಂಪಾಗಿದೆ. ಇಂಥ ಕೆಲಸಕ್ಕೆ ಇಷ್ಟು ಖರ್ಚಾಗುತ್ತೆ ಅಂತ ಮೆಸೇಜ್‌ ಹಾಕಿದರೆ ಎಲ್ಲರೂ ಸೇವೆಗೆ ಸಿದ್ಧ.

ಆಯ್ಕೆ ಹೇಗೆ?
ಮೊದಲು ಸದಸ್ಯರಿಗೆ ಎಟುಕುವ, ತಿಳಿದಿರುವ ತಮ್ಮೂರಿನ ಅಕ್ಕಪಕ್ಕದ ಶಾಲೆ, ವೃದ್ಧಾಶ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಈ ಶಾಲೆಗೆ ಬಣ್ಣ ಇಲ್ಲ, ಕೂರುವುದಕ್ಕೆ ಬೆಂಚ್‌ ಇಲ್ಲ. ನಮ್ಮೂರಿನ ಪಕ್ಕದ ವೃದ್ಧಾಶ್ರಮದಲ್ಲಿರೋರಿಗೆ ಔಷಧ ಬೇಕಂತೆ ಅಂತೆಲ್ಲ ವಿಚಾರ ಬಂದಾಗ. ಖುದ್ದು, ಒಂದಷ್ಟು ಜನ ಹೋಗಿ, ಅಲ್ಲಿನ ಸಮಸ್ಯೆಗಳನ್ನು ಕಲೆ ಹಾಕುತ್ತಾರೆ. ಪರಿಹಾರದ ಪಟ್ಟಿಯನ್ನು ತಯಾರಿಸಿ, ಖರ್ಚನ್ನು ಎಸ್ಟಿಮೇಟ್‌ ಮಾಡಿ, ವಿಷಯವನ್ನು ಫೇಸ್‌ಬುಕ್‌ ಪೇಜಿನಲ್ಲಿ ಪ್ರಕಟಿಸಿ ಸಹಾಯಾಕ್ಕಾಗಿ ಮನವಿ ಮಾಡುತ್ತಾರೆ. ಹಣ ಜಮೆ ಮಾಡಲು ಪ್ರತ್ಯೇಕ ಅಕೌಂಟ್‌ ಇದೆ. ಹೀಗೆ ಒಟ್ಟುಗೂಡಿದ ಹಣವನ್ನು ಕಡೆಗೊಮ್ಮೆ ತೆಗೆದು, ಒಂದು ದಿನ ಎಲ್ಲರು ಸೇರಿ, ಅಲ್ಲಿಗೆ ಹೋಗಿ ಅಗತ್ಯ ಸಹಾಯ ಮಾಡಿ ಬರುವುದು “ಸಮಾಜ ಮೋಹಿ’ಗಳ ರೂಢಿ.

Advertisement

“ನಾವು ಯಾವತ್ತೂ ಕಿತ್ತಾಡಿದ್ದು ಇಲ್ಲ. ಏಕೆಂದರೆ, ಎಲ್ಲರ ಉದ್ದೇಶ ಸೇವೆ. ಜೊತೆಗೆ, ನಾವು ಟ್ರಸ್ಟ್‌ ಅಂತ ಮಾಡಿಲ್ಲ. ಅದೂ ಉದ್ದೇಶ ಪೂರ್ವಕವಾಗಿ. ಟ್ರಸ್ಟ್‌ ಮಾಡಿದರೆ ಅಧ್ಯಕ್ಷ, ಉಪಾಧ್ಯಕ್ಷ ಹೀಗೆಲ್ಲ ಹುದ್ದೆ ಇರಬೇಕಾಗುತ್ತದೆ. ಹುದ್ದೆ ಇದ್ದರೆ ಆಸೆ, ಅಧಿಕಾರ ಅಂತೆಲ್ಲ ಬಂದು, ವೈಮನಸ್ಯ ಉಂಟಾಗಬಹುದು. ಟ್ರಸ್ಟೇ ಇಲ್ಲದಿರುವುದರಿಂದ ಯಾವ ಸಮಸ್ಯೆ ಕೂಡ ಇಲ್ಲ’ ಅಂತ ಯಶಸ್ಸಿನ ಒಳಗುಟ್ಟನ್ನು ಬಿಚ್ಚಿಡುತ್ತಾರೆ ರಮೇಶ್‌.

ಇಲ್ಲಿನ ಪ್ರತಿ ಸೇವೆ ಪಾರದರ್ಶಕ. ಹಣ ಕೊಟ್ಟವರೂ, ಕೊಡದೇ ಇದ್ದವರೂ ಒಂದೇ ತೂಕ. ಪ್ರತಿ ಸಲ ಎಸ್ಟಿಮೇಟ್‌ ಮೊತ್ತ ಎಷ್ಟು, ಅದಕ್ಕೆ ಯಾರಾರು ಎಷ್ಟೆಷ್ಟು ಸಹಾಯ ಮಾಡಿದರು ಅನ್ನೋದರ ಪಟ್ಟಿಯನ್ನು ಕಾರ್ಯಕ್ರಮಕ್ಕೆ ಮೊದಲೇ ಪ್ರಕಟಿಸುತ್ತಾರೆ. ಇದಾದ ನಂತರ, ಖರ್ಚು ಎಷ್ಟಾಗಿದೆ ಅನ್ನೋದರ ಪಟ್ಟಿಯನ್ನು ಆ ನಂತರ ಬಿಲ್‌ ಸಮೇತ್‌ ಸದಸ್ಯರ ಗಮನಕ್ಕೆ ತರುತ್ತಾರೆ. ಹೀಗಾಗಿ, ಯಾರಲ್ಲೂ ಗೊಂದಲ, ಗೋಜು, ಅನುಮಾನಗಳು ಇಲ್ಲವಂತೆ. ಮುಖ್ಯವಾಗಿ, ಸಾಮಗ್ರಿಗಳನ್ನು ತೆಗೆದು ಕೊಂಡು ಹೋಗಲು ಸಾರಿಗೆ ವೆಚ್ಚ, ಆದಿನ ಬಂದ ಸದಸ್ಯರ ಊಟ ತಿಂಡಿ ವೆಚ್ಚವನ್ನು ಎಲ್ಲರೂ ಸೇರಿ ಭರಿಸುತ್ತಾರೆ.

ಸಂಘದಿಂದ ಈಗಾಗಲೇ ಕೆಂಗೇರಿ, ಬಿಡದಿ, ತುಮಕೂರು ಸೇರಿದಂತೆ 10 ಅನಾಥಾಶ್ರಮಗಳಿಗೆ ವಾಟರ್‌ ಫಿಲ್ಟರ್‌, ಅಡುಗೆ ಪಾತ್ರೆಗಳು, ಯುಪಿಎಸ್‌ ಸೌಲಭ್ಯ, ನೋಟ್‌ ಪುಸ್ತಕಗಳು, ಸ್ಕೂಲ್‌ ಬ್ಯಾಗ್‌ಗಳು, ಅಡುಗೆ ಸಾಮಗ್ರಿಗಳನ್ನು ನೀಡಿದ್ದಾರಂತೆ.

ವೃದ್ಧಾಶ್ರಮಗಳಿಗೆ ಬೇಕಾದ ಬೆಡ್‌ ಶೀಟ್‌ಗಳು, ಓದುವ ಹವ್ಯಾಸವುಳ್ಳ ವೃದ್ದರಿಗೆ ಕಥೆ, ಕಾದಂಬರಿ, ಪುಸ್ತಕಗಳು, ಜೊತೆಗೆ ವೃದ್ಧರಿಗೆ ಸರಳ ಪ್ರಶ್ನೆಗಳ ಕ್ವಿ ಜ್‌ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅದರಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನಗಳನ್ನು ಕೊಡುವುದಿದೆಯಂತೆ. ಇದೆಲ್ಲವನ್ನೂ ಸ್ನೇಹ ಲೋಕ ಗ್ರೂಪಿನಿಂ ದ ಮಾಡುತ್ತಾರೆ.

ಸ್ನೇಹ ಸಹಾಯ ಸಂಘದಿಂದ ಮಂಡ್ಯ, ಮಳವಳ್ಳಿ, ತುಮಕೂರು ಸೇರಿದಂತೆ, ಹಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್‌ ಪುಸ್ತಕ, ಪಠ್ಯ ಪುಸ್ತಕ ಹಾಗು ಪೆನ್ನು, ಪೆನ್ಸಿಲ್‌ಗ‌ಳನ್ನು ನೀಡಿದ್ದು, ಜೊತೆಗೆ ಮಕ್ಕಳಿಗೆ ಪಠ್ಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯಗಳನ್ನು ವಿಡಿಯೋನಲ್ಲಿ ನೋಡಿ ಕಲಿಯುವಂತೆ ಎಜುಸ್ಯಾಟ್‌ ಟಿವಿ ಗಳನ್ನು ಕೊಡಿಸಿದ್ದಾರೆ. ಯಾವುದೇ ಶಾಲೆಗಳಿಗೆ ಸೌಲಭ್ಯ ಒದಗಿಸುವ ಮುನ್ನ ಆಯಾ ಶಿಕ್ಷಕರಿಂದ ಫೀಡ್‌ ಬ್ಯಾಕ್‌ ಪಡೆದುಕೊಂಡು ನಂತರ ಗ್ರೂಪಿನಲ್ಲಿ ಚರ್ಚೆ ಮುಂದುವರೆಸುತ್ತಾರಂತೆ.

ಸಂಘಕ್ಕೆ 10 ವರ್ಷದ ಸಂಭ್ರಮ:
ಸ್ನೇಹ ಲೋಕ ಸಂಘಕ್ಕೆ ಹತ್ತು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಹತ್ತು ವರ್ಷಗಳಲ್ಲಿ ಬೇಟಿ ನೀಡಿದ ಎಲ್ಲಾ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ಜನರನ್ನು ಒಟ್ಟು ಗೂಡಿಸಿ ಅನಾಥಾಶ್ರಮದ ಮಕ್ಕಳಿಂದ ಗ್ರೂಪ್‌ ಡ್ಯಾನ್ಸ್‌ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಮೊದಲು ಗೆದ್ದವರಿಗೆ 10,000 ಸಾವಿರ ನಗದು ಬಹುಮಾನ, ಎರಡನೆಯವರಿಗೆ 7000 ಸಾವಿರ ಬಹುಮಾನ ನೀಡುತ್ತೇವೆ ಎನ್ನುತ್ತಾರೆ ಸಂಘದ ರಮೇಶ್‌. ಈ ರೀತಿಯ ಸಮಾಜ ಸೇವೆ ಮಾಡುವ ಸ್ನೇಹ ಲೋಕ ಮತ್ತು ಸ್ನೇಹ ಸಹಾಯ ಸಂಘಗಳಿಗೆ ಯಾವುದೇ ಎನ್‌ಜಿಓ ಅಥವಾ ಸರ್ಕಾರಗಳಿಂದ ಹಣ ಬರುವುದಿಲ್ಲ. ಸಾರ್ವಜನಿಕರು ನೀಡಿದ ಹಣ ಮತ್ತು ಸಂಘದ ಸದಸ್ಯರು ಕೊಡುವ ಹಣದಿಂದಲೇ ಈ ಮಾದರಿ ಸಮಾಜ ಸೇವೆಯ ಕೆಲಸ ನಡೆದುಕೊಂಡು ಬಂದಿದೆ.

ಯೋಗೇಶ್‌ ಮಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next