ಕುಂದಾಪುರ: ಮಾದಕ ವ್ಯಸನಕ್ಕೆ ಯುವ ಜನತೆ ಹೆಚ್ಚು ಬಲಿಯಾಗುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು, ಔಷಧಿ ವ್ಯಾಪಾರಿಗಳ ಸಂಘ ಕಾರ್ಯಪ್ರವೃತ್ತರಾಗಬೇಕಿದೆ. ಇದು ನಮ್ಮ ಕೆಲಸ ಮಾತ್ರವಲ್ಲ ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂದು ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಪಿ.ವಿ. ಭಂಡಾರಿ ಹೇಳಿದರು.
ಸೋಮವಾರ ಇಲ್ಲಿನ ಶೆರೋನ್ ಹೊಟೇಲ್ನ ಸಭಾಭವನದಲ್ಲಿ ವಿಶ್ವ ಮಾದಕದ್ರವ್ಯ ವ್ಯಸನ ವಿರೋಧಿ ದಿನದ ಪ್ರಯುಕ್ತ ಸರಕಾರದ ಔಷಧ ನಿಯಂತ್ರಣ ಇಲಾಖೆಯ ಉಡುಪಿ ವೃತ್ತ, ಉಡುಪಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಮತ್ತು ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಔಷಧ ವ್ಯಾಪಾರಸ್ಥರಿಗೆ ಮಾದಕದ್ರವ್ಯ ವ್ಯಸನ, ದುಷ್ಪರಿಣಾಮ ಮತ್ತು ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತಂಬಾಕು, ಆಲ್ಕೋಹಾಲ್, ಗಾಂಜಾ ಹೆಚ್ಚಾಗಿ ಆಕರ್ಷಿಸುವ ವ್ಯಸನವಾಗಿದ್ದು, ನಂತರದ ಸ್ಥಾನದಲ್ಲಿ ಔಷಧಿಯಾದ ಬೆನ್ಜೋಡೈಯೆಸ್ಟ್ ಹಾಗೂ ಓಸಿಯೋಡ್ಸ್ ಎನ್ನುವ ಮಾತ್ರೆಗಳಿದ್ದು, ಇದು ಆತಂಕಕಾರಿ ಬೆಳವಣಿಗೆ. ಇದನ್ನು ತಡೆಗಟ್ಟುವಲ್ಲಿ ನಮ್ಮೆಲ್ಲರ ಪಾತ್ರ ಪ್ರಮುಖವಾದುದು ಎಂದವರು ತಿಳಿಸಿದರು.
ಉಡುಪಿ ವೃತ್ತದ ಸಹಾಯಕ ಔಷಧ ನಿಯಂತ್ರಕ ಕೆ.ವಿ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ| ಮಾನಸ್, ಉಡುಪಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಹಲ್ಸನಾಡು ಸದಾಶಿವ ರಾವ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಾಗೇಶ್ ಸೋಮಯಾಜಿ ಸ್ವಾಗತಿಸಿದರು. ನ್ಯೂ ಮೆಡಿಕಲ್ ಸೆಂಟರ್‌ನ ದಿನಕರ ಶೆಟ್ಟಿ ನಿರ್ವಹಿಸಿದರು.