Advertisement

“ಕೋವಿಡ್”ಗೆದ್ದ ಶಾಸಕ ಡಾ|ವೈ. ಭರತ್‌ ಶೆಟ್ಟಿ; ಸೋಂಕಿತರಲ್ಲಿ ಸಮಾಜ ಧೈರ್ಯ ತುಂಬಬೇಕು

07:19 AM Jul 23, 2020 | mahesh |

ಜಗತ್ತನ್ನು ವ್ಯಾಪಿಸಿರುವ ಕೋವಿಡ್ ಕುರಿತ ಆಧಾರ ರಹಿತ ಸುದ್ದಿಗಳು ಜನರನ್ನು ಆತಂಕಕ್ಕೆ ತಳ್ಳುತ್ತಿವೆ. ಕೋವಿಡ್ ಜಯಿಸಿ ಬಂದವರೇ ಇಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.

Advertisement

ಮಂಗಳೂರು: “ಕೋವಿಡ್ ಸೋಂಕಿಗೊಳಗಾದ ವರ ಬಗ್ಗೆ ಅಸ್ಪೃಶ್ಯ ಮನೋಭಾವ ತಾಳದೆ ಅವರಲ್ಲಿ ಮನೋಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಸಮಾಜ ಮತ್ತು ನೆರೆಹೊರೆಯವರು ಮಾಡಿದಾಗ ಅವರು ಆತಂಕ-ಭಯವಿಲ್ಲದೆ ರೋಗದಿಂದ ಶೀಘ್ರ ಗುಣಮುಖರಾಗಲು ಸಾಧ್ಯವಾಗುತ್ತದೆ’ ಇದು ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಪ್ರಸ್ತುತ ನಿಯಮಾನುಸಾರ ಹೋಂ ಕ್ವಾರಂಟೈನ್‌ನಲ್ಲಿರುವ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರ ವಿಶ್ವಾಸದ ಮಾತು.

“ಶಾಸಕನಾಗಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಕ್ಷೇತ್ರದಲ್ಲಿ ನಿರಂತರ ಓಡಾಟ ನಡೆಸಿದ್ದೆ. ಮುಂಜಾಗ್ರತ ಕ್ರಮವಾಗಿ ಎಪ್ರಿಲ್‌ ತಿಂಗಳಿನಿಂದಲೇ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದೆ. ಇದೇ ವೇಳೆ ನನ್ನಲ್ಲಿ ಜ್ವರ ಕಾಣಿಸಿಕೊಂಡಿತ್ತು. ಸ್ವಲ್ಪ ಮೈ-ಕೈ ನೋವು ಕೂಡಾ ಇತ್ತು. ಹಿಂದಿನ ದಿನವಷ್ಟೇ ಬೆಂಗಳೂರಿನಿಂದ ವಾಪಸಾಗಿದ್ದರಿಂದ ಬಹುಶಃ ಪ್ರಯಾಣದಿಂದ ಹೀಗೆ ಆಗಿರಬಹುದು ಎಂದು ಭಾವಿಸಿ ಮೊದಲ ದಿನ ಜ್ವರದ ಔಷಧ ತೆಗೆದುಕೊಂಡಿದ್ದೆ. ಆದರೆ ಜ್ವರ ಮತ್ತು ಮೈ-ಕೈ ನೋವು ಜಾಸ್ತಿಯಾಯಿತು. ಜತೆಗೆ ಆಘ್ರಾಣಿಸುವ ಶಕ್ತಿಯೂ ಕುಗ್ಗಿತು. ಆಗ ಕೊರೊನಾ ಸೋಂಕು ಸಾಧ್ಯತೆಯ ಸಂದೇಹ ನನ್ನಲ್ಲಿ ಮೂಡಿತು. ಕೂಡಲೇ ಪರೀಕ್ಷೆ ಮಾಡಿಸಿದೆ. ಸೋಂಕು ತಗಲಿರುವುದು ದೃಢಪಟ್ಟಿತು. ರಕ್ತದಲ್ಲಿ ಆಕ್ಸಿಜನ್‌ ಲೆವೆಲ್‌ ಸರಿಯಾಗಿತ್ತು. ಇತರ ಯಾವುದೇ ತೊಂದರೆ ಇರಲಿಲ್ಲ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದೆ. 3 ದಿನಗಳಲ್ಲಿ ಜ್ವರ ಕಡಿಮೆಯಾಯಿತು. ಶೀಘ್ರ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಈಗ ನಿಯಮಾನುಸಾರ ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ಪುಸ್ತಕ ಓದುವುದರಲ್ಲಿ ನಿರತನಾಗಿದ್ದೇನೆ’ ಎಂದವರು ಚಿಕಿತ್ಸೆ ಪಡೆದ ಸಂದರ್ಭವನ್ನು ವಿವರಿಸಿದರು.

ಆತಂಕ ಬೇಡ
ಕೋವಿಡ್ ಬಗ್ಗೆ ಹಲವಾರು ತಪ್ಪು ಮಾಹಿತಿಗಳು, ವಿಶ್ಲೇಷಣೆ, ಉತ್ಪ್ರೇಕ್ಷೆಗಳಿಂದಾಗಿ ಜನತೆ ಆತಂಕಕ್ಕೊಳಗಾಗುತ್ತಿದ್ದಾರೆ. ಯಾರು ಕೂಡ ಯಾವುದೇ ರೀತಿಯ ಆತಂಕ ಅಥವಾ ಭಯ ಪಡುವ ಆವಶ್ಯಕತೆ ಇಲ್ಲ. ಪಾಸಿಟಿವ್‌ ಬಂದವರಲ್ಲಿ ಶೇ. 98ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ ತೀರಾ ಕಡಿಮೆ ಎಂದು ಡಾ| ಭರತ್‌ ಶೆಟ್ಟಿ ಹೇಳಿದರು.

ಕೋವಿಡ್ ಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ. ಜ್ವರವಿದ್ದರೆ ಔಷಧ ನೀಡುತ್ತಾರೆ. ಸಾಮಾನ್ಯವಾಗಿ ಜ್ವರ 3 ದಿನಗಳಲ್ಲಿ ಕಡಿಮೆಯಾಗುತ್ತದೆ. ಇದರ ಜತೆಗೆ ರೋಗ ನಿರೋಧಕ ಔಷಧ, ವಿಟಮಿನ್‌ ಮಾತ್ರೆಗಳನ್ನು ನೀಡಲಾಗುತ್ತದೆ. ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಮಾತ್ರ ಐಸಿಯುಗೆ ದಾಖಲಿಸುತ್ತಾರೆ. ಆಸ್ಪತ್ರೆಯಲ್ಲಿ ಆಗಾಗ ರಕ್ತದೊತ್ತಡ, ರಕ್ತ ಪರೀಕ್ಷೆ ಸಹಿತ ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ರೋಗಿಗಳಲ್ಲಿ ಆತ್ಮ ಸ್ಥೈರ್ಯ ಮೂಡಿಸುವ ಕಾರ್ಯವನ್ನು ವೈದ್ಯರು, ಆರೋಗ್ಯ ಸಿಬಂದಿ ಮಾಡುತ್ತಾರೆ ಎಂದ ಶಾಸಕರು ಕೊರೊನಾ ಸೋಂಕು ಪೀಡಿತರಿಗೆ ಆಸ್ಪತ್ರೆಯಲ್ಲಿ ನೀಡಲಾಗುವ ಚಿಕಿತ್ಸೆಯ ವಿವರ ನೀಡಿದರು.

Advertisement

“ಕೋವಿಡ್ ಸೋಂಕು ಪಾಸಿಟಿವ್‌ ಬಂದಾಗ ಸೋಂಕಿತ ವ್ಯಕ್ತಿ ಅಥವಾ ಕುಟುಂಬದವರು ಧೃತಿಗೆಡಬಾರದು. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸಮಾಜ ಕೂಡಾ ಇದಕ್ಕೆ ಸಹಕರಿಸಬೇಕು. ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದರೆ ಸಾಕು. ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಪ್ರಸ್ತುತ ತಜ್ಞರು, ಸರಕಾರ ಸೂಚಿಸಿರುವ ಮುಂಜಾಗ್ರತ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ ಕೋವಿಡ್ ಸೋಂಕಿನಿಂದ ಪಾರಾಗಲು ಸಾಧ್ಯವಿದೆ.
-ಡಾ| ವೈ. ಭರತ್‌ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ

Advertisement

Udayavani is now on Telegram. Click here to join our channel and stay updated with the latest news.

Next