ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್‌ನ ಮಹಿಳಾ ಪದಾಧಿಕಾರಿಗಳು, ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣ ಬಳಕೆ ಮಾಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದ್ದಾರೆ.
ನಗರದ ಹೋಟೆಲೊಂದರಲ್ಲಿ ನಗರ ಉತ್ತರ ಜಿಲ್ಲೆಯ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಅಧ್ಯಕ್ಷರೇ ಮಹಿಳೆಯಾಗಿದ್ದಾರೆ. ಪಕ್ಷದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಬೇಕು ಎಂದು ಹೇಳಿದರು. ಎಐಸಿಸಿ ಸಂಶೋಧನಾ ಘಟಕದ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ಗೌಡ ಮಾತನಾಡಿ, ಸಾಮಾಜಿಕ ಜಾಲತಾಣ ಅತ್ಯಂತ ಪ್ರಭಾವಿಯಾಗಿದ್ದು, ಜಾಲತಾಣಗಳ ಮೂಲಕವೇ ಜನರ ಸಂಘಟನೆ ಹಾಗೂ ಹೋರಾಟ ರೂಪಿಸಬಹುದು.
ಅಲ್ಲದೇ ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುವುದು ಮತ್ತು ಪಕ್ಷದ ತತ್ವ, ಸಿದ್ಧಾಂತಗಳನ್ನು ಹೆಚ್ಚು ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರಬೇಕು ಎಂದು ಸೂಚಿಸಿದರು.
ಕೆಪಿಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ನಟರಾಜ್ ಗೌಡ ಅವರು ಮಹಿಳೆಯರಿಗೆ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಖಾತೆ ತೆರೆಯುವುದು ಮತ್ತು ಬಳಸುವ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷ ರಾಜಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಹಾಗೂ 120ಕ್ಕೂ ಹೆಚ್ಚು ಮಹಿಳಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.