Advertisement

‘ಅಭಿಪ್ರಾಯ ರೂಪಿಸುವ ಸಾಮಾಜಿಕ ಜಾಲತಾಣ’

10:47 AM Nov 19, 2018 | |

ವಿದ್ಯಾಗಿರಿ (ಮೂಡಬಿದಿರೆ): ಮಾಧ್ಯಮಗಿಂತಲೂ ವೇಗವಾಗಿ ಜನರನ್ನು ತಲುಪುತ್ತಿರುವ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ನಂತಹ ಸಾಮಾಜಿಕ ಜಾಲತಾಣಗಳು ಮಾಹಿತಿ ಹಂಚುವುದು ಮಾತ್ರವಲ್ಲ, ನಿರ್ದಿಷ್ಟ ಅಭಿಪ್ರಾಯಗಳನ್ನು ರೂಪಿಸುವ ಕೆಲಸವನ್ನೂ ಮಾಡುತ್ತಿವೆ ಎಂದು ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

Advertisement

ನುಡಿಸಿರಿ ಕೊನೆ ದಿನವಾದ ರವಿವಾರ, ರತ್ನಾಕರವರ್ಣಿ ವೇದಿಕೆಯಲ್ಲಿ ಅವರು ‘ಸಾಮಾಜಿಕ ಜಾಲತಾಣ’ ವಿಶೇಷೋಪನ್ಯಾಸ ನೀಡಿದರು. ಜಗತ್ತಿನ 760 ಕೋಟಿ ಜನರಲ್ಲಿ 300 ಕೋಟಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಬಹುತೇಕರು ಅಭಿಪ್ರಾಯಗಳನ್ನು ಬರವಣಿಗೆ ರೂಪಕ್ಕಿಳಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಶೇ. 85ರಷ್ಟು ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿವೆ. ಈಗ ಸಾಮಾಜಿಕ ಜಾಲತಾಣಗಳು ಜನರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುತ್ತಿವೆ. ಸಾಮಾಜಿಕ ಜಾಲತಾಣದ ಕ್ಷಿಪ್ರ ಬೆಳವಣಿಗೆಯನ್ನು ಮಾಧ್ಯಮ ರಂಗ ವಿರೋಧಿಸುತ್ತಲೇ ಬಂದಿತ್ತು. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೊಳ್ಳುವ ವಿಚಾರಗಳನ್ನು ತಮ್ಮ ಮಾಧ್ಯಮದಲ್ಲಿ ಬಿತ್ತರಿಸುವ ಕೆಲಸವಾಗುತ್ತಿದೆ. ಪತ್ರಿಕೆಗಳು ಬರಹಗಾರನ ಬರವಣಿಗೆಯ ಗುಣಮಟ್ಟವನ್ನು ಪರಿಶೀಲಿಸುವ ಬದಲು ಆತನ ಸಿದ್ಧಾಂತ, ಪಂಥಗಳನ್ನು ನೋಡಿ ಲೇಖನಗಳನ್ನು ತಿರಸ್ಕರಿಸುತ್ತವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಸಮಾಜದ ಒಟ್ಟು ಅಭಿಪ್ರಾಯಗಳು ಪ್ರತಿಫಲನಗೊಳ್ಳುತ್ತವೆ.

ಇಲ್ಲಿದೆ ಮುಕ್ತ ಅವಕಾಶ
ಬರವಣಿಗೆ ಎಂಬುದು ಸಾಹಿತಿಗಳ ಸೊತ್ತಲ್ಲ ಎಂಬುದನ್ನು ಸಾಮಾಜಿಕ ಜಾಲತಾಣ ತೋರಿಸುವ ಕೆಲಸ ಮಾಡುತ್ತಿದೆ. ಸಾಮಾನ್ಯ ವೃತ್ತಿಯಲ್ಲಿರುವವನೂ ಅನಿಸಿಕೆಗಳನ್ನು ಮುಕ್ತವಾಗಿ ಇಲ್ಲಿ ತಿಳಿಸಬಹುದು. ಪತ್ರಿಕೆಗಳಿಗಿಂತ ಹೆಚ್ಚು ಓದುಗರು ಸಾಮಾಜಿಕ ಜಾಲಾತಾಣಗಳಲ್ಲಿ ಇದ್ದಾರೆ. ಚರ್ಚೆ, ಅಭಿಪ್ರಾಯ ಮಂಡನೆಗೆ ಇದು ಸೂಕ್ತ ವೇದಿಕೆ ಎಂಬುದು ಸತ್ಯ .
 – ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next