Advertisement

ಮೀಮ್‌, ಜೋಕುಗಳಿಂದ ತುಂಬಿ ತುಳುಕಿದ ಟ್ವಿಟರ್‌, ಫೇಸ್‌ಬುಕ್‌

12:48 AM Aug 06, 2019 | Sriram |

ದೇಶದಲ್ಲಿ ಯಾವುದೇ ವಿದ್ಯಮಾನ ಜರುಗಿದರೂ, ತನ್ನದೇ ಆದ ರೀತಿಯಲ್ಲಿ ತಕ್ಷಣಕ್ಕೆ ಪ್ರತಿಕ್ರಿಯಿಸುವ ಸಾಮಾಜಿಕ ಜಾಲತಾಣಗಳು ಕಾಶ್ಮೀರ ವಿಚಾರದಲ್ಲಿಯೂ ಎಂದಿನಂತೆ ವಿಭಿನ್ನವಾಗಿ ಸ್ಪಂದಿಸಿದೆ. ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಲಕ್ಷಾಂತರ ಮಂದಿ ಸ್ವಾಗತಿಸಿದರಲ್ಲದೆ, ವಿಪಕ್ಷಗಳ ಕೂಗಾಟಗಳನ್ನು ವ್ಯಂಗ್ಯ ಮೀಮ್‌ಗಳು ಹಾಗೂ ಹಾಸ್ಯಗಳ ಮೂಲಕ ಟೀಕಿಸಿದರು.

Advertisement

ಅಭಿಷೇಕ್‌ ಪಠಾಣಿಯಾ ಎಂಬುವರು, ಅಮಿತ್‌ ಶಾ ಅವರ ದೊಡ್ಡ ಫೋಟೋ ಹಾಕಿ, “ನಿಶ್ಯಬ್ದವಾಗಿರಿ, ದೈತ್ಯ ದೇಹಿ ಅಣ್ಣನನ್ನು ನಂಬಿ’ ಎಂದು ಹೇಳಿದರು. ಇನ್ನೂ ಕೆಲವರು, ಸಿನಿಮಾಗಳ ಕೆಲವು ಡೈಲಾಗ್‌ಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡು ತಮ್ಮ ಸಂತಸ ವ್ಯಕ್ತಪಡಿಸಿದರು.

ನೇಹಾ ಎಂಬುವರು, ನೆಹರೂ ಅವರು, ದಿವಾನ ಮಂಚದಲ್ಲಿ ಬಳಸುವ ದುಂಡು ದಿಂಬನ್ನು ಎತ್ತಲೋ ಎಸೆಯುತ್ತಿರುವ ಫೋಟೋವೊಂದನ್ನು ಹಾಕಿ. 370ನೇ ವಿಧಿಯು ಕಸದ ಬುಟ್ಟಿ ಸೇರಿತು ಎಂದರು.

ಮಾಧವ್‌ ರಾವ್‌ ಅವರು, ನರಿಗಳು ಸಾಲಾಗಿ ನಿಂತು ಊಳಿಡುವ ಫೋಟೋವೊಂದನ್ನು ಹಾಕಿ, ಇಂದು ಸಂಸತ್ತಿನಲ್ಲಿ ವಿಪಕ್ಷಗಳ ಕೂಗೂ ಹೀಗೇ ಇರುತ್ತೆ ಎಂದು ವ್ಯಂಗ್ಯವಾಡಿದರು.

ಮತ್ತೂ ಕೆಲವರು, ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿ, ಇನ್ನು, ಜಮ್ಮು ಕಾಶ್ಮೀರದಲ್ಲಿ ಆಸ್ತಿ ಕೊಳ್ಳಲು ಎಲ್ಲರಿಗೂ ಅವಕಾಶ ಸಿಗುತ್ತದಾದ್ದರಿಂದ, ರಾಬರ್ಟ್‌ ವಾದ್ರಾ ಅವರು ಅಲ್ಲಿ ಆಸ್ತಿ ಖರೀದಿಗೆ ದೌಡಾಯಿಸುತ್ತಿದ್ದಾರೆ ಎಂದರು.

Advertisement

ಫೇಸ್‌ಬುಕ್‌ನಲ್ಲಿಯೂ ಖುಷಿ
ಫೇಸ್‌ಬುಕ್‌ನಲ್ಲಿಯೂ ಹಲವಾರು ಮಂದಿ ಕೇಂದ್ರದ ನಡೆಯನ್ನು ಲಘು ಹಾಸ್ಯದ ಮೂಲಕ ಸ್ವಾಗತಿಸಿದರು. ಅದರಲ್ಲಿ ಪ್ರಮುಖವಾಗಿ, ಸಂದೇಶ್‌ ಮೈಸೂರು ಎಂಬುವರ ಖಾತೆಯಲ್ಲಿ ಮೂಡಿಬಂದ ಪೋಸ್ಟ್‌ ಹೆಚ್ಚಾಗಿ ಹರಿದಾಡಿತು.

ಅವರು, “ಇನ್ನು ಮುಂದೆ ಕಾಶ್ಮೀರದಲ್ಲಿ 35ಎ ಹಾಗೂ 370 ಇರುವುದಿಲ್ಲ. ಅವು ಬೆಂಗಳೂರಿನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತವೆ. 35ಎ ಬೆಂಗಳೂರಿನ ಶ್ರೀನಗರ ಹಾಗೂ ಕೆ.ಆರ್‌. ಮಾರುಕಟ್ಟೆ ಮಧ್ಯೆ ಹಾಗೂ 370 ಕೆ.ಆರ್‌. ಮಾರ್ಕೆಟ್‌ನಿಂದ ಬನ್ನೇರುಘಟ್ಟ ಮುಖ್ಯರಸ್ತೆಯ ಶಿವನಹಳ್ಳಿವರೆಗೆ ಮಾತ್ರ ಸಂಚರಿಸುತ್ತೆ. ಜೈ ಬಿಎಂಟಿಸಿ’ ಎಂದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇನ್ನೂ ಕೆಲವರು, ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರೇ ಈಗಲಾದರೂ ಸಂಭ್ರಮ ಪಡಿ. ಈಗಲ್ಲದಿದ್ದರೆ ಮತ್ಯಾವಾಗ ಸಂಭ್ರಮಿಸುತ್ತೀರಿ. ದೇಶದ ಹಿತ ನಿಮ್ಮಲ್ಲಿಲ್ಲವೇ? ಎಂದು ಕೆಣಕಿದರು.

ದಶಕಗಳ ಹಿಂದೆ ನರೇಂದ್ರ ಮೋದಿಯವರು, 370ನೇ ವಿಧಿ ಹಠಾವೊ ಎಂಬ ಹೋರಾಟದಲ್ಲಿ ಭಾಗವಹಿಸಿದ್ದರ ಫೋಟೋವನ್ನು ಅನೇಕರು ಹಾಕಿ, “ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ’ ಎಂದು ಬರೆದುಕೊಂಡಿದ್ದಾರೆ.

ಯಾರು ಏನೆಂದರು?
370ನೇ ವಿಧಿ ರದ್ದುಗೊಳಿಸಿದ್ದು ರಾಷ್ಟ್ರದ ಸಾರ್ವಭೌಮತೆ ಬಲಪಡಿಸು ವಲ್ಲಿ ಕೈಗೊಂಡ ಪ್ರಮುಖ ಮತ್ತು ದಿಟ್ಟ ನಿರ್ಧಾರ. ನಾನು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾರಿಗೆ ಅಭಿನಂದಿಸುತ್ತೇನೆ. ಜಮ್ಮು, ಕಾಶ್ಮೀರ, ಲಡಾಕ್‌ನಲ್ಲಿ ಶಾಂತಿ, ಸಮೃದ್ಧಿ, ಅಭಿವೃದ್ಧಿ ನೆಲೆಸಲಿ.
-ಎಲ್‌. ಕೆ. ಅಡ್ವಾಣಿ, ಬಿಜೆಪಿ ಹಿರಿಯ ನಾಯಕ

ಇದು ಎಂಥಾ ವೈಭವದ ದಿನ. ಜಮ್ಮು ಕಾಶ್ಮೀರ ವಿಲೀನಕ್ಕಾಗಿ ಹೋರಾಡಿ ಪ್ರಾಣ ತೆತ್ತ ಡಾ. ಶ್ಯಾಮ್‌ ಪ್ರಸಾದ್‌ ಮುಖರ್ಜಿಯಿಂದ ಇಲ್ಲಿಯವರೆಗೂ ಕಾಶ್ಮೀರಕ್ಕಾಗಿ ಹೋರಾಡಿ ಪ್ರಾಣ ತೆತ್ತ ಸಹಸ್ರಾರು ಜನ ಹುತಾತ್ಮರ ತ್ಯಾಗ ಫ‌ಲಿಸಿದೆ.
-ರಾಮ್‌ ಮಾಧವ್‌, ಬಿಜೆಪಿ ನಾಯಕ

ಜಮ್ಮು ಕಾಶ್ಮೀರ ಜನತೆಯ ಅಭಿಪ್ರಾಯ ಕೇಳದೇ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಪ್ರಜಾಪ್ರಭುತ್ವದ ಕೊಲೆಯಾಗಿದೆ. ಈ ವಿನಾಶಕಾರಿ ಕೆಲಸವನ್ನು ಎಐಎಡಿಎಂಕೆ ಕೂಡ ಬೆಂಬಲಿಸಿದೆ.
-ಎಂ. ಕೆ ಸ್ಟಾಲಿನ್‌, ಡಿಎಂಕೆ ಅಧ್ಯಕ್ಷ

ಇದು ದಿಟ್ಟ, ಐತಿಹಾಸಿಕ ನಿರ್ಧಾರ. ಇದು ಅಗತ್ಯವಾಗಿ ಬೇಕಿತ್ತು. ಇದಕ್ಕಾಗಿ ಗೃಹ ಸಚಿವ ಅಮಿತ್‌ ಶಾ ಅವರಿಗೆ ಧನ್ಯವಾದಗಳು. ವಿಧಿ 370 ಅನ್ನು ರದ್ದು ಮಾಡಿ ಕಾಶ್ಮೀರದಲ್ಲಿ ಹೂಡಿಕೆ ಅಭಿವೃದ್ಧಿಗೆ ಶಾ ನಾಂದಿ ಹಾಡಿದ್ದಾರೆ.
-ಶೇಷ್‌ ಪೌಲ್‌ ವೇದ್‌,
ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ

ಇದು ಕರಾಳ ದಿನ. ಭಾರತೀಯ ಸಂವಿಧಾನದ ಮೇಲೆ ಬಿಜೆಪಿ ಅತ್ಯಾಚಾರ ಎಸಗಿದೆ. ನೀವು ಅಲ್ಲಿನ ಜನತೆ ಅಭಿಪ್ರಾಯ ಪಡೆಯಲಿಲ್ಲ. ಸರ್ಕಾರವನ್ನು ಬೀಳಿಸಿದಿರಿ. ಚುನಾವಣೆ ನಡೆಸಲಿಲ್ಲ. ಮತ್ತಷ್ಟು ಸೈನಿಕರನ್ನು ನಿಯೋಜಿಸಿದಿರಿ. ಮತ್ತೂಂದು ಪ್ಯಾಲೆಸ್ತೀನ್‌ ನಿರ್ಮಿಸುತ್ತಿದ್ದೀರಿ.
-ಟಿಕೆ ರಂಗರಾಜನ್‌, ಸಿಪಿಎಂ ಸಂಸದ

ಈಗ ನಮ್ಮ ದೇಶ ಸಂಪೂರ್ಣವಾಗಿ ಸ್ವತಂತ್ರವಾಯಿತು. ಬಾಳಾ ಠಾಕ್ರೆ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಕಂಡಿದ್ದ ಕನಸು ಇಂದು ನನಸಾಯಿತು. ವಿಪಕ್ಷಗಳು ತಮ್ಮ ರಾಜಕೀಯ ಮೇಲಾಟಗಳನ್ನು ಬದಿಗಿಟ್ಟು ದೇಶದ ಸಾರ್ವಭೌಮತೆಯನ್ನು ಬೆಂಬಲಿಸಬೇಕು.
-ಉದ್ಧವ್‌ ಠಾಕ್ರೆ, ಶಿವಸೇನೆ ಮುಖ್ಯಸ್ಥ

ಪ್ರಧಾನಿ ಮೋದಿ ಕಾಶ್ಮೀರದ ವಿಚಾರದಲ್ಲಿ ಜಾದೂ ಮಾಡಿದ್ದಾರೆ. ದೇಶದ ಜನರ ಆಶೋತ್ತರವನ್ನು ಎತ್ತಿ ಹಿಡಿದಿದ್ದಾರೆ. ಇನ್ನು ಮುಂದೆ ಕಾಶ್ಮೀರ ಅಭಿವೃದ್ಧಿಗೆ ತೆರೆದುಕೊಳ್ಳುತ್ತದೆ.
-ಶಹನವಾಜ್‌ ಹುಸೇನ್‌, ಬಿಜೆಪಿ ವಕ್ತಾರ

ವಿಧಿ 370ನ್ನು ರದ್ದುಪಡಿಸಿದ್ದನ್ನು ದುರುಪಯೋಗ ಪಡಿಸಿಕೊಂಡು ದೇಶದಲ್ಲಿ ಶಾಂತಿ ಹಾಳುಮಾಡಲು ಪ್ರಯತ್ನಿಸುವವರು ಅಥವಾ ಹಿಂಸಾಚಾರ ಹುಟ್ಟುಹಾಕಲು ಪ್ರಯತ್ನಿಸುವವರು ದೇಶದ ವೈರಿಗಳು.
-ಚೇತನ್‌ ಭಗತ್‌, ಲೇಖಕ

Advertisement

Udayavani is now on Telegram. Click here to join our channel and stay updated with the latest news.

Next