Advertisement

ಸೋಷಿಯಲ್‌ ಜಗ

09:11 AM Mar 05, 2020 | mahesh |

ಮಾರ್ಚ್‌ 8ರಂದು ಸೋಷಿಯಲ್‌ ಮೀಡಿಯಾದಿಂದ ದೂರ ಸರಿಯುವುದಾಗಿ ಹೇಳಿ ಹುಬ್ಬೇರುವಂತೆ ಮಾಡಿದ್ದ ಮೋದಿ ಈಗ ತಮ್ಮ ಮಾತಿನ ನಿಜಾರ್ಥ ತಿಳಿಸಿದ್ದಾರೆ. ಅಂದು ಸಾಧಕ ಮಹಿಳೆಯೊಬ್ಬರು ಪ್ರಧಾನಿಯ ಸೋಷಿಯಲ್‌ ಮೀಡಿಯಾ ನಿರ್ವಹಿಸಲಿದ್ದಾರಂತೆ. ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಹೇಗೆ ಈಗಲೂ ಪ್ರಧಾನಿ ಮೋದಿ ಹಾಗೂ ಬಿಜೆಪಿ ಎದುರಾಳಿಗಳಿಗಿಂತ ಬಹಳ ಮುಂದಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

Advertisement

ಸೋಷಿಯಲ್‌ ಮೀಡಿಯಾ ಶಕ್ತಿ ಪರಿಚಯಿಸಿದ ಟೀಂ ಮೋದಿ
2014ರ ಲೋಕಸಭಾ ಚುನಾವಣೆಯವರೆಗೂ, ಸೋಷಿಯಲ್‌ ಮೀಡಿಯಾದಲ್ಲಿ ಅತಿ ಹೆಚ್ಚು ಸಕ್ರಿಯರಾಗಿದ್ದ ಭಾರತೀಯ ರಾಜಕಾರಣಿಯೆಂದರೆ ಶಶಿ ತರೂರ್‌ ಅವರು. ಆದರೆ, ರಾಷ್ಟ್ರೀಯ ಅಖಾಡಕ್ಕೆ ಧುಮುಕುತ್ತಲೇ ಮೋದಿಯವರ ಸೋಷಿಯಲ್‌ ಮೀಡಿಯಾ ಶಕ್ತಿ ಅಗಾಧವಾಗಿ ಬೆಳೆದುಬಿಟ್ಟಿತು. ಅತ್ತ ಕಾಂಗ್ರೆಸ್‌ ಸೋಷಿ ಯಲ್‌ ಮೀಡಿಯಾದ ಶಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರೆ, ಇತ್ತ ಬಿಜೆಪಿ ಮಾತ್ರ ಸೋಷಿಯಲ್‌ ಮೀಡಿಯಾ ಸೆಲ್‌ಗಳನ್ನು ಸ್ಥಾಪಿಸಿ, ಹಲವು ಕ್ಯಾಂಪೇನ್‌ಗಳನ್ನು ಮಾಡಿತು. ಪ್ರಶಾಂತ್‌ ಕಿಶೋರ್‌ ನೇತೃತ್ವದಲ್ಲಿ ನೂರಾರು ಟೆಕ್‌ ಸೇವಿ ಯುವಕರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯೇಟಿವ್‌ ಘೋಷಣೆಗಳನ್ನು ಹರಿಬಿಟ್ಟಿತು.

ಉಳಿದ ಪಕ್ಷದ ನಾಯಕರು ಕೇವಲ ನ್ಯೂಸ್‌ ಚಾನೆಲ್‌ಗಳು ಪತ್ರಿಕೆಗಳ ಮುಂದೆ ಮಾತನಾಡಿದರೆ, ಮೋದಿ ಟ್ವಿಟರ್‌ ಮೂಲಕ ನೇರವಾಗಿ ಜನರ ಬಳಿ ತಲುಪಲಾರಂಭಿಸಿದರು. ಭಾರತೀಯ ಯುವ ಸಮುದಾಯವನ್ನು ತಲುಪುವಲ್ಲಿ ಸಾಮಾಜಿಕ ಮಾಧ್ಯಮ ಗಳ ಶಕ್ತಿಯನ್ನು ಒಂದರ್ಥದಲ್ಲಿ ಟೀಂ ಮೋದಿಯೇ ಪರಿಚಯಿಸಿತು.

ಅಲ್ಲಿಯವರೆಗೂ ಸೋಷಿಯಲ್‌ ಮೀಡಿಯಾ ಎನ್ನುವುದು ಸಾಮಾನ್ಯ ಜನರ ಚರ್ಚಾ ವೇದಿಕೆಯಾಗಿತ್ತು. ಆದರೆ ಮೋದಿ ಮತ್ತು ಟೀಂನ ಗೆಲುವಿನ ನಂತರ, ಟ್ವಿಟರ್‌ ವಿವಿಧ ಪಕ್ಷಗಳ ರಾಜಕೀಯ ವೇದಿಕೆಯಾಗಿ ಬದಲಾಗಿದೆ. ಅದಾದ ನಂತರ ಕಾಂಗ್ರೆಸ್‌, ಆಪ್‌ ಸೇರಿದಂತೆ ಅನೇಕ ಪಕ್ಷಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ನಾಯಕರ ಸೋಷಿಯಲ್‌ ಮೀಡಿಯಾಗಳನ್ನೆಲ್ಲ ಸಕ್ರಿಯವಾಗಿ ನಿಭಾಯಿಸಲಾರಂಭಿಸಿವೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಫೆಲ್‌ ಒಪ್ಪಂದದ ಕುರಿತು ಮೋದಿ ಮೇಲೆ ಆರೋಪ ಮಾಡುತ್ತಾ “ಚೌಕಿದಾರ್‌ ಚೋರ್‌ ಹೇ’ ಪದಪುಂಜವನ್ನು ಟ್ರೆಂಡ್‌ ಮಾಡಿತು. ಇದಕ್ಕೆ ಪ್ರತಿಯಾಗಿ ಮೋದಿ “ಮೇ ಭೀ ಚೌಕಿದಾರ್‌'(ನಾನೂ ಚೌಕೀ ದಾರ) ಘೋಷಣೆ ಹರಿಬಿಟ್ಟರು. ಬಿಜೆಪಿಯ ಬೆಂಬಲಿಗರು ಮತ್ತು ನಾಯಕರೆಲ್ಲ ತಮ್ಮ ಹೆಸರುಗಳ ಮುಂದೆ ಚೌಕೀದಾರ್‌ ಎಂದು ಬರೆದುಕೊಂಡಿದ್ದರು.

ಮೋದಿ ನಂತರ ಸೋಷಿಯಲ್‌ ಮೀಡಿಯಾಗಳ ಸಕ್ರಿಯ ಬಳಕೆ
ಮಾಡಿದ ರಾಜಕಾರಣಿಯೆಂದರೆ ಅರವಿಂದ್‌ ಕೇಜ್ರಿವಾಲ್‌ ಮತ್ತು ರಾಹುಲ್‌ ಗಾಂಧಿ. ಕಳೆದ ಬಾರಿಯ ಚುನಾವಣೆಯ ವೇಳೆಯಿಂದ ರಾಹುಲ್‌ ಗಾಂಧಿ ಖಾತೆ ಹೆಚ್ಚು ಸಕ್ರಿಯವಾಗಿದೆ. ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ನ ಸೋಷಿಯಲ್‌ ಮೀಡಿಯಾ ವಿಂಗ್‌ನ ನೇತೃತ್ವವನ್ನು ಚಿತ್ರನಟಿ ರಮ್ಯ ಹೊತ್ತಿದ್ದರು. ಈಗವರು ತಮ್ಮ ಖಾತೆಯನ್ನೇ ಡಿಲೀಟ್‌ ಮಾಡಿದ್ದಾರೆ. ಒಂದು ಅಂದಾಜಿನ ಪ್ರಕಾರ 2019ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು 27 ಕೋಟಿಗೂ ಅಧಿಕ ಧನರಾಶಿಯನ್ನು ಡಿಜಿಟಲ್‌ ವೇದಿಕೆಗಳ ಜಾಹೀರಾತುಗಳಿಗೆ ಖರ್ಚು ಮಾಡಿದ್ದವು. ಇದರಲ್ಲಿ 60 ಪ್ರತಿಶತಕ್ಕೂ ಅಧಿಕ ಜಾಹೀರಾತನ್ನು ಬಿಜೆಪಿಯೇ ನೀಡಿತ್ತು.

Advertisement

ಟ್ವಿಟರ್‌, ಫೇಸ್‌ಬುಕ್‌ ಅಷ್ಟೇ ಅಲ್ಲ, ಟಂಬ್ಲಿರ್‌, ಪಿಂಟ್ರೆಸ್ಟ್‌ಗಳಲ್ಲೂ ಮೋದಿ ಖಾತೆ
ಜಗತ್ತಿನ ಅತ್ಯಂತ ಟೆಕ್‌ ಸ್ನೇಹಿ ರಾಜಕೀಯ ನಾಯಕ ಎಂಬ ಗರಿಮೆಗೆ ಪಾತ್ರರಾಗಿರುವ ನರೇಂದ್ರ ಮೋದಿ ಅವರ ಖಾತೆಗಳು ಕೇವಲ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಷ್ಟೇ ಅಲ್ಲದೇ, ಅನ್ಯ ಸಾಮಾಜಿಕ ಮಾಧ್ಯಮಗಳಲ್ಲೂ ಅವರ ಖಾತೆಗಳಿವೆ ಎನ್ನುವುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಡಿಸ್ಕವರಿ ನೆಟ್ವರ್ಕ್ನ “ಸ್ಟಂಬಲ್‌ಅಪಾನ್‌’, “ಪಿಂಟ್‌ರೆಸ್ಟ್‌ ‘, “ಟಂಬ್ಲಿರ್‌’, “ಫ್ಲಿಕರ್‌’, “ಶೇರ್‌ಚಾಟ್‌’, “ವೀಬೋ’ ಮತ್ತು “ಲಿಂಕಡಿನ್‌’ನಲ್ಲೂ ಮೋದಿ ಅವರ ಖಾತೆಗಳಿವೆ. ಕೆಲವೊಂದು ಖಾತೆಗಳು ಅವರು ಮುಖ್ಯಮಂತ್ರಿಯಾಗಿದ್ದಾಗಿನಿಂದಲೇ ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಅನೇಕ ಖಾತೆಗಳು ಈಗ ಸಕ್ರಿಯವಾಗಿ ಇಲ್ಲ, 3 ವರ್ಷದ ಹಿಂದೊಮ್ಮೆ ಅವರು ಕೊನೆಯದಾಗಿ ಟಂಬ್ಲಿರ್‌ನಲ್ಲಿ ಒಂದು ಪೋಸ್ಟ್‌ ಮಾಡಿದ್ದರು.

ಫೇಸ್‌ಬುಕ್‌ ಮತ್ತು ಜಾಹೀರಾತು!
ನರೇಂದ್ರ ಮೋದಿ ಫೇಸ್‌ಬುಕ್‌ನಲ್ಲೂ ಸಕ್ರಿಯರಾಗಿದ್ದಾರೆ.”ಸೋಷಿಯಲ್‌ ಬ್ಲೇಡ್‌’ ತಾಣದ ಪ್ರಕಾರ ಮೋದಿಯವರ ಅಧಿಕೃತ ಪುಟವು, ಜಗತ್ತಿನಲ್ಲೇ ಅತಿಹೆಚ್ಚು ಲೈಕ್‌ ಪಡೆದ ಖಾತೆಗಳಲ್ಲಿ 79ನೇ ಸ್ಥಾನದಲ್ಲಿದ್ದು, ಅತಿಹೆಚ್ಚು ಚರ್ಚೆಗೊಳಗಾಗುವ ಪೇಜ್‌ಗಳಲ್ಲಿ 62ನೇ ಸ್ಥಾನದಲ್ಲಿದೆ. ಮೋದಿಯವರ ಬೆಂಬಲಿಗರು ಅನೇಕ ಫ್ಯಾನ್‌ಪೇಜ್‌ಗಳನ್ನೂ ಸೃಷ್ಟಿಸಿ, ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷದ ಚುನಾವಣೆಯ ಸಮಯದಲ್ಲಿ (ಫೆ.21, 2019-ಏಪ್ರಿಲ್‌ 27, 2019ರವರೆಗೆ) ಬಿಜೆಪಿ ಮತ್ತು ಮೋದಿ ಫ್ಯಾನ್‌ಪೇಜ್‌ಗಳು 18,454 ಫೇಸ್‌ಬುಕ್‌ ಜಾಹೀರಾತುಗಳನ್ನು ನೀಡಿದವು. ಇದಕ್ಕಾಗಿ ಸರಿಸುಮಾರು 7.8 ಕೋಟಿ ರೂಪಾಯಿ ಖರ್ಚು ಮಾಡಿದವು!

ಯೂಟ್ಯೂಬ್‌ನಲ್ಲೂ ಫೇಮಸ್‌!
ಮೋದಿ ಯೂಟ್ಯೂಬ್‌ನಲ್ಲೂ ಪ್ರಖ್ಯಾತರಾಗಿದ್ದಾರೆ, ಈಗಾಗಲೇ 1200ಕ್ಕೂ ಹೆಚ್ಚು ವಿಡಿಯೋಗಳನ್ನು ಅವರ ಚಾನೆಲ್‌ನಿಂದ ಅಪ್ಲೋಡ್‌ ಮಾಡಲಾಗಿದ್ದು, ಈಗ 45.2 ಲಕ್ಷ ಸಬ್‌ ಸೈಬರ್‌ಗಳಿದ್ದಾರೆ. ಇದುವರೆಗೂ ಈ ವಿಡಿಯೋಗಳ ಒಟ್ಟಾರೆ ವೀವ್‌ಗಳ ಸಂಖ್ಯೆ 53.6 ಕೋಟಿ ಆಗಿದೆ. ಕಳೆದ ವರ್ಷದ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿ ಯೂಟ್ಯೂಬ್‌ ಚಾನೆಲ್‌ ಬಹಳ ಸಕ್ರಿಯವಾಗಿತ್ತು, ಬಿಜೆಪಿಯ ಪ್ರಚಾರದ ವಿಡಿಯೋಗಳು, ಮೋದಿ ಭಾಷಣಗಳನ್ನು ಅದರಲ್ಲಿ ಹಂಚಲಾಯಿತು. ಇದಷ್ಟೇ ಅಲ್ಲದೆ, ಯೂಟ್ಯೂಬ್‌ನಲ್ಲಿ ಬಿಜೆಪಿಯದ್ದೇ ಪ್ರತ್ಯೇಕ ಚಾನೆಲ್‌ ಇದ್ದು ಅದಕ್ಕೆ 26 ಲಕ್ಷ ಸಬ್‌ಸೆð„ಬರ್‌ಗಳು, ಪ್ರಧಾನಮಂತ್ರಿ ಕಾರ್ಯಾಲಯದ ಚಾನೆಲ್ಗೆ 7 ಲಕ್ಷ ಸಬ್‌ ಸೈಬರ್‌ಗಳು ಮತ್ತು ಯೋಗಾ ವಿತ್‌ ಮೋದಿ ಚಾನೆಲ್‌ಗೆ 14000 ಸಬ್‌ ಸೈಬರ್‌ಗಳಿದ್ದಾರೆ. ಮೋದಿ ಅವರ ಚಾನೆಲ್‌ನಲ್ಲಿ ಅತಿಹೆಚ್ಚು ಜನಪ್ರಿಯವಾದ ವಿಡಿಯೋ ಎಂದರೆ, ಅಕ್ಷಯ್‌ ಕುಮಾರ್‌ರೊಂದಿಗೆ ಚಿತ್ರೀಕರಿಸಲಾದ ಸಂದರ್ಶನ. ಇದುವರೆಗೂ ಈ ವಿಡಿಯೋವನ್ನು 1 ಕೋಟಿ 60 ಲಕ್ಷ ಬಾರಿ ವೀಕ್ಷಿಸಲಾಗಿದೆ. ಅನೇಕರು ಈ ವಿಡಿಯೋವನ್ನು ಪಬ್ಲಿಸಿಟಿ ಗಿಮಿಕ್‌ ಎಂದೂ ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next