ಈಗಂತೂ ಸೋಷಿಯಲ್ ಮೀಡಿಯಾಗಳದ್ದೇ ಹವಾ… ಇದು ಎಲ್ಲರಿಗೂ ಗೊತ್ತಿರುವ ವಿಷಯ. ನಟ ಜಗ್ಗೇಶ್ ಅವರು ಕೂಡ ಸೋಷಿಯಲ್ ಮೀಡಿಯಾಗಳ ಪ್ರಭಾವದ ಬಗ್ಗೆ ಸಾಕಷ್ಟು ಅರಿತಿದ್ದಾರೆ ಎಂಬುದನ್ನು ನಂಬಲೇಬೇಕು. ಜನರು ಎಷ್ಟೆಲ್ಲಾ ಬುದ್ಧಿವಂತರಾಗಿದ್ದಾರೆ ಎಂಬುದು ಅವರಿಗೂ ಗೊತ್ತಿದೆ. ಜಗ್ಗೇಶ್ ಅವರು ಸೋಷಿಯಲ್ ಮೀಡಿಯಾಗಳ ಬಗ್ಗೆ ಹೇಳ್ಳೋಕೂ ಕಾರಣವಿದೆ. ಆ ಕಾರಣ ಬೇರೇನೂ ಅಲ್ಲ, ಈಗ ಎಲ್ಲೆಡೆ ಹಾವಳಿಯಾಗಿರುವ ಸ್ಮಾರ್ಟ್ ಫೋನ್ ಮತ್ತು ಸೋಷಿಯಲ್ ಮೀಡಿಯಾ.
ಹೌದು, ಈ ಕುರಿತು ಸ್ವತಃ ಜಗ್ಗೇಶ್ ಅವರು ಹೇಳುವುದೇನು ಗೊತ್ತಾ? “ಹಿಂದಿನದನ್ನು ಗಮನಿಸಿದರೆ, ಮೊದಲೆಲ್ಲಾ ಇಷ್ಟೊಂದು ಮೀಡಿಯಾಗಳ ಪ್ರಭಾವವೇ ಇರಲಿಲ್ಲ. ಆಗ ಸೆಲೆಬ್ರೆಟಿಗಳು ಏನಾದರೊಂದು ಹೇಳಿಕೆ ನೀಡಿದರೆ ಅಥವಾ ಒಂದು ಒಳ್ಳೆಯ ಸಿನಿಮಾ ಬಿಡುಗಡೆಯಾದರೆ, ಪತ್ರಕರ್ತರು ನಟ,ನಟಿಯರು ಹೇಳುವ ಹೇಳಿಕೆಯನ್ನು ಮತ್ತು ಚಿತ್ರ ವೀಕ್ಷಿಸಿ, ಅದನ್ನು ವಿಶ್ಲೇಷಿಸಿ ವಿಮರ್ಶೆಯನ್ನು ಮಾಡುತ್ತಿದ್ದರು.
ಪತ್ರಿಕಾ ಮಾಧ್ಯಮಗಳಲ್ಲಿ ಬಂದದ್ದನ್ನು ಪ್ರೇಕ್ಷಕರು ನೋಡಿ, ತಿಳಿದುಕೊಂಡು ಆ ನಂತರದಲ್ಲಿ ಆ ಸಿನಿಮಾಗಳ ಮೇಲೆ ಒಂದು ಅಭಿಪ್ರಾಯ ಇಟ್ಟುಕೊಂಡು ಚಿತ್ರಮಂದಿರದ ಕಡೆಗೆ ಬರುತ್ತಿದ್ದರು. ಆದರೆ, ಇಂದಿನ ಪರಿಸ್ಥಿತಿ ಮೊದಲಿನಂತಿಲ್ಲ. ಸಂಪೂರ್ಣ ಬದಲಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳ ಪ್ರಭಾವ ಎಷ್ಟಿದೆ ಎಂದರೆ, ಸ್ಮಾರ್ಟ್‌ಫೋನ್ ಬಂದ ಮೇಲಂತೂ ಪ್ರತಿಯೊಬ್ಬರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಯಾವ ಮುಚ್ಚು-ಮರೆಯಿಲ್ಲದೆ ಆ ಮೂಲಕ ಹೇಳಿಕೊಳ್ಳುತ್ತಿದ್ದಾರೆ.
ನಾವು ಏನು ಮಾಡುತ್ತಿದ್ದೆವೆ.., ಏನು ಮುಚ್ಚಿಡುತ್ತಿದ್ದೇವೆ..? ಎಲ್ಲವನ್ನೂ ಅಲ್ಲಿ ಬಿಚ್ಚಿಡುತ್ತಿದ್ದಾರೆ. ಇದೆಲ್ಲವನ್ನೂ ಬುದ್ದಿವಂತ ಪ್ರೇಕ್ಷಕರು ದೂರದಿಂದಲೇ ನೋಡುತ್ತಿರುತ್ತಾರೆ’ ಎನ್ನುವುದು ಜಗ್ಗೇಶ್ ಮಾತು. ಇವತ್ತಿನ ಪ್ರೇಕ್ಷಕರ ಬಗ್ಗೆ ಮಾತನಾಡುವ ಅವರು, ಇವತ್ತು ಯಾವುದೇ ಆಟಗಳು ನಡೆಯೋದಿಲ್ಲ. ನಮ್ಮ ಸಿನಿಮಾದಲ್ಲಿ ಏನಿದೆ, ನಮ್ಮ ಸಿನಿಮಾ ಥರ ಬೇರೆ ಯಾವ ಸಿನಿಮಾ ಬಂದಿದೆ,
ಯಾಕೆ ಆ ಸಿನಿಮಾವನ್ನು ನಾವು ನೋಡಲೇಬೇಕು ಎಂಬುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ತಿಳಿದುಕೊಂಡ ನಂತರವಷ್ಟೇ ಅವರುಗಳು ಚಿತ್ರಮಂದಿರದ ಕಡೆಗೆ ಹೋಗಬೇಕಾ ಅಥವಾ ಬೇಡವಾ? ಎಂದು ನಿರ್ಧರಿಸುವಷ್ಟರ ಮಟ್ಟಿಗೆ ಬಂದಿದ್ದಾರೆ. ಅದಕ್ಕೆ ಕಾರಣ ಸೋಷಿಯಲ್ ಮೀಡಿಯಾ ಅಂದರೆ ತಪ್ಪಿಲ್ಲ’ ಎಂಬುದು ಜಗ್ಗೇಶ್ ಅಭಿಪ್ರಾಯ.