Advertisement
ಮನೋರಂಜನೆಯ ವೀಡಿಯೋಗಳು, ಅನುಕರಣೆಯ ರೀಲ್ಸ್‌ಗಳು ಈಗ ಟ್ರೆಂಡ್‌ನಲ್ಲಿದೆ. ಇಂತಹ ಪ್ಲ್ರಾಟ್‌ಫಾರ್ಮ್ಗಳಲ್ಲಿ ಕನ್ನಡಿಗರ ಸಂಖ್ಯೆಯೇನು ಕಡಿಮೆ ಇಲ್ಲ. ಗ್ರೂಪ್‌ಗಳು, ಕಂಟೆಂಟ್ ಕ್ರಿಯೇಟರ್ಸ್‌ಗಳು, ಟ್ರೋಲ್ ಪೇಜ್‌ಗಳು ಲೆಕ್ಕಕ್ಕೆ ಸಿಗದಷ್ಟಿವೆ. ಈ ನಡುವೆ ತೀರ ನಿರ್ಲಕ್ಷಿಸಲ್ಪಟ್ಟ ಕನ್ನಡ ಕಾಳಜಿ. ಅದೇ ಕನ್ನಡವನ್ನು ತಪ್ಪಾಗಿ ಬರೆಯುವುದು ಹಾಗೂ ತಪ್ಪು ಕನ್ನಡದ ಬಳಕೆ. ಕನ್ನಡದಲ್ಲಿ ಪೋಸ್ಟ್‌ಗಳನ್ನು ಮಾಡಿದ್ರೆ ಹೆಚ್ಚು ಜನರನ್ನ ತಲುಪುತ್ತವೆ ಹೆಚ್ಚು ಲೈಕ್ಸ್‌ಗಳು ಬರುತ್ತವೆ ಅಂತ ಯೋಚಿಸೋ ಎಷ್ಟೋ ಟ್ರೋಲ್ ಪೇಜ್‌ಗಳು ಎಷ್ಟೋ ಕಂಟೆಂಟ್ ಕ್ರಿಯೇಟ್‌ಗಳು ಪೋಸ್ಟ್‌ಗಳಲ್ಲಿ ತಪ್ಪು ತಪ್ಪಾದ ಕನ್ನಡ ಅಡಿಬರಹವನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಇನ್ನೂ ಕಾಮೆಂಟ್ ಬಾಕ್ಸ್ ಎಂಬ ಅಭಿಪ್ರಾಯ ಖಾತೆಯನ್ನು ತೆರೆಯುವುದೇ ಬೇಡ ಇದು ಕನ್ನಡವ? ಎನ್ನುವಷ್ಟು ದಿಗಿಲಾಗುತ್ತದೆ.
Related Articles
Advertisement
ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂಬ ಕುವೆಂಪುರವರ ಸಾಲುಗಳನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ನಂಬಲು ಅಸಾಧ್ಯವಾಗಿಸುವ ನಿಲುವು ಮೂಡಿಸುವ ಮುಂಚೂಣಿಯಲ್ಲಿದ್ದೇವೆ ನಾವು. ಕನ್ನಡ ಭಾಷೆಯ ಮೇಲೆ ನಮಗೆ ಹಕ್ಕಿದೆ. ಅದನ್ನು ನಮ್ಮ ಧ್ವನಿಯಾಗಿ ಬಳಸುವ ಅಧಿಕಾರವೂ ಕನ್ನಡಿಗರಾದ ನಮಗಿದೆ. ಆದರೆ ಅಶುದ್ಧ ಕನ್ನಡದ ಬಳಕೆಯಿಂದ ಕನ್ನಡಕ್ಕೆ ಅವಮಾನ ಮಾಡುವುದು ಅದೆಷ್ಟು ಸರಿ?
ಕನ್ನಡವನ್ನು ಸರಿಪಡಿಸುವುದು ನಮ್ಮ ಕೈಯಲ್ಲೇ ಇದೆ ಕನ್ನಡಿಗರಾದ ನಮಗೆ ಬೇರಾರೂ ಕನ್ನಡವನ್ನು ಹೇಳಿ ಕೊಡಬೇಕಾಗಿಲ್ಲ.. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಾಗ ಅಥವಾ ಅಡಿ ಬರಹಗಳನ್ನ ಬರೆಯುವಾಗ ಒಂದಷ್ಟು ನಿಗಾ ವಹಿಸಿ ತನ್ನ ಕನ್ನಡ ಸರಿಯಾಗಿದೆಯೇ? ವ್ಯಾಕರಣದ ಶುದ್ಧತೆ ಇದೆಯೇ? ಎಂದು ಅವಲೋಕನ ಮಾಡಿದ್ರೆ ಎಷ್ಟೋ ತಪ್ಪುಗಳನ್ನ ತಿದ್ದಿಕೊಳ್ಳಬಹುದು.
ನಾವು ಮಾಡುವಂತ ಪೋಸ್ಟ್‌ಗಳು ಅದೆಷ್ಟೋ ಜನರನ್ನು ತಲುಪುತ್ತವೆ ಹೀಗಿರುವಾಗ ನಮ್ಮ ಸಣ್ಣಪುಟ್ಟ ತಪ್ಪುಗಳನ್ನು ನಾವೇ ಸರಿಪಡಿಸಿ ಬರೆದರೆ ಕನ್ನಡ ಕನ್ನಡವಾಗಿಯೇ ಇರಬಹುದು ಇನ್ನೂ ನೂರು ಕಾಲ. ಸರಿಗನ್ನಡವನ್ನು ಬಳಸಿದಾಗ ಮಾತ್ರ ಅದು ಸಿರಿಗನ್ನಡವಾಗುವುದು. ಕನ್ನಡವನ್ನು ಖಂಡಿತವಾಗಿಯೂ ಬೆಳೆಸಬೇಕಾಗಿಲ್ಲ ಅದು ಹೆಮ್ಮರ ವಾಗಿ ಬೆಳೆದಾಗಿದೆ ಅದನ್ನ ಬಳಸಬೇಕಷ್ಟೇ. ಅಲ್ಲ ಅದನ್ನ ಸರಿಯಾಗಿ ಬಳಸಬೇಕು ಎಂಬ ಕಳಕಳಿ.
-ನೈದಿಲೆ ಶೇಷೇಗೌಡ
ಎಸ್‌ಡಿಎಂ ಕಾಲೇಜು ಉಜಿರೆ