Advertisement
ಕುಲು ಮನಾಲಿ ಸುಂದರವಾದ ಊರು. ರಸ್ತೆಯುದ್ದಕ್ಕೂ ಪಕ್ಕದಲ್ಲೇ ಸಖಿಯಂತೆ ಸಾಗುವ ಬಿಯಾಸ್ ನದಿ. ತಂಪಾದ ತಾಣದಲ್ಲಿ ಉದ್ಭವಿಸಿದ ವರುಣನ ಪ್ರಕೋಪಕ್ಕೆ ಹಲವು ಕಾರಣಗಳಿವೆ. ಅದು ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಹಿಡಿದು ಬೃಹತ್ ಯೋಜನೆಗಳವರೆಗೂ ಒಂದಲ್ಲ, ಎರಡಲ್ಲ, ನೂರಾರು ಕಾರಣಗಳಿವೆ. ಅವನ್ನೆಲ್ಲ ಮತ್ತೂಮ್ಮೆ ಚರ್ಚಿಸೋಣ.
***
ಈ ವ್ಯವಸ್ಥೆ ನಿರ್ವಹಿಸುವವರ ಜಾಣ್ಮೆ, ಅನುಭವದ ಜತೆಗೆ ಇಚ್ಛಾಶಕ್ತಿ ಹಾಗೂ ತಂತ್ರಜ್ಞಾನ ಬೆರೆತರೆ ಏನಾಗಬಹುದು ಎಂಬುದಕ್ಕೆ ಇದೇ ಕುಲು ಮನಾಲಿಯ ಘಟನೆ ನಿದರ್ಶನ. ಕುಲು, ಮಂಡಿ ಬಹಳ ಸಂಕಷ್ಟಕ್ಕೆ ಒಳಗಾಗಿದ್ದ ಜಿಲ್ಲೆಗಳು. ಕಾಂಗ್ರಾ ಜಿಲ್ಲೆ ಸಹ ಇಂಥದ್ದೇ ಆತಂಕದಲ್ಲಿದ್ದ ಜಿಲ್ಲೆ. ಇಡೀ ಪರಿಸ್ಥಿತಿಯನ್ನು ನಿರ್ವಹಿಸಿದವರು ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು. ಸೌಮ್ಯಾ ಸಾಂಬಶಿವನ್, ಸಾಕ್ಷಿ ವರ್ಮ ಹಾಗೂ ಶಾಲಿನಿ ಅಗ್ನಿಹೋತ್ರಿ. ಇವರೊಂದಿಗೆ ಸೇರಿಕೊಂಡವರು ಹಿಮಾಚಲ ಪ್ರದೇಶದ ಎಡಿಜಿಪಿ ಮಹಿಳಾ ಅಧಿಕಾರಿ ಸಾತ್ವಂತ್ ಆತ್ವಾಲ್ ತ್ರಿವೇದಿ. ಸಾತ್ವಂತ್ ಹಿಮಾಚಲ ಪ್ರದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ಅಷ್ಟೇ ಅಲ್ಲ. ಎನ್‌ಐಎ ಹಾಗೂ ಬಿಎಸ್‌ಎಫ್ನಲ್ಲೂ ಕಾರ್ಯ ನಿರ್ವಹಿಸಿದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. ಪ್ರವಾಹ ಕ್ಷೇತ್ರದಲ್ಲಿದ್ದ ಮಹಿಳಾ ಅಧಿಕಾರಿಗಳು ಲಭ್ಯ ತಾಂತ್ರಿಕತೆಗಳನ್ನು ಬಳಸಿ ನೆರೆಯಲ್ಲಿ ಸಿಲುಕಿದವರೊಂದಿಗೆ ಸಂಪರ್ಕ ಸಾಧಿಸಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಸಾತ್ವಂತ್ ಅವರಂತೂ ಪ್ರತೀ ಹಂತದ ಮಾಹಿತಿಯನ್ನೂ ಹಂಚಿಕೊಳ್ಳುತ್ತಿದ್ದರು. ಎಲ್ಲೆಲ್ಲಿ ರಸ್ತೆ ಕಡಿತಗೊಂಡಿದೆ, ಎಲ್ಲೆಲ್ಲಿ ಯಾವ್ಯಾವ ಸಮಸ್ಯೆಯಿದೆ ಎಂಬುದರಿಂದ ಹಿಡಿದು ನೆರೆಬಾಧಿತ ಪ್ರದೇಶದಲ್ಲಿ ಸಿಲುಕಿ ಬಿದ್ದವರ ಗುರುತು ಹಚ್ಚುವಲ್ಲಿಯೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡರು. ಸಂತ್ರಸ್ತರು ಮತ್ತು ಅವರ ಕುಟುಂಬ ಹಾಗೂ ವ್ಯವಸ್ಥೆಯ ಮಧ್ಯೆಯ ಸಂಪರ್ಕ ಕೊಂಡಿಯಾದವು ಸಾಮಾಜಿಕ ಮಾಧ್ಯಮಗಳು. ನೆರೆಯಲ್ಲಿ ಸಿಲುಕಿರುವವರಿಗೆ ಧೈರ್ಯ ತುಂಬುವುದರಿಂದ ಆರಂಭಿಸಿ ಪರಿಹಾರ ಕಾರ್ಯದ ಪ್ರತೀ ಕ್ಷಣವನ್ನೂ ಯಾವುದೇ ಮಾಹಿತಿ ಮುಚ್ಚಿಡದೆ ಹಂಚಿಕೊಂಡದ್ದು ವಿಶೇಷ. ನಿಜಕ್ಕೂ ಸಂಕಷ್ಟ ಪರಿಸ್ಥಿತಿಯಲ್ಲಿ ಸಾಮಾಜಿಕ ಮಾಧ್ಯಮವನ್ನು ಒಂದು ಪ್ರಬಲ ಸಂವಹನ ವ್ಯವಸ್ಥೆಯಾಗಿ ಮಾರ್ಪಡಿಸಿದ ರೀತಿ ಅನನ್ಯ. ಈ ಮಹಿಳಾ ಅಧಿಕಾರಿಗಳ ಧೈರ್ಯ ಹಾಗೂ ಸಮಯಪ್ರಜ್ಞೆಯನ್ನು ಮೆಚ್ಚಲೇಬೇಕು. ಅದಕ್ಕೆ ಒಂದು ದೊಡ್ಡ ವಂದನೆಗಳು. ಅಬ್ಬಾ… ಸಾಮಾಜಿಕ ಮಾಧ್ಯಮವೇ ಎನಿಸಿದ ಕ್ಷಣವದು.
***
ಅದೇ ಇನ್ನೊಂದು ಪುಟವನ್ನು ಹೊರಳಿ ಹಾಕೋಣ. ನಾಲ್ಕೈದು ದಿನಗಳ ಹಿಂದಿನ ಹರಿಯಾಣದ ಹಿಂಸೆಯನ್ನು ಕಂಡೆವು. ಅಲ್ಲಿ ದುರ್ಘಟನೆ ನಡೆಯುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಟ್ವಿಟರ್‌ನಲ್ಲಿ ರಾಶಿ ರಾಶಿ ಬೀಳತೊಡಗಿದವು. ಎಲ್ಲವೂ ದಳ್ಳುರಿ ಹೊತ್ತಿ ಉರಿಯುತ್ತಿರುವ ಚಿತ್ರಗಳು, ಕಲ್ಲು, ಬಂದೂಕಿನ ಗುಂಡಿನ ಶಬ್ದಗಳು, ಕಾರುಗಳು ಉರಿದು ಭಸ್ಮವಾಗುತ್ತಿರುವ ವೀಡಿಯೋಗಳು ಇತ್ಯಾದಿ. ಎಲ್ಲವೂ ಕುಲುವಿನಲ್ಲಿ ಬಿದ್ದ ರಣಭೀಕರ ಮಳೆಯ ಪ್ರವಾಹಕ್ಕಿಂತ ನೂರರಷ್ಟು ಹೆಚ್ಚು ಎನ್ನುವಂತೆ ಈ ಹರಿಯಾಣದ ದೃಶ್ಯಗಳು ಹಂಚಿಕೆಯಾದವು. ಅದಕ್ಕೆ ನೂರಾರು ಕಾಮೆಂಟ್‌ಗಳು, ಅದಕ್ಕೆ ಪೂರಕವಾದ ಮತ್ತೂಂದಿಷ್ಟು ಹಳೆಯ ಹಿಂಸೆಯ ವೀಡಿಯೋಗಳು, ಕೆಲವರ ಹೇಳಿಕೆಗಳು, ಪರ-ವಿರೋಧದ ಅಭಿಪ್ರಾಯಗಳು, ಆರೋಪ-ಪ್ರತ್ಯಾರೋಪಗಳು ತಮ್ಮ ವಾದವನ್ನು ಮಂಡಿಸಲು ಸಾಕ್ಷ್ಯವೆನ್ನುವಂತೆ ಮತ್ತೂಂದಿಷ್ಟು ರೌರವ ದೃಶ್ಯದ ವೀಡಿಯೋಗಳು, ಫ್ಯಾಕ್ಟ್ ಚೆಕ್ ಎನ್ನುವ ದೃಷ್ಟಿಯಲ್ಲಿ ಮತ್ತೂಂದಿಷ್ಟು ಅಂಥದ್ದೇ ದೃಶ್ಯಗಳು, ವಿಚಿತ್ರವೆಂದರೆ ಮಾನವ ಹಕ್ಕುಗಳು, ಅಹಿಂಸಾ ಪ್ರತಿಪಾದಕರು, ಫ್ಯಾಕ್ಟ್ ಚೆಕರ್ ಎನ್ನುವ ಮಹಾಶಯರೂ ಈ ಕೆಸರು ನೀರನ್ನು ಕಲಕುವ ಆಟದ ಪೈಪೋಟಿಯಲ್ಲಿ ಹಿಂದುಳಿಯಲಿಲ್ಲ.
ಹಾಗಾಗಿಯೇ ಏನೋ? ಎರಡು ದಿನಗಳಾದರೂ ಈ ಪ್ರವಾಹ ನಿಲ್ಲಲೇ ಇಲ್ಲ. ಬಗ್ಗಡ ಎಷ್ಟು ಉಕ್ಕಿದರೂ ಅಷ್ಟೇ. ಆದರೂ ಅ ವಾಸ್ತವವನ್ನು ಮರೆತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಮಾಡಿದರು. ಒಟ್ಟಿನಲ್ಲಿ ಕೆಸರಿನ ರಾಡಿ, ಅದರಲ್ಲೇ ಪರಸ್ಪರ ಎರಚಾಟ ಎಲ್ಲವೂ ನಡೆಯಿತು. ಇಂಥ ಉದಾಹರಣೆಗಳಿಗೆ ಕೊನೆಯೇ ಇಲ್ಲ.
ಇದನ್ನು ಕಂಡಾಗ ಅಯ್ಯೋ ಸಾಮಾಜಿಕ ಮಾಧ್ಯಮ ಎನಿಸಿದ್ದು ಸತ್ಯ.
***
ಎರಡೂ ಸನ್ನಿವೇಶಗಳು ಒಂದು ಬಗೆಯ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ. ಯಾವುದು ಸರಿ? ಇದು ಸತ್ಯ, ಅದೂ ಸತ್ಯವೇ? ಅದು ಸತ್ಯ, ಇದು ಸುಳ್ಳೇ? ಅಥವಾ ಸತ್ಯ ಇವೆರಡನ್ನೂ ಬಿಟ್ಟು ಬೇರೆ ಇದೆಯೇ? ಇದೇ ಸಂದರ್ಭದಲ್ಲಿ ಇದ್ಯಾವ ತೆರದಲ್ಲಿ ಮಾಹಿತಿ ಹಂಚಿಕೆ ಎಂಬುದೂ ತಿಳಿಯುತ್ತಿಲ್ಲ. ಒಂದು ಘನಘೋರ ಹಿಂಸೆಯ ದೃಶ್ಯವನ್ನು ಹಸಿಹಸಿಯಾಗಿ ಬಿತ್ತರಿಸುವುದು, ವೈರಲ್ ಆಗಬೇಕೆಂಬ, ಮಾಡಬೇಕೆಂಬ ಹೆಸರಿನಲ್ಲಿ ಎಲ್ಲವನ್ನೂ ಪ್ರಸಾರಿಸುವುದು ಅಗತ್ಯವೇ?, ಔಚಿತ್ಯವೇ?- ಎರಡೂ ಚರ್ಚೆಯಾಗಬೇಕಾದ ಸಂಗತಿಗಳೇ.ಇದರ ಮಧ್ಯೆ ಭಸ್ಮಾಸುರನ ಕಥೆಯೂ ನೆನಪಾಗಿದ್ದು ಸುಳ್ಳಲ್ಲ.
***
ಮಗುವೊಂದು ಗುಲಾಬಿ ತೋಟಕ್ಕೆ ಹೋಯಿತು. ಸುತ್ತಲೂ ಬಣ್ಣ ಬಣ್ಣದ ಗುಲಾಬಿಗಳು. ಒಂದು ಕಡುಕೆಂಪಾದರೆ, ಮತ್ತೊಂದುಹಳದಿ. ಅವುಗಳ ಮಧ್ಯೆ ದೊಡ್ಡ ಎಸಳಿನ ಬಿಳಿ ಗುಲಾಬಿ. ಪಕ್ಕದಲ್ಲೇ ಮತ್ತೂಂದು ಬಣ್ಣದ್ದು. ಆದರೆ ನೀಲಿ ಮಾತ್ರ ಇರಲಿಲ್ಲ. ಹೀಗೆ ಇಡೀ ತೋಟವೆಲ್ಲ ತಿರುಗಿ ಬಂದ ಮೇಲೆ ಒಂದು ಗುಲಾಬಿಯನ್ನು ಕಿತ್ತುಕೊಳ್ಳೋಣ ಎಂದೆನಿಸಿತು. ಕೀಳಲೆಂದು ಕೈ ಮುಂದೆ ಮಾಡುತ್ತಿದ್ದಂತೆಯೇ ಆ ಹೂವಿನ ದಂಟಿನ ಕೆಳಗಿದ್ದ ಮುಳ್ಳೊಂದು, “ನಿಲ್ಲು’ ಎಂದಿತು. ಆದರೆ ಹೂವಿಗೇನೋ ಆ ಮಗುವಿನ ಖುಷಿ, ಸಂಭ್ರಮ, ಉತ್ಸಾಹ ಕಂಡು “ನನ್ನ ಎತ್ತಿಕೋ’ ಎನ್ನುವಂತೆ ಮುಂದೆ ಮಾಡಿತು. ಈ ಮಗುವಿಗೆ ಏನು ಮಾಡಬೇಕೆಂದು ತೋಚದೇ ಕಂಗಾಲಾಗಿ ನಿಂತಿತು. ಕೀಳಲು ಹೋದರೆ ಮುಳ್ಳು ಬಿಡುವುದಿಲ್ಲ, ಬೇಡ ಎಂದು ಸುಮ್ಮನಾದರೆ ಹೂವಿಗೆ ಬೇಸರವಾಗುತ್ತದೆ. ಹತ್ತಿರಕ್ಕೆ ಬಂದ ಅಮ್ಮ, ಆ ಮುಳ್ಳನ್ನೂ ಸಂತೈಸಿ, ಹೂವನ್ನೂ ಹಾರೈಸಿ ಮಗುವಿನ ಕೈಯಲ್ಲಿಟ್ಟಳು. ಮಗುವಿನ ಮುಖದ ಮುಗುಳ್ನಗೆಯಲ್ಲಿ ಆ ಗುಲಾಬಿ ಅರಳಿತು. ಅಂಥ ಅಮ್ಮ ಎಲ್ಲಿ ಸಿಕ್ಕಿಯಾಳು? ಗೊತ್ತಿದ್ದರೆ ತಿಳಿಸಿ.
Related Articles
Advertisement