ಬಾಬು ಜಗಜೀವನ್ ರಾಮ್- ಅವರು ಬಾಬೂಜಿ ಎಂದೇ ಪ್ರಸಿದ್ಧರಾಗಿದ್ದವರು. ಶೋಷಿತರ ಪರವಾಗಿ ಜೀವನಪೂರ್ತಿ (1908-86) ಹೋರಾಟ ನಡೆಸಿದವರು. ತನ್ನ ಹರೆಯದಲ್ಲೇ ‘ಅಖಿಲ ಭಾರತ ಶೋಷಿತ ವರ್ಗಗಳ ಲೀಗ್’ ಸ್ಥಾಪಿಸಿ ಜಾಗೃತಿ ಮೂಡಿಸಿದವರು.
ಬಿಹಾರದ ಬಾಬೂಜಿ ಅವರು ಪ್ರಧಾನಿ ಮೊರಾರ್ಜಿ ದೇಸಾೖ ಅವರ (ಜನತಾ ಪಕ್ಷ) ಸಂಪುಟದಲ್ಲಿ (1977-79) ಉಪ ಪ್ರಧಾನಿಯಾಗಿದ್ದರು. ಅದಕ್ಕೆ ಮೊದಲು ಇಂದಿರಾ ಗಾಂಧಿ ಮಂತ್ರಿಮಂಡಲದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದವರು. ಅವರು ರಕ್ಷಣಾ ಸಚಿವರಾಗಿದ್ದಾಗಲೇ 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯಿತು. ಭಾರತ ಯುದ್ಧ ಗೆದ್ದಿತು; ಪಾಕ್ ವಿಭಜನೆಯಾಗಿ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂತು.
ಇಂದಿರಾ ತುರ್ತು ಪರಿಸ್ಥಿತಿ ಹೇರಿದಾಗ ಬಾಬೂಜಿ ಸಂಪುಟದಲ್ಲಿದ್ದವರು. ಬಳಿಕ ಸಂಪುಟಕ್ಕೆ ರಾಜಿನಾಮೆ ನೀಡಿದ ಪ್ರಥಮ ಹಿರಿಯ ಸಚಿವರಾಗಿ ದೇಶಾದ್ಯಂತ ಸಂಚಲನ ಮೂಡಿಸಿದವರು. ಅನಂತರ ಲೋಕಸಭೆಗೆ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್ ಸೋತಿತು. ವಿಪಕ್ಷಗಳು ಒಂದಾಗಿ ಕಟ್ಟಿದ್ದ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಪ್ರಧಾನಿ ಪಟ್ಟಕ್ಕೆ ಬಾಬೂಜಿ ಹೆಸರಿತ್ತು. ಆದರೆ ಅವರು ಉಪ ಪ್ರಧಾನಿ ಆಗ ಬೇಕಾಯಿತು. ಈ ಸರಕಾರ ಅಲ್ಪಾಯುಷಿಯಾಗಿತ್ತು!
ಬಾಬೂಜಿ ಉಪಪ್ರಧಾನಿಯಾಗಿದ್ದಾಗ ಮಂಗಳೂರಿಗೆ ಬಂದಿದ್ದರು. ಅದು ಕರ್ನಾಟಕದ ವಿಧಾನಸಭೆಗೆ 1978ರಲ್ಲಿ ನಡೆದ ಚುನಾವಣೆಯ ಸಂದರ್ಭ. ಆಗ ಮಂಗಳೂರು ಕ್ಷೇತ್ರ (ಈಗ ಭೌಗೋಳಿಕ ಸ್ವರೂಪ ಸ್ವಲ್ಪ ವಿಸ್ತರಿಸಿ ಮಂಗಳೂರು ದಕ್ಷಿಣ ಎಂದಾಗಿದೆ) ಜನತಾ ಪಕ್ಷದ ಅಭ್ಯರ್ಥಿ ಶಾರದಾ ಆಚಾರ್. ನೆಹರೂ ಮೈದಾನದಲ್ಲಿ ಬಾಬೂಜಿ ಅವರ ಸಾರ್ವಜನಿಕ ಚುನಾವಣಾ ಪ್ರಚಾರ ಭಾಷಣ ಏರ್ಪಾಡಾಗಿತ್ತು. (ವಿದ್ಯಾರ್ಥಿಯಾಗಿದ್ದ ನಾನು ಈ ಕಾರ್ಯಕ್ರಮದ ಪ್ರೇಕ್ಷಕರಲ್ಲಿ ಓರ್ವನಾಗಿದ್ದೆ). ಗಣನೀಯ ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
ತುರ್ತು ಪರಿಸ್ಥಿತಿಯ ದೌರ್ಜನ್ಯ- ಇಂದಿರಾ ಸರ್ವಾಧಿಕಾರ- ಹಸಿರು ಕ್ರಾಂತಿ-ದಲಿತರ ಸಮಸ್ಯೆ- ಸಾಮಾಜಿಕ ನ್ಯಾಯ- ಕರ್ನಾಟಕದಲ್ಲೂ ಜನತಾಪಕ್ಷ ಅಧಿಕಾರಕ್ಕೆ ಬರಬೇಕಾದ ಅಗತ್ಯ ಬಗ್ಗೆ ಬಾಬೂಜಿ 70 ನಿಮಿಷ ಮಾತನಾಡಿದ್ದರು. ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ- ರಾಷ್ಟ್ರೀಯ ಜನಸಂಘ ಪಕ್ಷ ಮೂಲದ ಶಾರದಾ ಆಚಾರ್ ಅವರು ಪ್ರಸಿದ್ಧ ಸಾಮಾಜಿಕ- ರಾಜಕೀಯ ಮುಂದಾಳಾಗಿದ್ದವರು. 1964ರಲ್ಲಿ ಪ್ರಥಮವಾಗಿ ಮಂಗಳೂರು ನಗರಸಭೆಗೆ ಆಗಿನ ಮೂರನೇ ಡಿವಿಜನ್ ವಾರ್ಡ್‌ನಿಂದ ಆಯ್ಕೆಯಾದವರು. ಮೂರು ಬಾರಿ ಅವರು ಇಲ್ಲಿ ಆಯ್ಕೆಯಾಗಿದ್ದರು. ನಗರಸಭೆಯ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದವರು.
ಬಾಬೂಜಿ ಆಗಿನ ಸಂದರ್ಭದ ಈ ಪ್ರದೇಶ ಕಾಂಗ್ರೆಸ್ ಭದ್ರಕೋಟೆ ಎಂದು ತಿಳಿದವರಾಗಿದ್ದರು. ಆದ್ದರಿಂದ, ಕೇಂದ್ರದಂತೆ ರಾಜ್ಯದಲ್ಲೂ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮತದಾರರನ್ನು ವಿನಂತಿಸಿದ್ದರು.
ಮನೋಹರ ಪ್ರಸಾದ್