ಹರಪನಹಳ್ಳಿ: ಉದ್ಯೋಗ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಸಾಮಾಜಿಕ ನ್ಯಾಯದಡಿ ಹೆಣ್ಣು ಗಂಡು ಎಂಬ ಬೇಧಬಾವ ತೊರದೇ ಸರ್ವರಿಗೂ ಸರ್ಕಾರ ಸಮಾನತೆ ಕಲ್ಪಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಹೇಳಿದರು.
ಪಟ್ಟಣದ ನ್ಯಾಯಲಯದ ಆವರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಾಮಾಜಿಕನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಸಮಾಜದಲ್ಲಿ ತಂದೆ-ತಾಯಿಗಳು ಹೆಣ್ಣು, ಗಂಡು ಎಂಬ ಬೇಧಬಾವ ಮಾಡುವುದು ಸರಿಯಲ್ಲ. ನಾವು ಇನ್ನೊಬ್ಬರಿಗೆ ನ್ಯಾಯ ಹೇಳಬೇಕಾದರೆ ನ್ಯಾಯ, ನೀತಿ, ಧರ್ಮ ಪಾಲನೆ ಮಾಡಬೇಕು ಎಂದರು. ಸಿವಿಲ್ ಕಿರಿಯ ನ್ಯಾಯದೀಶ ವೈ. ಕೆ.ಬೇನಾಳ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದ ಹಿಂದುಳಿದ ಹಾಗೂ ಆರ್ಥಿಕವಾಗಿ ದುರ್ಬಲರಾದ ಜನಸಾಮಾನ್ಯರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ.
ತಿಂಗಳಎರಡನೇ ಶನಿವಾರದಂದು ಜನತಾ ನ್ಯಾಯಲಯ ಮೂಲಕ ತ್ವರಿತಗತಿಯಲ್ಲಿ ಪ್ರಕರಣಗಳನ್ನು ಬಗೆಹರಿಸಲಾಗುತ್ತಿದೆ ಎಂದರು. ನ್ಯಾಯವಾದಿ ಟಿ.ಎಚ್. ಎಂ.ಮಹೇಶ ಮಾತನಾಡಿ, ಲಿಂಗ, ಜಾತಿ, ಧರ್ಮ ತಾರತಮ್ಯವನ್ನು ಸರಿ ಮಾಡಲೆಂದು ವಿಶ್ವ ಮಟ್ಟದಲ್ಲಿ ಸಾಮಾಜಿಕ ನ್ಯಾಯ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ತಮ್ಮತನ ಕಳೆದುಕೊಂಡು ತಂದೆ-ತಾಯಿ ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ಅಭಿಯೋಜಕ ಟಿ.ಎಸ್. ಗೋಪಿಕಾ, ವಕೀಲರ ಸಂಘದಉಪಾಧ್ಯಕ್ಷ ಎಚ್.ಸಿ.ವೀರನಗೌಡ, ಕಾರ್ಯದರ್ಶಿ ಡಿ.ಬಿ.ವಾಸುದೇವ್,ವಕೀಲರಾದ ಎಂ.ಮೃತ್ಯುಂಜಯ, ಬಾಗಳಿ ಮಂಜುನಾಥ, ಕರಿಯಪ್ಪ, ಡಿ.ಹನುಮಂತ, ಎಚ್.ಮಲ್ಲಿಕಾರ್ಜುನ, ನಂದೀಶನಾಯ್ಕ, ಜೆ.ಸೀಮಾ, ಬಂಡ್ರಿ ಆನಂದ ಮತ್ತಿತರರಿದ್ದರು.