ಸದ್ಯ ರಾಜ್ಯದಲ್ಲಿ ಮಕ್ಕಳು ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕುರಿತ ಚರ್ಚೆ ಒಂದು ಕಡೆಯಾದರೆ, ಸರ್ಕಾರಿ ಶಾಲೆಗಳ ದುಃಸ್ಥಿತಿಯ ಕುರಿತು ಇನ್ನೊಂದು ಕಡೆ ಚರ್ಚೆಯಾಗುತ್ತಿದೆ. ಈ ಕುರಿತು ಎಲ್ಲರಿಗಿಂಥ ಹೆಚ್ಚಾಗಿ ತಮ್ಮದೇ ರೀತಿಯಲ್ಲಿ ಸಿನಿಮಾದವರು ಪ್ರತಿಭಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಂದಷ್ಟು ಸಿನಿಮಾಗಳು ಈ ವಿಚಾರವನ್ನೇ ಕಥಾವಸ್ತುವನ್ನಾಗಿಸಿದೆ. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, “ಅಸತೋಮ ಸದ್ಗಮಯ’, “ಪ್ರಾರ್ಥನೆ’ , “ದ್ರೋಣ’ ಚಿತ್ರಗಳಲ್ಲಿ ಸರ್ಕಾರಿ ಶಾಲೆಗಳ ಅಳಿವು-ಉಳಿವಿನ ಬಗ್ಗೆಯೇ ಕಥೆ ಮಾಡಲಾಗಿದೆ.
ಒಂದು ಕಡೆ ಲವ್‌ಸ್ಟೋರಿ, ಇನ್ನೊಂದು ಕಡೆ ಆ್ಯಕ್ಷನ್, ಮತ್ತೂಂದು ಕಡೆ ಹಾರರ್ … ಹೀಗೆ ಕನ್ನಡ ಚಿತ್ರರಂಗದಲ್ಲಿ ವಿವಿಧ ಜಾನರ್‌ನ ಸಿನಿಮಾಗಳು ಸಾಕಷ್ಟು ಬರುತ್ತಲೇ ಇವೆ. ಇವೆಲ್ಲದರ ಕಥಾವಸ್ತು ಕಾಲ್ಪನಿಕವಾದುದು. ನಿರ್ದೇಶಕ ತನ್ನ ಕಲ್ಪನೆಯಲ್ಲಿ ಒಂದು ಕಥೆ ಹೆಣೆದಿರುತ್ತಾನೆ. ಅದನ್ನು ಆತ ತನ್ನದೇ ಶೈಲಿಯಲ್ಲಿ ನಿರೂಪಿಸಿರುತ್ತಾನೆ. ಇದು ಒಂದು ಕಡೆಯಾದರೆ, ಕನ್ನಡ ಚಿತ್ರರಂಗ ಸಾಮಾಜಿಕ ಸಮಸ್ಯೆಗಳನ್ನಿಟ್ಟುಕೊಂಡು ಕೂಡಾ ಸಾಕಷ್ಟು ಸಿನಿಮಾಗಳನ್ನು ಮಾಡಿವೆ. ಮನರಂಜನೆಯ ಜೊತೆ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡ ಚಿತ್ರರಂಗ ಸ್ಪಂದಿಸಿದಷ್ಟು ಬಹುಶಃ ಬೇರ್ಯಾವ ಚಿತ್ರರಂಗವೂ ಸ್ಪಂದಿಸಿದಂತಿಲ್ಲ. ಅದು ರಾಜ್ಯದ ಕಾವೇರಿ ಹೋರಾಟವಾಗಿರಬಹುದು, ಗಡಿ ಸಮಸ್ಯೆಯಾಗಿರಬಹುದು, ಸರ್ಕಾರಿ ಶಾಲೆಗಳ ಸ್ಥಿತಿಗತಿಯ ಸುತ್ತ ಇರಬಹುದು ಅಥವಾ ರೈತರ ಸಮಸ್ಯೆ ಇರಬಹುದು, ಗಣಿ ಸಮಸ್ಯೆ, ಇನ್ನೂ ಮುಂದಕ್ಕೆ ಹೋಗಿ ಹೇಳುವುದಾದರೆ ನೋಟ್‌ಬ್ಯಾನ್ ಎಫೆಕ್ಟ್, ನಿರ್ಭಯಾ ಪ್ರಕರಣ, ಸ್ವಚ್ಛ ಭಾರತ ಅಭಿಯಾನ … ಹೀಗೆ ಸಮಾಜದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯಗಳನ್ನಿಟ್ಟುಕೊಂಡು ತಮ್ಮದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ, ಪರಿಹಾರ ಸೂಚಿಸಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಟ್ಟಿಕೊಡುವಾಗ ಅದನ್ನು ಹೆಚ್ಚು ಕಮರ್ಷಿಯಲ್ ಆಗಿ ಕಟ್ಟಿಕೊಡೋದು ಕೂಡಾ ತಪ್ಪಾಗುತ್ತದೆ. ಇದ್ದಿದ್ದನ್ನು ಇದ್ದಂತೆ ಕಟ್ಟಿಕೊಟ್ಟರೆ ಅದು ಡಾಕ್ಯುಮೆಂಟರಿ ಆಗುವ ಭಯ. ಈ ಸಣ್ಣ ಎಳೆಯ ಮಧ್ಯೆ ಕನ್ನಡ ಚಿತ್ರಗಳು ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ವಿಷಯಗಳನ್ನು ಸಿನಿಮಾ ಮಾಡಿವೆ, ಮಾಡುತ್ತಿವೆ. ಅದೇ ಕಾರಣದಿಂದ ನೀವು “ನೈಜ ಘಟನೆಯಾಧಾರಿತ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಸಾಕಷ್ಟು ಸಿನಿಮಾಗಳನ್ನು ನೋಡಬಹುದು. ಕೆಲವು ಸಿನಿಮಾಗಳು ದೊಡ್ಡಮಟ್ಟದಲ್ಲಿ ಸುದ್ದಿಯಾದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಕಥೆಯ ಹಾಗೂ ನಿರೂಪಣೆಯಿಂದ ಮೆಚ್ಚುಗೆ ಪಡೆದಿವೆ. ಸಾಮಾಜಿಕ ವಿಷಯಗಳನ್ನಿಟ್ಟುಕೊಂಡು ಕನ್ನಡ ಸಿನಿಮಾಗಳು ಸಿನಿಮಾ ಬರುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ. ಆಯಾಯ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಸಿನಿಮಾಗಳು ಬಂದಿವೆ, ಪ್ರೇಕ್ಷಕರ ಮೇಲೆ ಗಾಢ ಪರಿಣಾಮ ಬೀರಿವೆ. ಅದರಲ್ಲಿ ಮುಖ್ಯವಾಗಿ ಹೆಸರಿಸಬಹುದಾದ ಸಿನಿಮಾ “ಬಂಗಾರದ ಮನುಷ್ಯ’. ಡಾ.ರಾಜ್‌ಕುಮಾರ್ ಅವರ ಈ ಸಿನಿಮಾ ಪ್ರೇಕ್ಷಕರಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ್ದು ಗೊತ್ತಿರುವ ವಿಚಾರ. ಈ ಸಿನಿಮಾ ನೋಡಿದ ಅದೆಷ್ಟೋ ಯುವಕರು ಪಟ್ಟಣ ಬಿಟ್ಟು ಹಳ್ಳಿಗೆ ಬಂದು ಕೃಷಿಯತ್ತ ಮುಖ ಮಾಡಿದರು. ಅದು ಆ ಸಿನಿಮಾದ ಎಫೆಕ್ಟ್.
ಸದ್ಯ ರಾಜ್ಯದಲ್ಲಿ ಮಕ್ಕಳು ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕುರಿತ ಚರ್ಚೆ ಒಂದು ಕಡೆಯಾದರೆ, ಸರ್ಕಾರಿ ಶಾಲೆಗಳ ದುಃಸ್ಥಿತಿಯ ಕುರಿತು ಇನ್ನೊಂದು ಕಡೆ ಚರ್ಚೆಯಾಗುತ್ತಿದೆ. ಈ ಕುರಿತು ಸಿನಿಮಾ ಮಂದಿ ಕೂಡಾ ಚಿಂತಿಸಿದ್ದಾರೆ. ಸರ್ಕಾರಿ ಶಾಲೆಗಳ ಪರವಾಗಿ ನಿಂತಿದ್ದಾರೆ. ತಮ್ಮದೇ ರೀತಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು, ಪ್ರಯತ್ನಿಸಿವೆ. “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, “ಅಸತೋಮ ಸದ್ಗಮಯ’, “ಪ್ರಾರ್ಥನೆ’ , “ದ್ರೋಣ’, “ಕೈಟ್ ಬ್ರದರ್ಸ್’ ಚಿತ್ರಗಳಲ್ಲಿ ಸರ್ಕಾರಿ ಶಾಲೆಗಳ ಅಳಿವು-ಉಳಿವಿನ ಬಗ್ಗೆಯೇ ಕಥೆ ಮಾಡಲಾಗಿದೆ. ಮಕ್ಕಳು ಕಡಿಮೆ ಇರುವ ಸುಮಾರು 28 ಸಾವಿರ ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿರುವುದು ಸದ್ಯ ಅನೇಕ ಪೋಷಕರಲ್ಲಿ, ಮಕ್ಕಳಲ್ಲಿ ಹಾಗೂ ಕನ್ನಡ ಪ್ರೇಮಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ಒಂದಷ್ಟು ಸಿನಿಮಾಗಳು ಈ ವಿಚಾರವನ್ನೇ ಕಥಾವಸ್ತುವನ್ನಾಗಿಸಿದೆ. ಈಗಾಗಲೇ ತೆರೆಕಂಡಿರುವ “ಪ್ರಾರ್ಥನೆ’ ಹಾಗೂ “ಅಸತೋಮ ಸದ್ಗಮಯ’ ಸಿನಿಮಾದಲ್ಲಿ ಕನ್ನಡ ಶಾಲೆಗಳ ಕುರಿತು ಹೇಳಲಾಗಿತ್ತು. ಅದರಲ್ಲೂ ಮೊನ್ನೆ ಮೊನ್ನೆ ತೆರೆಕಂಡ “ಅಸತೋಮ’ ದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಿನ್ನೆಲೆಯಲ್ಲಿನ ಮಾಫಿಯಾ, ಇದರಿಂದ ಶಿಕ್ಷಣ ವಂಚಿತರಾಗುತ್ತಿರುವ ಮಕ್ಕಳು, ಶಾಲೆಯನ್ನು ಮತ್ತೆ ಆರಂಭಿಸಲು ನಡೆಸುವ ಹೋರಾಟದ ವಿಷಯವನ್ನಿಟ್ಟುಕೊಂಡೇ ಈ ಸಿನಿಮಾ ಮಾಡಲಾಗಿತ್ತು. ಬಿಡುಗಡೆಯ ಹಂತದಲ್ಲಿರುವ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲೂ ಕನ್ನಡ ಶಾಲೆಗಳ ಜೊತೆಗೆ ಗಡಿಭಾಗದಲ್ಲಿ ಕನ್ನಡ ಯಾವ ರೀತಿ ನಶಿಸಿ ಹೋಗುತ್ತಿದೆ, ಅಲ್ಲಿನ ಕನ್ನಡಿಗರ ಪರಿಸ್ಥಿತಿ ಹೇಗಿದೆ ಎಂಬುದನ್ನು ಹೇಳಲಾಗಿದೆ. ಇತ್ತೀಚೆಗಷ್ಟೇ ಮುಹೂರ್ತ ಕಂಡಿರುವ ಶಿವರಾಜಕುಮಾರ್ ಅವರ “ದ್ರೋಣ’ ಸಿನಿಮಾ ಕೂಡಾ ಕನ್ನಡ ಶಾಲೆಗಳ ಕುರಿತಾದ ಕಥೆಯನ್ನು ಹೊಂದಿದೆ. ಕನ್ನಡ ಶಾಲೆಗಳು ಮುಚ್ಚುವುದರ ವಿರುದ್ಧ ನಾಯಕ ನಟನ ಹೋರಾಟವನ್ನು ಇಲ್ಲಿ ಪ್ರಮುಖವನ್ನಾಗಿಸಿ ಕಥೆ ಹೆಣೆಯಲಾಗಿದೆ. ಶಿವರಾಜಕುಮಾರ್ ಇಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ನಟಿಸುತ್ತಿದ್ದಾರೆ.
ಇದು ಸರ್ಕಾರಿ ಶಾಲೆಯ ಸುತ್ತ ಬಂದ ಸಿನಿಮಾ ವಿಚಾರವಾದರೆ ನಾನಾ ವಿಷಯಗಳ ಕುರಿತಾಗಿ ಸಿನಿಮಾಗಳು ಬಂದಿವೆ, ಆ ಮೂಲಕ ಅನ್ಯಾಯದ ವಿರುದ್ಧ ತಮ್ಮ ಧ್ವನಿ ಎತ್ತಿವೆ. ಶಿವರಾಜಕುಮಾರ್ ಅವರ “ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ’, ಸುದೀಪ್ ಅವರ “ಹೆಬ್ಬುಲಿ’, ಪುನೀತ್‌ರಾಜಕುಮಾರ್ ಅವರ “ಪೃಥ್ವಿ’, “ರಣವಿಕ್ರಮ’, ಹೊಸಬರ “ಮಿಸ್ಟರ್ ಚೀಟರ್ ರಾಮಾಚಾರಿ’ ಹೀಗೆ ಒಂದಷ್ಟು ಸಿನಿಮಾಗಳು ಸಾಮಾಜಿಕ ಅಂಶಗಳನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾ ಮಾಡಿವೆ.
ನೀವೇ ಸೂಕ್ಷ್ಮವಾಗಿ ಗಮನಿಸಿದರೆ ಶಿವರಾಜಕುಮಾರ್ “ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ರೈತರ ಕುರಿತಾಗಿ ಹೇಳಲಾಗಿತ್ತು. ರೈತರು ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಗಬೇಕು ಮತ್ತು ಅದನ್ನು ನಿಗದಿ ಮಾಡುವ ಹಕ್ಕು ಕೂಡಾ ಅವರಿಗೆ ಇರಬೇಕು ಎನ್ನುವ ಅಂಶದೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಈ ಸಿನಿಮಾ ಬಗ್ಗೆ ವ್ಯಾಪಕ ಪ್ರಶಂಸೆ ಕೇಳಿಬಂದಿತ್ತು ಕೂಡಾ. ಇನ್ನು ಪುನೀತ್ ಅವರ “ಪೃಥ್ವಿ’ಯಲ್ಲಿ ಮೈನಿಂಗ್‌ನಲ್ಲಿನ ಅಕ್ರಮ ಹಾಗೂ ಅದರಿಂದ ಅಲ್ಲಿನ ನೀರು ಯಾವ ಕಲುಷಿತವಾಗುತ್ತಿದೆ ಎಂಬ ಅಂಶವನ್ನು ಬಿಂಬಿಸಿದರೆ, “ರಣವಿಕ್ರಮ’ದಲ್ಲಿ ಆಂಧ್ರ-ಕರ್ನಾಟಕ ಗಡಿಭಾಗದ ಸಮಸ್ಯೆಯ ಬಗ್ಗೆ ಹೇಳಲಾಗಿತ್ತು. ಸುದೀಪ್ ಅವರ “ಹೆಬ್ಬುಲಿ’ ಚಿತ್ರದಲ್ಲಿ ಜನರಿಕ್ ಔಷಧಿಗಳಲ್ಲಿನ ಅವ್ಯವಹಾರ ಹಾಗೂ ಅದು ಜನರಿಗೆ ತಲುಪುವ ಕುರಿತಾದ ಹೋರಾಟವನ್ನು ಕಟ್ಟಿಕೊಡಲಾಗಿತ್ತು. ಇಷ್ಟೇ ಅಲ್ಲದೇ, ಇಡೀ ದೇಶವನ್ನು ತಲ್ಲಣಗೊಳಿಸಿದ ನಿರ್ಭಯಾ ಪ್ರಕರಣ, ಸ್ವತ್ಛ ಭಾರತ ಅಭಿಯಾನ, ನೋಟ್ ಬ್ಯಾನ್, ನೀರಿನ ಸಮಸ್ಯೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸವಾಗಲು ಅಲೆಯಬೇಕಾದ ಸ್ಥಿತಿ … ಹೀಗೆ ಅನೇಕ ಅಂಶಗಳನ್ನಿಟ್ಟುಕೊಂಡು ಸಿನಿಮಾಗಳು ಬಂದಿವೆ.
ಸಾಮಾಜಿಕ ಸಮಸ್ಯೆಗಳನ್ನು ಸಿನಿಮಾ ಮಾಡುವ ನಿರ್ದೇಶಕರಿಗೆ ಸ್ಟಾರ್‌ಗಳು ಸಾಥ್ ಕೊಟ್ಟರೆ, ಆ ಸಿನಿಮಾ ಹೆಚ್ಚು ಜನರಿಗೆ ತಲುಪುವಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ ಒಂದಷ್ಟು ಸ್ಟಾರ್‌ಗಳು ಈ ತರಹದ ಪ್ರಯತ್ನಗಳಿಗೆ ಬೆನ್ನುತಟ್ಟುತ್ತಿದ್ದಾರೆ. ಶಿವರಾಜಕುಮಾರ್, ಪುನೀತ್, ಸುದೀಪ್ ಈಗಾಗಲೇ ಇಂತಹ ಪ್ರಯತ್ನಗಳಲ್ಲಿ ನಟಿಸಿದ್ದು, ಮತ್ತಷ್ಟು ಸ್ಟಾರ್‌ಗಳು ಪ್ರೋತ್ಸಾಹ ನೀಡಬೇಕಿದೆ.
ಎಲ್ಲಾ ಓಕೆ, ಜ್ವಲಂತ ಸಮಸ್ಯೆಗಳನ್ನು ಸಿನಿಮಾ ಮಾಡಿದ ಕೂಡಲೆ ಪರಿಹಾರ ಸಿಕ್ಕಿಬಿಡುತ್ತದಾ ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ. ಆದರೆ, ಒಂದು ಜಾಗೃತಿಯಂತೂ ಮೂಡುತ್ತದೆ. ಸಾಮಾನ್ಯ ವ್ಯಕ್ತಿಗೂ ಬೇಗನೇ ತಲುಪುವ, ಅರ್ಥವಾಗುವ ಮಾಧ್ಯಮವೊಂದಿದ್ದರೆ ಅದು ಸಿನಿಮಾ. ಇಂತಹ ಪ್ರಭಾವಿ ಮಾಧ್ಯಮಗಳಲ್ಲಿ ವಿಷಯವೊಂದು ಚರ್ಚೆಯಾದರೆ ಹೆಚ್ಚು ಸೂಕ್ತ ಎಂಬ ಕಾರಣವೂ ಇದರ ಹಿಂದಿದೆ.
ರವಿಪ್ರಕಾಶ್ ರೈ