ಕಾರ್ಕಳ: ಎ. 15ರಿಂದ ಲಾಕ್‌ಡೌನ್ ಮತ್ತಷ್ಟು ಬಿಗಿ ಮಾಡಲಾಗುವುದು, ಸಾಮಾಜಿಕ ಅಂತರವನ್ನು ಪ್ರತಿಯೋರ್ವರು ಪಾಲನೆ ಮಾಡಬೇಕೆಂದು ಪ್ರಧಾನಿ ಮೋದಿ ಹೇಳಿದ್ದರೂ ಬುಧವಾರ ಮಾತ್ರ ಕಾರ್ಕಳದ ವಿವಿಧ ಕಚೇರಿ, ದಿನಸಿ ಹಾಗೂ ಮೆಡಿಕಲ್ ಅಂಗಡಿಗಳಲ್ಲಿ ಜನರ ಅಂತರ ಕಣ್ಮರೆಯಾಗಿತ್ತು. ನಗರದ ಅಂಚೆ ಕಚೇರಿ, ಸಿಂಡಿಕೇಟ್, ಕೆನರಾ ಬ್ಯಾಂಕ್, ಬಹುತೇಕ ದಿನಸಿ ಅಂಗಡಿ, ಮೆಡಿಕಲ್ ಶಾಪ್ ಗಳಲ್ಲಿ ಗ್ರಾಹಕರು ಗುಂಪು ಗುಂಪಾಗಿರುವುದು ಕಂಡುಬಂತು. ಬೆಳಗ್ಗೆ 10ರ ವೇಳೆ ಬಹುತೇಕ ಎಲ್ಲ ಕಡೆ ಇದೇ ದೃಶ್ಯ ಕಂಡು ಬಂದಿದ್ದು, ಜನರು ನಿಲ್ಲಲು ಮಾಡಿರುವಂತಹ ಮಾರ್ಕ್‌ನಲ್ಲಿ ನಿಲ್ಲದೇ, ಕಚೇರಿ, ಅಂಗಡಿಗಳ ಬಾಗಿಲ ಬಳಿ ನಿಂತಿದ್ದರು.
ತಾತ್ಸಾರವೇಕೆ ?
ಉಡುಪಿ ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ ಹೊಸ ಕೋವಿಡ್ ಪ್ರಕರಣ ದಾಖಲಾಗಿಲ್ಲ, ಉಡುಪಿ ಜಿಲ್ಲೆ ಅಲರ್ಟ್ ಝೊನ್‌ನಲ್ಲಿದೆ ಎಂಬ ನೆಲೆಯಲ್ಲಿ ಜನತೆ ಸಾಮಾಜಿಕ ಅಂತರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೋ ಅಥವಾ ಪೊಲೀಸರ ಲಾಠಿ ರುಚಿ ಬೀಳದೇ ಅಂತರ ಕಾಯ್ದುಕೊಳ್ಳುವುದಿಲ್ಲ ಎಂಬ ನಿಲುವು ತಳೆದಿದ್ದಾರೋ ಗೊತ್ತಾಗದು.