ಬರ್ಲಿನ್ : ಲಾಕ್‌ಡೌನ್ ತೆರವುಗೊಂಡ ಬಳಿಕ ಸಾಮಾಜಿಕ ಅಂತರ ಪಾಲಿಸಲು ನಾನಾ ವಿಧದ ತಂತ್ರಗಳನ್ನು ಬಳಸಲಾಗುತ್ತಿದೆ. ಜರ್ಮನಿಯ ಈ ಕೆಫೆಯಲ್ಲಿ ಬಳಸುತ್ತಿರುವ ತಂತ್ರ ಭಲೇ ತಮಾಷೆಯಾಗಿದೆ. ಇಲ್ಲಿ ಗಿರಾಕಿಗಳಿಗೆ ಈಜುವಾಗ ತಲೆಗೆ ಕಟ್ಟಿಕೊಳ್ಳುವ ಪೂಲ್ ನೂಡಲ್ ನೀಡಲಾಗುತ್ತದೆ.
ನೆಲದಲ್ಲಿ ಗುರುತು ಹಾಕಿದ್ದರೂ ಜನರು ಇದನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಹಾಗೂ ಕೆಲವೊಮ್ಮೆ ತಪ್ಪಿ ಈ ಗುರುತನ್ನು ದಾಟಿ ಹೋಗುತ್ತಾರೆ. ಆದರೆ ಪೂಲ್ ನೂಡಲ್ ತೀರಾ ಹತ್ತಿರಕ್ಕೆ ಹೋದರೆ ಪರಸ್ಪರ ತಾಗುತ್ತದೆ. ಹೀಗಾಗಿ ಸಾಮಾಜಿಕ ಅಂತರ ಪಾಲಿಸುವುದು ಅನಿವಾರ್ಯವಾಗುತ್ತದೆ.
ಪ್ರತಿ ಗಿರಾಕಿಗೆ ಬಣ್ಣ ಬಣ್ಣದ ಪೂಲ್ ನೂಡಲ್ ಜೋಡಿಸಿದ ಟೋಪಿಯನ್ನು ನೀಡಲಾಗುತ್ತದೆ. ಪ್ರತಿ ಟೇಬಲ್‌ನ ಬಳಿಗೆ ಹೋಗಿ ಸಾಮಾಜಿಕ ಅಂತರ ಪಾಲನೆಯಾಗಿದೆಯೇ ಎಂದು ನೋಡುವುದು ಕಷ್ಟದ ಕೆಲಸ. ಅಲ್ಲದೆ ಇದರಿಂದ ಗಿರಾಕಿಗಳಿಗೂ ಕಿರಿಕಿರಿಯಾಗುತ್ತದೆ. ಹೀಗಾಗಿ ಪೂಲ್ ನೂಡಲ್ ಬಳಸಿದ್ದೇವೆ. ಇದು ನೋಡಲು ತಮಾಷೆಯಾಗಿಯೂ ಇರುತ್ತದೆ ಎನ್ನುತ್ತಾರೆ ಹೊಟೇಲಿನ ಮಾಲಕಿ ಜಾಕಲಿನ್ ರೋಥ್.
ಜನರಿಗೆ ಪರಸ್ಪರರಿಂದ ಕನಿಷ್ಠ ಒಂದೂವರೆ ಮೀಟರ್ ದೂರದಲ್ಲಿರುವುದು ಕೂಡ ಎಷ್ಟು ಕಷ್ಟವಾಗುತ್ತದೆ ಎನ್ನುವುದು ಈಗ ತಿಳಿಯುತ್ತಿದೆ. ಅದರಲ್ಲೂ ಹೊಟೇಲ್, ಪಾರ್ಕ್, ಸಿನೇಮಾ ಮಂದಿರಗಳಂಥ ಸ್ಥಳಗಳಲ್ಲಿ ಅಂತರ ಕಾಪಾಡಿಕೊಳ್ಳುವಂತೆ ಮಾಡುವುದು ಭಾರೀ ತ್ರಾಸದ ಕೆಲಸ. ಇಂಥ ಸ್ಥಳಗಳಿಗೆ ಜನರು ಹೋಗುವುದೇ ಏಕಾಂತ ಬಯಸಿ. ಆದರೆ ನಿಯಮಗಳ ಪ್ರಕಾರ ಸಾಮಾಜಿಕ ಅಂತರ ಕಾಪಾಡಲೇ ಬೇಕಿರುವುದರಿಂದ ಪೂಲ್ ನೂಡಲ್‌ನಂಥ ತಂತ್ರಗಳ ಮೊರೆ ಹೋಗುವುದು ಅನಿವಾರ್ಯ ಎನ್ನುತ್ತಾರೆ ರೂಥ್.