ಬೀದರ: ಜಿಲ್ಲೆಯಲ್ಲಿ ಯಾವುದೇ ಗೊಂದಲವಾಗದಂತೆ ಪಾರದರ್ಶಕ ಮತ್ತು ಜಾಗರೂಕತೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ತಹಶೀಲ್ದಾರರು, ತಾಪಂ ಇಒಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಕೋವಿಡ್ -19 ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸರ್ಕಾರದ ಮಾರ್ಗಸೂಚಿಯಂತೆ ನಡೆಸಬೇಕು. ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿ ಮತ್ತು ಪೀಠೊಪಕರಣಗಳಿಗೆ ಸ್ಯಾನಿಟೈಜ್ ಮಾಡಬೇಕು. ಯಾವುದೇ ಲೋಪಕ್ಕೆ ಅವಕಾಶ ಕೊಡಬಾರದು. ಪರೀಕ್ಷಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗಬೇಕು. ಸೂಕ್ತ ಪೊಲೀಸ್ ಭದ್ರತೆಗೆ ಕ್ರಮ ವಹಿಸಬೇಕು. ಏನೇ ತೊಂದರೆಯಾದರೂ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಪರೀಕ್ಷಾ ಕೊಠಡಿಗಳಲ್ಲಿ ಮತ್ತು ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕಡ್ಡಾಯವಾಗಿ ಹ್ಯಾಂಡ್ ಗ್ಲೋಜ್, ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಸ್ಯಾನಿಟೈಜರ್ ಬಳಸಬೇಕು. ಪ್ರತಿ ಪರೀಕ್ಷಾ ಕೇಂದ್ರದ ದ್ವಾರದಲ್ಲಿ ಅರೋಗ್ಯ ತಪಾಸಣೆಗೆ ಕೌಂಟರ್ ತೆರೆಯಬೇಕು ಎಂದು ಸೂಚಿಸಿದರು.
ಡಿಡಿಪಿಐ ಚಂದ್ರಶೇಖರ ಮಾತನಾಡಿ, ಈ ಹಿಂದೆ ಜಿಲ್ಲೆಯಲ್ಲಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದಿವೆ. ಈಗಾಗಲೇ ಎರಡ್ಮೂರು ಸಭೆ ನಡೆಸಿ ಪರೀಕ್ಷಾ ಮಾರ್ಗಸೂತ್ರಗಳನ್ನು ತಿಳಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನೇಮಿಸಲಾಗಿದೆ ಎಂದು ತಿಳಿಸಿದರು. ಬೀದರನಲ್ಲಿ ಒಟ್ಟು 99 ಪರೀಕ್ಷಾ ಕೇಂದ್ರಗಳು. 10 ಉಪ ಕೇಂದ್ರಗಳಿವೆ. 3 ಸೂಕ್ಷ್ಮ ಕೇಂದ್ರಗಳು ಮತ್ತು 2 ಅತೀ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ. 27,334 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ 40,000 ಮಾಸ್ಕ್ಗಳನ್ನು ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಪರೀಕ್ಷೆಗೆ ಮೂರು ದಿನಗಳ ಮೊದಲು ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಪರೀಕ್ಷೆ ಆರಂಭಕ್ಕೂ ಮೊದಲು ಮತ್ತು ನಂತರ ಸ್ಯಾನಿಟೈಜೇಶನ್ ಮಾಡಬೇಕು. ಪರೀಕ್ಷಾರ್ಥಿಗಳ ಆರೋಗ್ಯ ತಪಾಸಣೆ ವೇಳೆ ಕೋವಿಡ್ ಲಕ್ಷಣ ಕಂಡುಬಂದಲ್ಲಿ ಅವರಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಪರೀಕ್ಷೆ ಮುಗಿದ ಬಳಿಕ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕೆಂದು ಸೂಚಿಸಿದರು.