Advertisement

ಕೋವಿಡ್ 19 ತಡೆಗೆ ಅಂತರ ರಾಮಬಾಣ

01:54 PM Mar 28, 2020 | Suhan S |

ರಾಯಚೂರು: ಕೋವಿಡ್ 19 ಭೀತಿಯಿಂದ ಜನರನ್ನು ಮನೆಯಲ್ಲಿ ಇರುವಂತೆ ತಿಳಿಸಿದರೂ, ಜನ ಹೊರಗೆ ಬರುವುದನ್ನು ಬಿಡುತ್ತಿಲ್ಲ. ಇದರಿಂದ ಯಾವುದೇ ವಹಿವಾಟು ನಡೆದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿ ಕಾರಿಗಳು ತಿಳಿಸುತ್ತಿದ್ದಾರೆ.

Advertisement

ನಗರ ಸೇರಿ ವಿವಿಧ ಪಟ್ಟಣಗಳ ಮುಖ್ಯರಸ್ತೆಗಳಲ್ಲಿ ಕರ್ಫ್ಯೂ ವಾತಾವರಣ ಶುಕ್ರವಾರವೂ ಮುಂದುವರಿದಿದೆ. ಆದರೆ, ನಗರದ ಒಳ ಭಾಗದಲ್ಲಿ, ಹಳ್ಳಿಗಳಲ್ಲಿ ಮಾತ್ರ ಜನ ಗುಂಪು ಗೂಡುವುದು, ಹರಟೆ ಹೊಡೆಯುವಂತ ದೃಶ್ಯಗಳು ಕಂಡು ಬರುತ್ತಿವೆ. ಮೆಡಿಕಲ್‌, ಕಿರಾಣಿ, ಹಾಲು, ತರಕಾರಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಅಲ್ಲೆಲ್ಲ ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ. ಡಿಸಿ ಕಚೇರಿ ಮುಂಭಾಗದಲ್ಲಿಯೇ ಈ ರೀತಿ ಗುರುತುಗಳನ್ನು ಮಾಡಲಾಗಿದೆ.

ನಗರಸಭೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಔಷಧ ಸಿಂಪರಣೆ ಮಾಡಲಾಗುತ್ತಿದೆ. ಎರಡು ದಿನಗಳ ಹಿಂದೆ 15 ಯಂತ್ರಗಳ ಮೂಲಕ ಫಾಗಿಂಗ್‌ ಮಾಡಲಾಗಿತ್ತು. ಶುಕ್ರವಾರ ಅಗ್ನಿ ಶಾಮಕ ವಾಹನದಲ್ಲಿ ಔಷಧ ಸಂಗ್ರಹಿಸಿ ಪ್ರಮುಖ ರಸ್ತೆಗಳಲ್ಲಿ ಸಿಂಪಡಿಸಲಾಗಿದೆ. ನಿರ್ಗತಿಕರಿಗೆ ಊಟ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಲಾ ಸಂಕುಲ ಸಂಸ್ಥೆ, ಅನ್ನ ವಾಹನ, ಬ್ರಾಹ್ಮಣ ಸಮಾಜ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಹೋಟೆಲ್‌ ಮಾಲೀಕರು ತಮ್ಮ ಕೈಲಾದಷ್ಟು ಊಟ ತಯಾರಿಸಿ ಬಡವರು, ನಿರ್ಗತಿಕರು, ಆಸ್ಪತ್ರೆಗಳಿಗೆ ವಿತರಣೆ ಮಾಡುತ್ತಿದ್ದಾರೆ. ಅದರ ಜತೆಗೆ ಕರ್ತವ್ಯ ನಿರತ ಪೊಲೀಸರಿಗೂ ಊಟ ನೀಡಲಾಗುತ್ತಿದೆ.

ಇನ್ನೂ ಕೋವಿಡ್ 19 ಭೀತಿ ಸಂಬಂಧ ಜಿಪಂ ಸಭಾಂಗಣದಲ್ಲಿ ಹೋಟೆಲ್‌, ಪೆಟ್ರೋಲ್‌ ಬಂಕ್‌ ಸೇರಿದಂತೆ ಇನ್ನಿತರ ಮಾಲೀಕರ ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌, ಎಲ್ಲ ವರ್ತಕರು ಅಂಗಡಿ ಮುಂಗಟ್ಟುಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಸೂಚಿಸಿದರು.

ಅಗತ್ಯ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಿದರೆ ಪರವಾನಗಿ ರದ್ದು ಮಾಡಲಾಗುವುದು. ರೈಸ್‌ ಮಿಲ್‌ ಗಳು ಉತ್ಪಾದನೆ ನಿಲ್ಲಿಸಬಾರದು. ಆಗತ್ಯ ವಸ್ತುಗಳ ಸರಬರಾಜು ಮಾಡುವ ವಾಹನಗಳಿಗೆ ಪಾಸ್‌ ನೀಡಲಾಗಿದೆ. ನಿತ್ಯ ಸಭೆ ನಡೆಯಲಿದ್ದು, ವ್ಯಾಪಾರಸ್ಥರು ತಮಗಾದ ಸಮಸ್ಯೆ ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next