ಇಳಕಲ್ಲ: ಬಂಜಾರ ಸಮಾಜ ಸಂಘಟಿತರಾಗಿ, ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ನಗರದ ಎಸ್.ಆರ್. ಕಂಠಿ ವೃತ್ತದಲ್ಲಿ ಇಳಕಲ್ಲ ತಾಲೂಕು ಆಡಳಿತ ಹಾಗೂ ತಾಲೂಕು ಬಂಜಾರಾ ತಾಂಡಾ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಸಂತ ಸೇವಾಲಾಲ್ 281ನೇ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರಾ ಸಮಾಜ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸಮಾಜಮುಖೀಯಾಗಿ ಬೆಳೆಯಬೇಕು. ಅದಕ್ಕಾಗಿ ಎಲ್ಲರೂ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದರು. ಎ.ಐ.ಬಿ.ಎಸ್.ಎಸ್ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ ಮಾತನಾಡಿ, ಬಂಜಾರಾ ಸಮಾಜದವರು ಸುಮಾರು 13 ಕೋಟಿ ಜನಸಂಖ್ಯೆ ಹೊಂದಿದೆ. ಬಂಜಾರಾ ಭಾಷೆ ಅಧಿಕೃತ ಭಾಷೆಯಾಗಿದ್ದು, ಬಂಜಾರಾ ಭಾಷೆ ಮಾನ್ಯತೆಗಾಗಿ ಹೋರಾಡುತ್ತಿದ್ದೇವೆ. ರಾಜ್ಯದಲ್ಲಿಯ ಬಂಜಾರಾ ತಾಂಡಾ ಅಭಿವೃದ್ಧಿ ನಿಗಮ ಮಂಡಳಿಯಂತೆ ರಾಷ್ಟ್ರೀಯ ಬಂಜಾರಾ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು. ಅದಕ್ಕೆ ಶಾಸಕರು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಬಂಜಾರಾ ಸಮಾಜದ ಆರಾಧ್ಯ ದೈವ ಸಂತ ಸೇವಾಲಾಲ್ ಜಯಂತ್ಯುತ್ಸವವನ್ನು ಸರ್ಕಾರಿ ಮಟ್ಟದಲ್ಲಿ ಆಚರಣೆಗೆ ತಂದರು. ಶಿವಾಜಿ ಮಹಾರಾಜ, ಟಿಪ್ಪು ಸುಲ್ತಾನ್, ಕಿತ್ತೂರ ಚನ್ನಮ್ಮ, ಹೇಮರೆಡ್ಡಿ ಮಲ್ಲಮ್ಮನಂತ ಮಹಾನ್ ಶರಣರ ವಿಚಾರಧಾರೆ, ತತ್ವಾದರ್ಶ ಪ್ರತಿಯೊಬ್ಬರಿಗೂ ಪರಿಚಯಿಸುವ ಉದ್ದೇಶದಿಂದ ಅಂದಿನ ಸರ್ಕಾರ ಜಯಂತ್ಯುತ್ಸವಗಳನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸಲು ನಿರ್ಧರಿಸಿತು ಎಂದು ಹೇಳಿದರು.
281 ವರ್ಷಗಳ ಹಿಂದೆಯೇ ಸಂತ ಸೇವಾಲಾಲರು ಬಂಜಾರಾ ಸಮಾಜ ಸಂಘಟನೆಗೆ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶ್ರಮಿಸಿದ್ದಾರೆ. ಬಂಜಾರಾ ಸಮಾಜದ ಅಭಿವೃದ್ಧಿಗೆ ಹಾಗೂ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದರು.
ಸಾನ್ನಿಧ್ಯವನ್ನು ನೀಲಾನಗರ ಬಂಜಾರಾ ಶಕ್ತಿಪೀಠದ ಕುಮಾರ ಮಹಾರಾಜರು, ಕೆಸರಟ್ಟಿ ಸೋಮಲಿಂಗ ಮಹಾಸ್ವಾಮಿ, ಕೊಪ್ಪಳಗಡ ಗೋಸಾಯಿ ಬಾವಾ, ಚಿಕ್ಕಕೊಡಗಲಿ ಎಲ್ .ಟಿ. ಶಂಕರ ಮಹಾರಾಜರು ವಹಿಸಿದ್ದರು. ಈ ವೇಳೆ ಜಿಪಂ ಸದಸ್ಯೆ ಕಸ್ತೂರಿಬಾಯಿ ಜಾಧವ, ಜಿಪಂ ಮಾಜಿ ಅಧ್ಯಕ್ಷ ಹನಮಂತಪ್ಪ ರಾಠೊಡ, ಇಳಕಲ್ಲ ತಾಲೂಕು ಬಂಜಾರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೃಷ್ಣಾ ಪಿ. ರಾಠೊಡ, ಚಿಕ್ಕಕೊಡಗಲಿ ತಾಪಂ ಸದಸ್ಯೆ ತಾರಾಬಾಯಿ ನಾಯಕ, ಬಲಕುಂದಿ ಗ್ರಾಪಂ ಅಧ್ಯಕ್ಷ ಶರಣಪ್ಪ ರಾಠೊಡ, ಚಿಕ್ಕಕೊಡಗಲಿ ಗ್ರಾಪಂ ಅಧ್ಯಕ್ಷೆ ಮಂಗಳವ್ವ ರಾಠೊಡ, ತಹಶೀಲ್ದಾರ್ ವೇದವ್ಯಾಸ ಮುತಾಲಿಕ ಇತರರು ಇದ್ದರು.