Advertisement

ಶುದ್ಧ , ಸಮೃದ್ಧ ಸಾಹಿತ್ಯದಿಂದ ಸಮಾಜ ಸುಸಂಸ್ಕೃತ

12:43 AM Mar 20, 2021 | Team Udayavani |

ಆಂಗ್ಲ ಭಾಷೆಯ ಪ್ರಭಾವ ಹಾಗೂ ವ್ಯಾಮೋಹದಿಂದ ಈ ದೇಶದ ಹಲವಾರು ಗ್ರಾಮ್ಯ ಭಾಷೆಗಳು ನಶಿಸಿ ಹೋಗಿವೆ. ಇನ್ನು ಕೆಲವು ಪ್ರಾದೇಶಿಕ ಭಾಷೆಗಳು ನಶಿಸಿ ಹೋಗುವುದರಲ್ಲಿದೆ. ಆಂಗ್ಲ ಭಾಷೆಯ ಆಘಾತಕ್ಕೆ ಒಳಗಾದ ಹಲವಾರು ಭಾಷೆಗಳಲ್ಲಿ ಕೊಂಕಣಿಯೂ ಒಂದು. “ಬಿಸಿಲಿನ ತಾಪ ಕಡಿಮೆಯಾದರೂ ಮರಳಿನ ತಾಪ ಕಡಿಮೆಯಾಗಲಿಲ್ಲ’ ಎಂಬಂತೆ ಬ್ರಿಟಿಷರು ಈ ದೇಶ ಬಿಟ್ಟು ಹೋದರೂ ಅವರ ಭಾಷೆಯಾದ ಇಂಗ್ಲಿಷಿನ ವ್ಯಾಮೋಹ ನಮ್ಮನ್ನು ಬಿಟ್ಟು ಹೋಗಲಿಲ್ಲ. ಬ್ರಿಟಿಷರು ನಮ್ಮಲ್ಲಿ ಮಾತೃ ಭಾಷಾಭಿಮಾನವನ್ನು ನಾಶಗೊಳಿಸಿ ಆಂಗ್ಲ ಭಾಷೆಯ ಅಂಧಾಭಿಮಾನ
ವನ್ನು ಬೆಳೆಸಿದರು.

Advertisement

ಭಾಷೆ ಸಂಸ್ಕೃತಿಯ ಪ್ರತೀಕ. ಮಾತೃಭಾಷೆಯನ್ನು ಮರೆತರೆ ನಾವು ನಮ್ಮ ಸಂಸ್ಕೃತಿಯನ್ನು ಮರೆತಂತೆ. “ಒಂದು ದೇಶವನ್ನು ಕೊಲ್ಲಬೇಕಾದರೆ ಆ ದೇಶದ ಭಾಷೆಯನ್ನು ಕೊಲ್ಲು’ ಎಂಬ ಮಾತು ಪ್ರಚಲಿತದಲ್ಲಿದೆ. ಒಂದು ಭಾಷೆಯ ಮರಣವೆಂದರೆ ಒಂದು ಸಂಸ್ಕೃತಿಯ ಮರಣವಿದ್ದಂತೆ. ಒಂದು ರಾಷ್ಟ್ರದ ಪುನರುತ್ಥಾನವು ಅದರ ಮಾತೃಭಾಷೆಯಿಂದಲೇ ಪ್ರಾರಂಭವಾಗಬೇಕು. ಚೀನ, ರಷ್ಯಾ, ಜಪಾನ್‌, ಫ್ರಾನ್ಸ್‌ ಮುಂತಾದ ದೇಶಗಳು ತಮ್ಮ ತಮ್ಮ ಮಾತೃಭಾಷೆಗಳ ಮುಖಾಂತರವೇ ಎಲ್ಲ ರಂಗಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. ಯಹೂದ್ಯರ ಮಾತೃ ಭಾಷೆಯಾದ “ಹೀಬ್ರೂ’ ಒಂದು ಕಾಲದಲ್ಲಿ ಲುಪ್ತವಾಗುವ ಪರಿಸ್ಥಿತಿ ಇತ್ತು. ಆದರೆ 1948ರಲ್ಲಿ ಇಸ್ರೇಲ್‌ ದೇಶ ಸ್ವತಂತ್ರವಾದಾಗ ಯಹೂದಿಯರು ಹೀಬ್ರೂ ಭಾಷೆಯ ಬುನಾದಿಯಲ್ಲಿಯೇ ದೇಶವನ್ನು ಸದೃಢವಾಗಿ ಕಟ್ಟಿದರು. ಹೀಗೆ ಹಿಂದೊಮ್ಮೆ ಮಾತೃ ಭಾಷೆಯಾದ ಹೀಬ್ರೂ ಇಂದು ಜೀವಂತ ಭಾಷೆಯಾಗಿದೆ. ಪರಕೀಯ ಭಾಷೆಯ ಮುಖಾಂತರ ಪ್ರಗತಿಯನ್ನು ಕಾಣಬೇಕೆನ್ನುವ ರಾಷ್ಟ್ರ ಒಂದಿದ್ದರೆ ಅದು ಭಾರತವೇ.
ಸಂಸ್ಕೃತ ಸುಭಾಷಿತವೊಂದಿದೆ –

ಮಾತೃಭಾಷಾಂ ಪರಿತ್ಯಜ್ಯ ಯೋನ್ಯ ಭಾಷಾಮುಪಾಸತೇ|
ತತ್ರಯಾನಿ¤ ಹೀ ತೇ ದೇಶಾಃ ಯತ್ರ ಸೂರ್ಯೋನ ಭಾಸತೇ||
ಯಾರು ತಮ್ಮ ಮಾತೃಭಾಷೆಯನ್ನು ಕೈ ಬಿಟ್ಟು ಅನ್ಯಭಾಷೆಯನ್ನು ಆರಾಧಿಸುತ್ತಾರೋ ಅವರು ಅಂಧಕಾರಮಯ ಲೋಕಕ್ಕೆ ಹೋಗುತ್ತಾರೆ ಎಂಬುದೇ ಈ ಶ್ಲೋಕದ ಅರ್ಥ.
“ಪರಭಾಷಾ ಮೋಹವು ನಿಜಕ್ಕೂ ಚಿಟ್ಟು ಹಿಡಿಸುತ್ತದೆ. ಇದು ನಮ್ಮ ಮಕ್ಕಳ ನರಗಳನ್ನು ಅತೀ ದುರ್ಬಲ ಮಾಡಿದೆ. ಸ್ವದೇಶದಲ್ಲಿಯೂ ನಮ್ಮ ಮಕ್ಕಳು ವಿದೇಶಿಯರಾಗುತ್ತಾರೆ. ಪರಭಾಷೆ ನಮ್ಮ ಮಾತೃ ಭಾಷೆಯ ಬೆಳವಣಿಗೆಯನ್ನು ಮುರಿದಿದೆ. ನನಗೆ ನಿರಂಕುಶ ಪ್ರಭುತ್ವ ಅಧಿಕಾರವಿದ್ದಿದ್ದರೆ ಈ ದಿನವೇ ನಾನು ನಮ್ಮ ಮಕ್ಕಳಿಗೆ ಪರಭಾಷೆಯ ಮೂಲಕ ಆಗುವ ಪಾಠ ಪ್ರವಚನಗಳನ್ನು ನಿಲ್ಲಿಸಿಬಿಡುತ್ತಿದ್ದೆ’- ಇದು ಗಾಂಧೀಜಿ ಅವರ ಮಾತುಗಳು.

ಗಾಂಧೀಜಿ ಅವರ ಆಶಯದಂತೆ ಕೇಂದ್ರ ಸರಕಾರ ಇತ್ತೀಚೆಗೆ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ನಿಯಮ ತಂದಿದೆ. ಈ ಸಕಾರಾತ್ಮಕ ಆದೇಶ ವನ್ನು ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ಕೊಂಕಣಿಗರ ಮೇಲಿದೆ.

ಕೊಂಕಣಿ ಭಾಷಾ ಇತಿಹಾಸ

Advertisement

ಇಂದು ಸುಮಾರು 13 ದಶಲಕ್ಷ ಜನರ ಮಾತೃ ಭಾಷೆ ಕೊಂಕಣಿಯಾಗಿದೆ. ಭಾರತದಲ್ಲಿ ಇಂದು ಕೊಂಕಣಿಯು ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಕೊಂಕಣಿಯನ್ನು ಸುಮಾರು 42 ಪಂಗಡಗಳು ಮಾತನಾಡುತ್ತವೆ. ದೇವನಾಗರಿ ಲಿಪಿ ಕೊಂಕಣಿಯ ಅಧಿಕೃತ ಲಿಪಿಯಾದರೂ ಈ ಭಾಷೆಯನ್ನು ಕನ್ನಡ, ರೋಮನ್‌, ಮಲಯಾಳ ಹಾಗೂ ಪರ್ಸೊ-ಅರೇಬಿಕ್‌ ಹೀಗೆ ಐದು ಲಿಪಿಗಳಲ್ಲಿ ಬರೆಯುತ್ತಾರೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಹೀಗೆ ಭಾರತದ ಮೂರು ಪ್ರಮುಖ ಧರ್ಮದವರು ಕೊಂಕಣಿಯನ್ನು ತಮ್ಮ ಮಾತೃಭಾಷೆಯಾಗಿ ಉಪಯೋಗಿಸುತ್ತಾರೆ. ವಿವಿಧತೆಯಲ್ಲಿ ಏಕತೆಗೆ ಕೊಂಕಣಿ ಸಂಸ್ಕೃತಿಯನ್ನು ಬಿಟ್ಟರೆ ಇನ್ನೊಂದು ಉದಾಹರಣೆ ಬೇಕಿಲ್ಲ .

ಕೊಂಕಣಿ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಾರಾಷ್ಟ್ರದಲ್ಲಿ ಸಿಕ್ಕ ಶಾಸನದಂತೆ ಕೊಂಕಣಿ ಭಾಷೆ ಸುಮಾರು ಕ್ರಿ.ಶ. 1187ರಿಂದ ಅಸ್ತಿತ್ವದಲ್ಲಿತ್ತು ಎಂಬುದಾಗಿ ತಿಳಿಸುತ್ತದೆ. ಆದರೆ ಅದಕ್ಕಿಂತಲೂ ಪೂರ್ವದಲ್ಲಿ ಕೊಂಕಣಿ ಭಾಷೆ ಪ್ರಚಲಿತದಲ್ಲಿತ್ತು ಎಂಬುದಾಗಿ ಶ್ರವಣಬೆಳಗೊಳದ ಗೊಮ್ಮಟನ ಕಾಲ ಬೆರಳಿನಲ್ಲಿ ಕ್ರಿ.ಶ. 981ರಲ್ಲಿ ಕೊಂಕಣಿಯಲ್ಲಿ ಕೆತ್ತಿದ ಶಾಸನದಿಂದ ತಿಳಿದು ಬರುತ್ತದೆ. ಇಟಲಿಯಿಂದ ಗೋವಾಕ್ಕೆ ಬಂದಿದ್ದ ಅಜ್ಞಛಿl ಊrಚnscಜಿs ಗಿಚvಜಿಛಿr (1844- 1899) ನಾಟಕಕಾರ “ಯುರೋಪಿಯನ್‌ ಹಲವು ಭಾಷೆಗಳಿಗಿಂತ ಕೊಂಕಣಿ ಭಾಷೆ ಪ್ರಬುದ್ಧ ಹಾಗೂ ಪರಿಪೂರ್ಣವಾಗಿದೆ’ ಎಂಬುದಾಗಿ 1882ರಲ್ಲಿ ಬರೆದಿದ್ದಾನೆ. ಈತ ಕೊಂಕಣಿ ಶಬ್ದಕೋಶವನ್ನು ಅಂದೇ ರಚಿಸಿದ್ದನು.

ಮನ್ನಣೆ-ಗೌರವ

ಕೊಂಕಣಿ ಗೋವಾ ರಾಜ್ಯದ ಅಧಿಕೃತ ಭಾಷೆಯಾಗ ಬೇಕೆಂದು ಆಗ್ರಹಿಸಿ ನಡೆದ ಸುದೀರ್ಘ‌ ಹೋರಾಟಕ್ಕೆ 1980ರ ಮಧ್ಯಭಾಗದಲ್ಲಿ ಜಯ ಸಿಕ್ಕಿತು. ಕೇಂದ್ರ ಸಾಹಿತ್ಯ ಅಕಾಡೆಮಿಯು ಕಳೆದ ಸುಮಾರು 40 ವರ್ಷಗಳಿಂದ ಕೊಂಕಣಿಯನ್ನು ಸಾಹಿತ್ಯಿಕ ಬಲವುಳ್ಳ ಭಾಷೆಯೆಂದು ಗುರುತಿಸಿ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಿದೆ. ರವೀಂದ್ರ ಕೇಳ್ಕರರು ಕೊಂಕಣಿಗೆ ಜ್ಞಾನ ಪೀಠ ಪ್ರಶಸ್ತಿಯನ್ನೂ ಪಡೆದು ಗೌರವ ತಂದಿದ್ದಾರೆ. ಕರ್ನಾಟಕದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಕೊಂಕಣಿಗರ ಸಾಹಿತ್ಯ, ಸಂಸ್ಕೃತಿ, ಜಾನಪದ ಕಲೆಗಳ ಬೆಳವಣಿಗೆ ಗಾಗಿ ಕರ್ನಾಟಕ ಸರಕಾರವು 1994ರಲ್ಲಿ ಕೊಂಕಣಿ ಭಾಷೆಗೆ ಅಕಾಡೆಮಿಯನ್ನು ನೀಡಿದೆ.
ಸಾಹಿತ್ಯ ಶುದ್ಧವಾದಂತೆ, ಸಮೃದ್ಧವಾದಂತೆ ಆ ಸಮಾಜ ಸುಸಂಸ್ಕೃತವಾಗುತ್ತದೆ. ಸಾಹಿತ್ಯವಿಲ್ಲದಿದ್ದರೆ ಬದುಕು ಬರಡಾಗುತ್ತದೆ.

ಒಟ್ಟಿನಲ್ಲಿ ಹೇಳಬೇಕಾದರೆ ಒಂದು ವಿವೇಕಯುತ, ಸುಸಂಸ್ಕೃತ, ಶಾಂತಿಯುತ, ಸುಖೀ ಸಮಾಜ ನಿರ್ಮಾಣ ಮಾಡುವುದೇ ಸಾಹಿತ್ಯದ ಉದ್ದೇಶ. ಈ ಉದ್ದೇಶ ಈಡೇರಬೇಕಾದರೆ ಸಾಹಿತ್ಯದ ಚಟುವಟಿಕೆಯನ್ನು ಜೀವಂತವಾಗಿರಿಸಬೇಕು. ಈ ನಿಟ್ಟಿನಲ್ಲಿ ಮಾರ್ಚ್‌ 20 ಮತ್ತು 21ರಂದು ಶಿಕ್ಷಣ, ಸಾಹಿತ್ಯ ಚಟುವಟಿಕೆಯ ಕೇಂದ್ರಬಿಂದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಆರ್‌ಎಸ್‌ಬಿ ಸಭಾಂಗಣದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸಮಸ್ತ ಕೊಂಕಣಿಗರು ಈ ಸಮ್ಮೇಳನದಲ್ಲಿ ಭಾಗಿಯಾಗಿ ಕೊಂಕಣಿಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ.

 ಡಾ| ಕೆ. ಜಗದೀಶ್‌ ಪೈ, ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next