Advertisement

ಸಮಾಜ ಒಗ್ಗೂಡಿಸುವುದೇ ಶರಣ ತತ್ವ; ಡಾ|ಶಿವಮೂರ್ತಿ ಶರಣರು

05:07 PM Jan 26, 2021 | Team Udayavani |

ಹುಲಸೂರು: ಪ್ರಸ್ತುತ ದಿನಗಳಲ್ಲಿ ಸಮಾಜ ಒಡೆಯುವವರೇ ಹೆಚ್ಚು. ಆದರೆ, ಶರಣ ತತ್ವ ಸಮಾಜ ಒಗ್ಗೂಡಿಸುವುದಾಗಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಪಟ್ಟಣದ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಬಸವ ಸಂದೇಶ ನಡೆಸಿರುವ ಡಾ| ಶಿವಾನಂದ ಸ್ವಾಮಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ಹಲವು ಮಠಗಳು ಆಸ್ತಿ ಮಾಡಿವೆ. ಆದರೆ, ಆಸ್ತಿಯನ್ನು ಸಮಾಜ ಕಟ್ಟಲು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಮುರುಘಾ ಮಠ ಬ್ರಿಟಿಷರ ಕಾಲದಿಂದಲೂ “ಜಗದ್ಗುರು’ ಎಂದೇ ಪ್ರಖ್ಯಾತಗೊಂಡ ಮಠವಾಗಿದೆ. ಮಠದಲ್ಲಿ ವಿವಿಧ ದೇಶಗಳ ಪ್ರಾಚ್ಯವಸ್ತು ಸಂಗ್ರಹ ಇದೆ. ಮಠ ಅಪಾರ ಸಂಪತ್ತು ಹೊಂದಿದ್ದರೂ ನಾವು ಬಂಗಾರದ ಕಿರೀಟ, ಕೈಯಲ್ಲಿ ಚಿನ್ನದುಂಗುರ ತೊಡುವುದಿಲ್ಲ. ನಮಗೆ ಕಾವಿ ವೈರಾಗ್ಯದ ಸಂಕೇತವಾದರೆ ರುದ್ರಾಕ್ಷಿಯೇ
ಭೂಷಣ ಎಂದು ತಿಳಿಸಿದರು.

ಶ್ರೀ ನಿಜಗುಣಾನಂದ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಶಿವಾನಂದ ಶ್ರೀಗಳು ಬಸವಣ್ಣನವರ ಸಂದೇಶ ಜನಮನಕ್ಕೆ ಮುಟ್ಟಿಸಲು ಪಾದಯಾತ್ರೆ ನಡೆಸಿದ್ದಾರೆಯೇ ಹೊರತು ವೈಯಕ್ತಿಕ ಹಿತಕ್ಕಾಗಿ ಅಲ್ಲ. ತಾತ್ವಿಕ ಸಂಘರ್ಷಗಳು ಸಂಬಂಧ ಕಳೆದುಕೊಳ್ಳುವಂತೆ ಆಗಬಾರದು. ಲಿಂಗಾಯತ ಮಠಗಳು ಶ್ರೀಮಂತ ಮಠಗಳಾಗಿದ್ದು, ತನ್ನದೇಯಾದ ಇತಿಹಾಸ ಹೊಂದಿವೆ. ಮಠಗಳು ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.

ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು ಮಾತನಾಡಿ, ಬಸವತತ್ವ ವಿಶ್ವದ ತತ್ವ. ಹಲವರು ಮಾನವನ ಶ್ರೇಯಸ್ಸು ಬಯಸಿದ್ದರೆ, ಬಸವಾದಿ
ಶರಣರು ಸಕಲ ಜೀವಾತ್ಮರ ಲೇಸು ಬಯಸಿದ್ದರು. ಆ ತತ್ವ ಪಾಲನೆ ಇಂದು ಅಗತ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ಹಾರಕೂಡ ಶ್ರೀಗಳು ಡಾ|
ಶಿವಾನಂದ ಸ್ವಾಮಿಗಳಿಗೆ ಬೆಳ್ಳಿ ಕಿರೀಟ ತೊಡಿಸಿದರೆ ಭಕ್ತರಾದ ಬಾಲಾಜಿ ಗೌಡಗಾಂವೆ ಮತ್ತು ಸಂಗಪ್ಪ ಕುಡಂಬಲೆ ಚಿನ್ನದ ಚೌಕಾ ನೀಡುವ ಮೂಲಕ
ಅಭಿನಂದಿಸಿದರು.

ಪುಷ್ಪವೃಷ್ಟಿ: ವಚನ ಸಾಹಿತ್ಯ ಪುಸ್ತಕ ಹೊತ್ತ ಮಹಿಳೆಯರು ಮತ್ತು ಪೂಜ್ಯರ ಮೇಲೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಸಮಾರಂಭದಲ್ಲಿ ಶ್ರೀ ಚಿಕ್ಕಗುರು ನಂಜೇಶ್ವರ ಸ್ವಾಮಿಗಳು, ಶ್ರೀ ಶಿವಾನಂದ ಸ್ವಾಮಿ, ಶ್ರೀ ಅಲ್ಲಮಪ್ರಭು ಲಿಂಗ ಸ್ವಾಮೀಜಿ, ಶಾಸಕ ರಾಜಶೇಖರ ಪಾಟೀಲ, ವೈಜಿನಾಥ ಕಾಮಶೆಟ್ಟಿ, ಆನಂದ ದೇವಪ್ಪ, ಸುಧಿಧೀರ ಕಾಡಾದಿ, ಲತಾ ಹಾರಕುಡೆ, ಬಸವರಾಜ ಧನ್ನೂರ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next