Advertisement

ಚಿತ್ರಕಲೆಯಿಂದ ಸಾಮಾಜಿಕ ಜಾಗೃತಿ ಸಾಧ್ಯ

10:26 AM Mar 14, 2019 | |

ದಾವಣಗೆರೆ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವ, ಒಂದು ಚಿತ್ರದಲ್ಲೇ ಹತ್ತಾರು ಆಲೋಚನೆ, ಭಾವನೆಗಳ ಪ್ರತಿಬಿಂಬಿಸುವಂತಹ ಚಿತ್ರಕಲೆ ಶಿಕ್ಷಣ, ಸಾಮಾಜಿಕ ಕ್ಷೇತ್ರದ ವಿಶಿಷ್ಟ ಸಾಧನ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಆಯುಕ್ತರ ಕಚೇರಿಯ ನಿವೃತ್ತ ಸಹ ನಿರ್ದೇಶಕ ಡಿ.ಕೆ. ಶಿವಕುಮಾರ್‌ ಬಣ್ಣಿಸಿದ್ದಾರೆ.

Advertisement

ಬುಧವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್‌)ನಲ್ಲಿ 2018-19ನೇ ಸಾಲಿನ ಜಿಲ್ಲಾ ಚಿತ್ರಕಲಾರತ್ನ ಪ್ರಶಸ್ತಿ ಪ್ರದಾನ ಮತ್ತು ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರ ಕಲಾವಿದನ ಪರಿಕಲ್ಪನೆ, ಅಭಿಪ್ರಾಯದಲ್ಲಿ ಮೂಡಿ ಬರುವಂತಹ ಚಿತ್ರ ಹತ್ತಾರು ವಿಶ್ಲೇಷಣೆಯ ಪ್ರತೀಕವಾಗಿರುತ್ತದೆ. ಚಿತ್ರಕಲೆಯ ಮೂಲಕ ಎಲ್ಲಾ ವಿಷಯಗಳನ್ನ ಚೆನ್ನಾಗಿ ಕಲಿಸಬಹುದು. ಸಾಮಾಜಿಕವಾಗಿಯೂ ಜಾಗೃತಿ ಮೂಡಿಸಬಹುದು ಎಂದರು.

ಪ್ರಾಚೀನ ಕಾಲದಲ್ಲಿ ಚಿತ್ರಕಲೆಯ ಮೂಲಕ ಭಾವನೆ, ಆಲೋಚನೆ ಹಂಚಿಕೊಳ್ಳುವ ಪದ್ಧತಿ ಕಾಲಾನುಕ್ರಮೇಣ ವಿಶಿಷ್ಟ ಸಾಧನವಾಗಿ ರೂಪುಗೊಂಡಿದೆ. ಶಾಲಾ ಹಂತದಿಂದಲೇ ಮಕ್ಕಳಲ್ಲಿನ ಚಿತ್ರ ಕಲಾ ಪ್ರತಿಭೆ ಹೆಕ್ಕಿ ಹೊರತೆಗೆಯುವ ಕೆಲಸ ಮಾಡಲಾಗುತ್ತಿದೆ. ಚಿತ್ರಕಲೆ ಪಠ್ಯದ ವಿಷಯವಾಗಿದ್ದರೂ ಪರೀಕ್ಷಾ ವಿಷಯ ಅಲ್ಲ ಎಂಬ ಭಾವನೆ ಕೆಲವು ಚಿತ್ರಕಲಾ ಶಿಕ್ಷಕರಲ್ಲಿ ಕಂಡು ಬರುತ್ತದೆ. ವಾಸ್ತವವಾಗಿ ಚಿತ್ರಕಲೆ ಎಲ್ಲಾ ವಿಷಯಗಳ ಆಲ್‌ರೌಂಡರ್‌, ಆರು ವಿಷಯಗಳ ಲೀಡರ್‌ ಎಂದು ತಿಳಿಸಿದರು.

ಕನ್ನಡ, ಇಂಗ್ಲಿಷ್‌ ಭಾಷಾ ವಿಷಯಗಳ ಜೊತೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನದಂತಹ ಕೋರ್‌ ವಿಷಯಗಳನ್ನು
ಚಿತ್ರಕಲೆ ಒಳಗೊಂಡಿದೆ. ಸುಂದರವಾಗಿ ಭಾಷೆ, ಚಿತ್ರ ಬರೆಯುವುದಕ್ಕೆ ಇಂತಿಷ್ಟು ಅಂಕ ನೀಡಲಾಗುತ್ತದೆ. ಹಾಗಾಗಿ ಚಿತ್ರಕಲೆ ಶಿಕ್ಷಕರು ತಮಗೆ ಸೀಮಿತವಾದಂತ ತರಗತಿಯನ್ನ ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳಿಗೆ ಚಿತ್ರಕಲೆಯ ಜೊತೆಗೆ ಇತರೆ ವಿಷಯಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ದಾವಣಗೆರೆ ಚಿತ್ರಕಲಾ ಶಿಕ್ಷಕರ ಸಂಘ 2012 ರಿಂದಲೂ ತುಂಬಾ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ತಾವು ಗಮನಿಸಿರುವಂತೆ ಹೊಸತನ ಕಂಡು ಬರುತ್ತಿದೆ. ಚುನಾವಣಾ, ರಾಷ್ಟ್ರೀಯ ಹಬ್ಬಗಳು, ಇತರೆ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರು ಉತ್ತಮ ಕೆಲಸದ ಮೂಲಕ ಒಳ್ಳೆಯ ಹೆಸರು ಗಳಿಸಬೇಕು ಎಂದು ಆಶಿಸಿದರು. 

Advertisement

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಆಯುಕ್ತರ ಕಚೇರಿಯ ನಿವೃತ್ತ ನಿರ್ದೇಶಕ ಎನ್‌.ಎಸ್‌. ಕುಮಾರ್‌ ಮಾತನಾಡಿ, ಮಕ್ಕಳ ಶೈಕ್ಷಣಿಕ ಕಲಿಕೆಗೆ ಪೂರಕವಾಗಿರುವ ಚಿತ್ರಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಬೇಕು. ಚಿತ್ರಕಲಾ ಶಿಕ್ಷಕರು ಶಿಕ್ಷಣ, ಸಾಮಾಜಿಕ ಕಾರ್ಯ ಚಟುವಟಿಕೆ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಅತ್ಯುತ್ತಮ ಕಾಣಿಕೆ ನೀಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಸಂತೋಷದ ವಿಚಾರ ಎಂದರು.

ರವಿ ಕಾಣದ್ದನ್ನ ಕವಿ ಕಂಡ.. ಕವಿ ಕಾಣದ್ದನ್ನ ಚಿತ್ರಕಲಾವಿದ ಕಂಡ… ಎನ್ನುವಂತೆ ತಮ್ಮ ಕಲ್ಪನೆಯಲ್ಲಿ ಬರೆದಂತಹ
ಚಿತ್ರಗಳು ವಿದ್ಯಾರ್ಥಿಗಳು, ಸಾರ್ವಜನಿಕರ ಸ್ಮೃತಿಪಟಲದಲ್ಲಿ ಶಾಶ್ವತವಾಗಿರುತ್ತವೆ. ಚಿತ್ರಕಲಾ ಶಿಕ್ಷಕರು ಬೇರೆ ಕಡೆ ವರ್ಗಾವಣೆ, ನಿವೃತ್ತಿಯಾದರೂ ಅವರು ಮಾಡಿದಂತಹ ಕೆಲಸ ಸದಾ ನೆನಪಿನಲ್ಲಿ ಉಳಿಯುತ್ತವೆ. ನಾವು ಮಾಡಿದಂತಹ ಕೆಲಸಗಳು ಮಾತನಾಡಬೇಕು.

ಚಿತ್ರಕಲಾ ಶಿಕ್ಷಕರು ದೊರೆತಂತಹ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಸಕರಾತ್ಮಕ ಚಿಂತನೆಯ ಚಿತ್ರಗಳ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೂ ಕಾರಣೀಭೂತರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್‌) ಪ್ರಾಚಾರ್ಯ ಎಚ್‌.ಕೆ. ಲಿಂಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಭೂಷಣ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌.ವಿಜಯ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ. ಸಿದ್ದಪ್ಪ, ಜಿ. ಕೊಟ್ರೇಶ್‌, ಸೋಮಣ್ಣ ಚಿತ್ರಗಾರ್‌, ಉಮೇಶ್‌ಕುಮಾರ್‌ ಇದ್ದರು.

ಐಗೂರು ಗ್ರಾಮದ ಶ್ರೀ ಬಸವೇಶ್ವರ ವಸತಿಯುತ ಪ್ರೌಢಶಾಲೆಯ ಆರ್‌. ನಾಗಭೂಷಣ್‌, ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಮಾರುತಿ ಪ್ರೌಢಶಾಲೆಯ ಚನ್ನಪ್ಪ ಸೂಗೂರು, ನೀಲಗುಂದ ಟಿಎಂಎಇಎಸ್‌ ಪ್ರೌಢಶಾಲೆಯ ಗದಗ್‌(ಮರಣೋತ್ತರ) ಅವರಿಗೆ 2018-19ನೇ ಸಾಲಿನ ಜಿಲ್ಲಾ ಚಿತ್ರಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 

2018ರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರಪನಹಳ್ಳಿಯ ಸರ್ಕಾರಿ ಪಿಯು ಕಾಲೇಜಿನ(ಪ್ರೌಢಶಾಲಾ ವಿಭಾಗ) ವಿಜಯ ಗುಳೇದಗುಡ್ಡ, ದಾವಣಗೆರೆಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ ಶಾಂತಯ್ಯ ಪರಡಿಮಠ್ಠ… ಅವರನ್ನ ಸನ್ಮಾನಿಸಲಾಯಿತು. ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿ.ಅಚ್ಯುತಾನಂದ ಪ್ರಾರ್ಥಿಸಿದರು. ಪಿ. ನಾಗರಾಜ ಭಾನುವಳ್ಳಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next