Advertisement

ಸಾಮಾಜಿಕ ಪಿಡುಗಿಗೆ ಜಾಗೃತಿ ಅವಶ್ಯ: ಸುವರ್ಣಾ

05:14 PM Oct 07, 2021 | Team Udayavani |

ಆಳಂದ: ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆ, ಅಸ್ಪೃಶ್ಯತೆ ಪಿಡುಗಳನ್ನು ಅಳಿಸಿ ಹಾಕಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ನಿಂಬರ್ಗಾ ಪೊಲೀಸ್‌ ಠಾಣೆ ಪಿಎಸ್‌ಐ ಸುವರ್ಣಾ ಮಲಶೆಟ್ಟಿ ಹೇಳಿದರು.

Advertisement

ತಾಲೂಕಿನ ಭೂಸನೂರ ಗ್ರಾಮದಲ್ಲಿ ಸ್ಫೂ ರ್ತಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ, ತಾಲೂಕು ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಸ್ಪೃಶ್ಯತಾ ನಿರ್ಮೂಲನಾ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಶತಮಾನಗಳಿಂದ ಬೇರುಬಿಟ್ಟ ಜಾತಿ ವ್ಯವಸ್ಥೆಯನ್ನು ಸಂಪೂರ್ಣ ಮೆಟ್ಟಿ ನಿಲ್ಲಬೇಕು. ಸಂವಿಧಾನದ ಆಶಯಗಳನ್ನು ಅನುಸರಿಸಿ ಸಮಾನತೆ, ಭಾತೃತ್ವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾಹಿತಿ ಧರ್ಮಣ್ಣ ಧನ್ನಿ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಕಾನೂನು ಬಾಹೀರ. ಆದರೂ ಇನ್ನೂ ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ನಗರ ಪ್ರದೇಶಗಳಲ್ಲೂ ಇಂತಹ ಪದ್ಧತಿಗಳು ಕಾಣುತ್ತವೆ. ಆದ್ದರಿಂದ ಸಂವಿಧಾನದ ನಿಯಮಗಳು ಕಟ್ಟು ನಿಟ್ಟಾಗಿ ಜಾರಿಯಾಗಬೇಕು ಎಂದರು. ಗ್ರಾಪಂ ಅಧ್ಯಕ್ಷ ದಸ್ತಗಿರ ಎಂ. ಗೌರವ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಜಗದೀಶ ದೊಡ್ಡಮನಿ, ಉಪನ್ಯಾಸಕ ಡಾ| ಶಿವಪ್ಪ ಎಂ. ಭೂಸನೂರ ಮಾತನಾಡಿದರು.

ಗಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಠಲ ಕಾಂಬಳೆ, ಸಂಸ್ಥೆ ಅಧ್ಯಕ್ಷ ಅಂದಪ್ಪ ಡೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ರಾಮಲು ಪವಾರ, ಮುತ್ತಣ್ಣ ಬೀಳಗಿ, ಗುಂಡಪ್ಪ ಹಿರವಾಲಿ ಮತ್ತಿತರರು ಭಾಗವಹಿಸಿದ್ದರು. ಗೋಪಾಲ ಶಹಾಬಾದ, ಭೀಮಾಶಂಕರ ಖಜೂರಿ ತಂಡದ ಸದಸ್ಯರು ಅಸ್ಪೃಶ್ಯತಾ ನಿರ್ಮೂಲನೆಯ ಜಾಗೃತಿ ಗೀತೆ ಹಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next