ಹೊಸದಿಲ್ಲಿ : 2014ರ ನೊಬೆಲ್ ಪ್ರಶಸ್ತಿ ಪುರಸ್ಕೃತ, ಭಾರತೀಯ ಮಕ್ಕಳ ಹಕ್ಕುಗಳ ಕಾರ್ಯಕರ್ತರಾಗಿರುವ ಕೈಲಾಶ್ ಸತ್ಯಾರ್ಥಿ ಅವರ ಮನೆಗೆ ನುಗ್ಗಿರುವ ಕಳ್ಳರು ನೊಬೆಲ್ ಪಾರಿತೋಷಕದ ಪ್ರತಿಕೃತಿ ಹಾಗೂ ಇನ್ನಿತರ ಹಲವು ಅತ್ಯಮೂಲ್ಯ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಸತ್ಯಾರ್ಥಿ ಅವರ ಮೂಲ ನೊಬೆಲ್ ಪಾರಿತೋಷಕವನ್ನು ಶಿಷ್ಟಾಚಾರದ ಕ್ರಮವಾಗಿ ರಾಷ್ಟ್ರಪತಿ ಭವನದಲ್ಲಿ ಇರಿಸಲಾಗಿರುವುದರಿಂದ ಅದು ಸುರಕ್ಷಿತವಾಗಿ ಉಳಿದಿದೆ.
ದಿಲ್ಲಿ ಪೊಲೀಸರು ಘಟನೆಯ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸತ್ಯಾರ್ಥಿ ಅವರ ಮನೆಯಲ್ಲಿ ಅತ್ಯಮೂಲ್ಯ ನೊಬೆಲ್ ಪಾರಿತೋಷಕ ಹಾಗೂ ಇನ್ನಿತರ ಪದಕಗಳು ಇವೆ ಎಂದು ತಿಳಿದಿದ್ದ ಕಳ್ಳರೇ ಈ ಕೃತ್ಯ ಎಸಗಿದ್ದಾರೆ. ಆದರೆ ತಾವು ಕದ್ದಿರುವುದು ನೊಬೆಲ್ ಪಾರಿತೋಷಕದ ಪ್ರತಿಕೃತಿ ಎಂಬ ವಿಷಯ ಅವರಿಗೆ ತಿಳಿದಿಲ್ಲ.
ಹಾಗಿದ್ದರೂ ಪೊಲೀಸರು ಈಗ ಕಳ್ಳರ ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ದಿಲ್ಲಿಯಲ್ಲಿ ಎಲ್ಲ ರದ್ದಿ – ಗುಜರಿ ಅಂಗಡಿಗಳನ್ನು ಪೊಲೀಸರು ಸಂಪರ್ಕಿಸಿದ್ದಾರೆ; ಸ್ಥಳೀಯ ಕ್ರಿಮಿನಲ್‌ಗಳನ್ನು ತನಿಖೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಪರಾಧ ಹಾಗೂ ವಿಧಿ ವಿಜ್ಞಾನ ತಂಡದವರು ಕಳ್ಳತನ ನಡೆದ ಸ್ಥಳದಲ್ಲಿನ ಬೆರಳಚ್ಚುಗಳನ್ನು ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಸತ್ಯಾರ್ಥಿ ಅವರ ಮನೆ ಇರುವ ದಿಲ್ಲಿಯ ಸಿರಿವಂತ ಅಲಕನಂದ ಪ್ರದೇಶದಲ್ಲಿನ ನಿವಾಸಿಗಳಿಗೆ ಈ ಕಳ್ಳತನದ ಪ್ರಕರಣದಿಂದ ಆತಂಕ ಉಂಟಾಗಿದೆ.