Advertisement

ಸಖಿ ಒನ್‌ ಸ್ಟಾಪ್‌ ಸೆಂಟರ್‌ ಶೀಘ್ರ ಉದ್ಘಾಟನೆ: ಜಿಲ್ಲಾಧಿಕಾರಿ

11:29 AM Sep 21, 2017 | |

ಉಡುಪಿ : ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಸಖಿ ಒನ್‌ ಸ್ಟಾಪ್‌ ಸೆಂಟರ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು.

Advertisement

ಅವರು ಸೆ. 20ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಖಿ  ಒನ್‌ ಸ್ಟಾಪ್‌ ಸೆಂಟರ್‌ ಕಟ್ಟಡ ಕಾಮಗಾರಿಗೆ 37.68 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕಟ್ಟಡದ ವಿದ್ಯುದೀಕರಣ ಸಹಿತ ಕೆಲ ಕೆಲಸ ಬಾಕಿ ಇದ್ದು, ಈ ಕೆಲಸವನ್ನು ಶೀಘ್ರದಲ್ಲಿ ಮುಗಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಶೀಘ್ರದಲ್ಲಿ ಕಟ್ಟಡ ಉದ್ಘಾಟನೆಗೆ ಅಗತ್ಯ ಕ್ರಮಗಳ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್‌ ಅವರಿಗೆ ಸೂಚಿಸಿದರು.

ಮಹಿಳಾ ನಿಲಯ: ಸೂಚನೆ
ಜಿಲ್ಲೆಯ ಮಹಿಳಾ ನಿಲಯದಲ್ಲಿರುವ ಹೊರ ರಾಜ್ಯದ ಮಹಿಳೆಯರ ವಿಳಾಸವನ್ನು ಪತ್ತೆಹಚ್ಚುವುದು. ಮಹಿಳೆಯರಿಗೆ ಸಂಬಂಧಪಟ್ಟ ರಾಜ್ಯದ ರಾಜಧಾನಿಗಳ ಪೊಲೀಸ್‌ ಕಂಟ್ರೋಲ್‌ ರೂಂಗಳಿಗೆ ಭಾವಚಿತ್ರ ಹಾಗೂ ಗುರುತಿನ ಚಹರೆಯ ಸಹಿತ ವಿಳಾಸ ಪತ್ತೆ ಹಚ್ಚುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಡಿಸಿ, ಮಹಿಳಾ ನಿಲಯದಲ್ಲಿರುವ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಅವರಿಂದ ಬಟ್ಟೆ ಬ್ಯಾಗ್‌ಗಳನ್ನು ತಯಾರಿಸುವ ಮೂಲಕ ಆರ್ಥಿಕ ಸಂಪಾದನೆಗೆ ಅವಕಾಶ ಒದಗಿಸುವಂತೆ ಸೂಚಿಸಿದರು.

ಮಹಿಳಾ ದೌರ್ಜನ್ಯ: ಸೂಚನೆ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸ್‌ ಠಾಣೆಗಳಲ್ಲಿ ಶೀಘ್ರದಲ್ಲಿ ದಾಖಲಿಸುವಂತೆ ಹಾಗೂ ಎಫ್ಐಆರ್‌ ಪ್ರತಿ, ವೈದ್ಯಕೀಯ ವರದಿಯ ಪ್ರತಿಯನ್ನು ಮಹಿಳಾ ಸಾಂತ್ವನ ಕೇಂದ್ರಗಳಿಗೆ ನೀಡುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಿದ ಡಿಸಿ, ರಾಜ್ಯ ಅಥವಾ ಕೇಂದ್ರ ಸರಕಾರದ ಉದ್ಯೋಗದಲ್ಲಿರುವ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳನ್ನು ನೇರವಾಗಿ ಸಂಬಂಧಪಟ್ಟ ಪೊಲೀಸ್‌ ಠಾಣೆಯಲ್ಲಿ ದಾಖಲಿಸ ಬಹುದು ಎಂದು ಹೇಳಿದರು.

Advertisement

ಸಾಂತ್ವನ ಯೋಜನೆ-379 ಪ್ರಕರಣ
ಉಡುಪಿ ಜಿಲ್ಲೆಯಲ್ಲಿ ಎ. 17ರಿಂದ ಈವರೆಗೆ ಸಾಂತ್ವನ ಯೋಜನೆಯಡಿ 379 ಪ್ರಕರಣಗಳಲ್ಲಿ 115 ಪ್ರಕರಣ ಇತ್ಯರ್ಥಪಡಿಸಿದ್ದು, 236 ಸಮಾಲೋಚನೆ ಹಂತದ ಲ್ಲಿವೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ 208 ಪ್ರಕರಣ ದಾಖಲಾಗಿದ್ದು, 180 ಇತ್ಯರ್ಥಪಡಿಸಲಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆಯಡಿ 1 ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿದೆ. ಸ್ಥೈರ್ಯ ನಿಧಿ ಯೋಜನೆಯಲ್ಲಿ 6 ಪ್ರಕರಣಗಳಿಗೆ 1.50 ಲಕ್ಷ ರೂ. ತುರ್ತು ಪರಿಹಾರ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ವಾಲ್ವಿಸ್‌ ಅವರು ಸಭೆಯಲ್ಲಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next