Advertisement

ಮೇಳದಲ್ಲಿ ಸಮಸ್ಯೆಗಳಿಗೆ ಸಿಕ್ಕಿತು ಹಲವು ಸೂತ್ರ

01:32 AM Oct 14, 2019 | Team Udayavani |

ಸುಬ್ರಹ್ಮಣ್ಯ: ನೆಲ-ಜಲ ಸಂರಕ್ಷಣೆ, ಭೂಮಿ ಫಲವತ್ತತೆ ಹೆಚ್ಚಳ, ಕೃಷಿ ತಂತ್ರಜ್ಞಾನ, ಆಧುನಿಕ ಕೃಷಿ ಪದ್ಧತಿ, ಕೃಷಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ ಹಾಗೂ ರೈತರೊಂದಿಗೆ ನೇರ ಸಂವಾದ ಮೂಲಕ ರೈತರ ಕೃಷಿ ಸಂಬಂಧಿಸಿದ ಸಮಸ್ಯೆಗಳಿಗೆ ವಿಜ್ಞಾನಿಗಳು, ತಜ್ಞರಿಂದ ಸೂಕ್ತ ಪರಿಹಾರ ಕಂಡುಕೊಳ್ಳುವ ಎರಡು ದಿನಗಳ ಕೃಷಿ ಮೇಳ ರೈತ ಜಾತ್ರೆಗೆ ರವಿವಾರ ತೆರೆಬಿತ್ತು.

Advertisement

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆ ಕಿದು ನೆಟ್ಟಣದಲ್ಲಿ ಎರಡು ದಿನಗಳ ಕಾಲ ಹಬ್ಬದ ರೀತಿಯಲ್ಲಿ ನಡೆದ ಕೃಷಿ ಮೇಳ ಹಾಗೂ ತೋಟಗಾರಿಕಾ ಮೇಳ ರೈತ ಜಾತ್ರೆ ಕೊನೆಗೊಂಡಿತು.

ಶನಿವಾರ ಕೃಷಿ ಮೇಳ ಉದ್ಘಾಟನೆ ಬಳಿಕ ರವಿವಾರ ಸಂಜೆ ತನಕ ಎರಡು ದಿನಗಳಲ್ಲಿ ಆರು ವಿಚಾರ ಸಂಕಿರಣ ನಡೆಯಿತು. ಶನಿವಾರ ನಡೆದ ಮಳೆ ನೀರು ಕೊಯ್ಲು ವಿಚಾರಗೋಷ್ಠಿಯಲ್ಲಿ ಮಳೆ ಬಂದಾಗ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವುದು, ಪರಿಸರ ಸ್ನೇಹಿ ಸರಳ ತಂತ್ರಜ್ಞಾನದ ಮೂಲಕ ಭೂಮಿಯಲ್ಲಿ ನೀರಿನಾಂಶ ಜೀವಂತವನ್ನಾಗಿಸಿ ಅಂತರ್ಜಲ ಕಾಪಾಡುವುದನ್ನು ತಿಳಿಸಿಕೊಡಲಾಯಿತು. ಎರಡನೇ ವಿಚಾರ ಸಂಕಿರಣದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಕೃಷಿ ಬಳಕೆ ದ್ವಿಗುಣಗೊಳಿಸುವುದು, ತೋಟದ ಬೆಳೆಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ತಂತ್ರಜ್ಞಾನಗಳ ಬಗ್ಗೆ ತಜ್ಞ ವಿಜ್ಞಾನಿಗಳು ರೈತರಿಗೆ ಮಾಹಿತಿ ನೀಡಿದರು. ಡಾ| ರಾಜೇಂದ್ರ ರಾವ್‌ ಮತ್ತು ಮೋಹನ್‌ ಸಂಕಿರಣ ನಡೆಸಿಕೊಟ್ಟರು.

ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ
ರವಿವಾರ ನಡೆದ ಮೊದಲ ವಿಚಾರ ಸಂಕಿರಣ ಅಡಿಕೆ ಬೆಳೆಯಲ್ಲಿ ಉತ್ಪಾದನಾ ತಂತ್ರಜ್ಞಾನಗಳು ವಿಚಾರವಾಗಿ ನಡೆಯಿತು. ಅಡಿಕೆ ಮತ್ತು ಸಾಂಬಾರು ಬೆಳೆ ಗಳ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ ಪ್ರಾಯೋಜಕತ್ವ ವಹಿಸಿತ್ತು. ಐಸಿಎಸ್‌ಆರ್‌ ವಿಜ್ಞಾನಿ ಡಾ| ಎನ್‌.ಆರ್‌. ನಾಗರಾಜ, ಅಡಿಕೆ ತಳಿಗಳು ಮತ್ತು ಸಂಕಿರಣ ತಳಿಗಳ ಹಾಗೂ ಅಡಿಕೆಯಲ್ಲಿ ಬೀಜೋತ್ಪಾದನೆ ಕುರಿತು ತಿಳಿಸಿದರು.

ಬೆಳೆ ಉತ್ಪಾದನೆಯಲ್ಲಿ ಅಡಿಕೆ ಬೇಸಾಯ ಪದ್ಧತಿಗಳು ವಿಚಾರವಾಗಿ ಐಸಿಎಸ್‌ಆರ್‌ ಮುಖ್ಯಸ್ಥ ಡಾ| ರವಿ ಭಟ್‌ ಹಾಗೂ ಅಡಿಕೆ ರೋಗಗಳ ಸಮಗ್ರ ನಿರ್ವಹಣೆ ಕುರಿತು ಬೆಳೆ ಸಂರಕ್ಷಣ ವಿಭಾಗ ಮುಖ್ಯಸ್ಥ ಡಾ| ವಿನಾಯಕ ಹೆಗ್ಡೆ ಮಾಹಿತಿ ಕೊಟ್ಟರು. ಅಡಿಕೆ ಕೀಟಗಳ ಸಮಗ್ರ ನಿರ್ವಹಣೆ ಕುರಿತು ಕೃಷಿ ವಿಜ್ಞಾನಿ ಡಾ| ರಾಜ್‌ಕುಮಾರ್‌ ಮಾಹಿತಿ ನೀಡಿದರು. ನೇರ ವಿಚಾರ ವಿನಿಮಯ ನಡೆಸಿ ಪಾತ್ಯಕ್ಷಿತೆ ಮೂಲಕವೂ ತಿಳಿಸಿದರು.

Advertisement

ತೋಟದ ಬೆಳೆಗಳಲ್ಲಿ ಮಣ್ಣು ಸಂರಕ್ಷಣೆ ಮತ್ತು ನೀರು ಸಂರಕ್ಷಣ ತಂತ್ರಜ್ಞಾನಗಳ ಬಗೆಗಿನ ವಿಚಾರ ಸಂಕಿರಣದಲ್ಲಿ ಅಡಿಕೆ ಮತ್ತು ಕೊಕ್ಕೊದಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಹೇಗೆ ಅಳವಡಿಸಿ ಕೃಷಿ ಕ್ಷೇತ್ರವನ್ನು ಉತ್ತೇಜಿಸಬಹುದು.

ಕೊಕ್ಕೊದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಗಳನ್ನು ರೈತರು ಪಡಕೊಂಡರು. ಜೇನು ಸಾಕಾಣೆ ಕಾರ್ಯಾಗಾರದಲ್ಲಿ ಜೇನು ನೊಣಗಳ ವೈಜ್ಞಾನಿಕ ಅಧ್ಯಯನ ಜತೆಗೆ ನೊಣಗಳ ಜೀವನ ಚಕ್ರ, ಅವು ಗಳಲ್ಲಿನ ಔಷಧೀಯ ಗುಣ ವಿವರಿಸಲಾಯಿತು.

ಮಂಗಗಳ ಉಪಟಳ ಪ್ರಸ್ತಾಪ
ಕೃಷಿ ಮೇಳದ ಮೂಲ ಧ್ಯೇಯ ಉದ್ದೇಶ ದಂತೆ ಕೃಷಿ ತೋಟಗಾರಿಕೆ, ಇಳುವರಿ ಹೆಚ್ಚಳ, ಸ್ವ-ಉದ್ಯೋಗ ವಲಯಗಳ ರೈತರನ್ನು ಒಂದು ಗೂಡಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿತು. ಪ್ರದರ್ಶಕರಿಗೆ ತಮ್ಮ ವ್ಯಾಪಾರ ವಹಿವಾಟು ವೃದ್ಧಿಸಲು ಅವಕಾಶ ನೀಡಿತು. ಮಂಗ ಸಹಿತ ಕಾಡು ಪ್ರಾಣಿಗಳ ಉಪಟಳ ನಿಯಂತ್ರಣ ವಿಚಾರದ ಬಗ್ಗೆಯೂ ಪ್ರಶ್ನೆ ಬಂತು. ಕೃಷಿ ಮೇಳದಲ್ಲಿ ಭಾಗಿಯಾದವರಿಗೆ ಕೃಷಿಗೆ ಸಂಬಂಧಿತ ಆವಿಷ್ಕಾರ‌, ಉತ್ಪನ್ನಗಳ ಮತ್ತು ವಿವಿಧ ಸೇವೆಗಳ ಮಾಹಿತಿ ದೊರೆಯಿತು.

ವೈವಿಧ್ಯ ಪ್ರದರ್ಶನ
ಕೃಷಿ ಹಾಗೂ ತೋಟಗಾರಿಕಾ ಮೇಳವು ಜೀವವೈವಿಧ್ಯತೆಯ ಸಂರಕ್ಷಣೆ ಹಾಗೂ ಬೆಳೆಗಳ ವೈವಿಧ್ಯತೆಯ ಪ್ರದರ್ಶನ, ನಿಸರ್ಗದಲ್ಲಿನ ಸಸ್ಯಗಳು ಜೈವಿಕ ಮತ್ತು ಅಜೈವಿಕ ಒತ್ತಡಗಳ ನಿರ್ವಹಣೆ, ಅವುಗಳ ವಿಕಸನ, ಸವಾಲುಗಳು, ವೈವಿಧ್ಯತೆಗೆ ಕಾರಣಗಳು ಆನುವಂಶಿಯ ವೈವಿಧ್ಯತೆಗಳ ಸಂರಕ್ಷಣೆ. ತಳಿ ಅಭಿವೃದ್ಧಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಗ್ರಾಮೀಣ ಯುವಜನತೆಗೆ ರೈತರಿಗೆ ವೇದಿಕೆಯಾಯಿತು. ಜತೆಗೆ ಜಲ, ನೆಲ, ಅಂತರ್ಜಲ ಕುರಿತು ಅರಿವು ತಂದುಕೊಟ್ಟಿತು.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next