ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ ಭಾನುವಾರ ಹಿಮಪಾತವಾಗಿದ್ದು, ದೇಗುಲ ದರ್ಶನಕ್ಕೆ ಆಗಮಿಸುವ ಯಾತ್ರಾರ್ಥಿಗಳು ಹವಾಮಾನ ಬದಲಾವಣೆ ಮನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸುವಂತೆ ಸ್ಥಳೀಯ ಪೊಲೀಸರು ಮನವಿ ಮಾಡಿದ್ದಾರೆ. ರುದ್ರಪ್ರಯಾಗ ಎಸ್‌ಪಿ ವಿಶಾಕಾ ಅಶೋಕ್ ಯಾತ್ರಾರ್ಥಿಗಳಿಗೆ ಮನವಿ ಮಾಡಿಕೊಂಡಿರುವ ವಿಡಿಯೊ ಒಂದನ್ನು ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ, ಹಿಮಾಲಯದ ಕೇದಾರನಾಥ ದೇಗುಲದಲ್ಲಿ ತೀವ್ರ ಹಿಮಪಾತವಾಗುತ್ತಿದೆ. ಈ ಹಿನ್ನೆಲೆ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಅವಲೋಕಿಸಿದ ಬಳಿಕವಷ್ಟೇ ಯಾತ್ರೆ ಕೈಗೊಳ್ಳಿ.
ಅಲ್ಲದೇ, ಯಾತ್ರಾರ್ಥಿಗಳು ಬೆಚ್ಚಗಿನ ಉಡುಪುಗಳು, ರೈನ್‌ಕೋಟ್ ಹಾಗೂ ಛತ್ರಿಗಳನ್ನು ತಮ್ಮ ಜತಗೆ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಬೇಸಿಗೆಯಾಗಿದ್ದರೂ ಈ ಬಾರಿ ಮೇನಲ್ಲಿ ಕೇದಾರನಾಥ ಹಾಗೂ ಬದರಿನಾಥ ದೇಗುಲಗಳಲ್ಲಿ ವಿಪರೀತ ಅಕಾಲಿಕ ಹಿಮಪಾತವಾಗುತ್ತಿರುವ ಹಿನ್ನೆಲೆ ಜಾಗೃತಿ ವಹಿಸುವಂತೆಯೂ ಕೇಳಿದ್ದಾರೆ. ಹವಾಮಾನ ವೈಪರೀತ್ಯಗಳ ನಡುವೆ ದೇಗುಲ ದರ್ಶಿಸುತ್ತಿರುವವ ಸಂಖ್ಯೆಯೂ ಹೆಚ್ಚಿದ್ದು, ಈಗಾಗಲೇ ಒಂದು ತಿಂಗಳ ಅವಧಿಯಲ್ಲಿ ಅಂದರೆ ಚಾರ್‌ಧಾಮ್ ಯಾತ್ರೆ ಆರಂಭಗೊಂಡಾಗಿನಿಂದ 4 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ದೇಗುಲ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.