ತೆಲುಗು ಚಿತ್ರರಂಗಕ್ಕೂ, ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧವಿದೆ. ಈಗಾಗಲೇ ತೆಲುಗಿನ ಹಲವು ನಿರ್ದೇಶಕ, ನಿರ್ಮಾಪಕರು, ನಟ,ನಟಿಯರು ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ. ಅಂತಹ ಚಿತ್ರಗಳ ಸಾಲಿಗೆ “ಸ್ನೇಹವೇ ಪ್ರೀತಿ’ ಎಂಬ ಚಿತ್ರವೂ ಸೇರಿದೆ. ಇದು ಸಂಪೂರ್ಣ ತೆಲುಗು ಮಂದಿ ಸೇರಿ ಮಾಡಿದ ಕನ್ನಡ ಚಿತ್ರ. ಕನ್ನಡ ಮತ್ತು ತೆಲುಗು ಭಾಷೆಯಲ್ಲೂ ಈ ಚಿತ್ರ ತಯಾರಾಗಿದೆ. ಅಕ್ಟೋಬರ್ 5 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಇತ್ತೀಚೆಗೆ ಸಂಸದ ರಾಮಮೂರ್ತಿ ಹಾಗೂ ನಟ ರಾಮ್‌ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. “ಸ್ನೇಹವೇ ಪ್ರೀತಿ’ ಚಿತ್ರ ಕನ್ನಡದಲ್ಲಿ ತಯಾರಾಗಲು ಮುಖ್ಯ ಕಾರಣ, ಹಿರಿಯ ನಿರ್ದೇಶಕ ಸಾಯಿಪ್ರಕಾಶ್. ಅವರು ಇಲ್ಲೊಂದು ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ಜಿಎಲ್‌ಬಿ ಶ್ರೀನಿವಾಸ್ ನಿರ್ದೇಶಕರು. ಕನ್ನಡದಲ್ಲಿ ಅವರಿಗೆ ಇದು ಮೊದಲ ಚಿತ್ರ. ಆದರೆ, ತೆಲುಗಿನಲ್ಲಿ ಈಗಾಗಲೇ ಮೂರು ಚಿತ್ರ ನಿರ್ದೇಶಿಸಿದ್ದಾರೆ. ಅನಂತಪುರದ ಎಂ.ಅನಂತರಾಮುಡು ಮತ್ತು ರಮೇಶ್ ನಾಯುಡು ಸೇರಿ ಈ ಚಿತ್ರ ನಿರ್ಮಿಸಿದ್ದಾರೆ.
ಸೂರಜ್‌ಗೌಡ ಈ ಚಿತ್ರಕ್ಕೆ ಹೀರೋ. ಅವರಿಗೆ ಸೋನಿಯಾ ಹಾಗೂ ಫರಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ವಾಸ್ತವ ಅಂಶಗಳ ಮೇಲೆ ಹೆಣೆದ ಕಥೆ. ಈಗಿನ ಕಾಲದಲ್ಲಿ ಒಂದು ಹುಡುಗ, ಹುಡುಗಿ ಜೊತೆಯಾಗಿ ಹೋಗುತ್ತಿದ್ದರೆ, ಎಲ್ಲೋ ನಿಂತು ಮಾತಾಡಿದರೆ, ಬಹುತೇಕರು ಅವರನ್ನು ಪ್ರೇಮಿಗಳೆಂದೇ ಭಾವಿಸುತ್ತಾರೆ. ಈಗಾಗಲೇ ಆ ಕುರಿತ ಅನೇಕ ಚಿತ್ರಗಳೂ ಬಂದಿವೆ. ಆದರೆ, “ಸ್ನೇಹವೇ ಪ್ರೀತಿ’ ಚಿತ್ರದಲ್ಲಿ ಅದರ ಎಳೆ ಇಲ್ಲಿದ್ದರೂ, ಬೇರೆ ರೀತಿಯ ಅರ್ಥಪಡಿಸುವುದರ ಜೊತೆಗೆ ಒಂದು ಅರ್ಥಪೂರ್ಣ ಸಂದೇಶದೊಂದಿಗೆ ಚಿತ್ರ ಮಾಡಲಾಗಿದೆ. ಕಾಲೇಜಿನ ಹುಡುಗ, ಹುಡುಗಿ ಇಬ್ಬರೂ ಆತ್ಮೀಯ ಗೆಳೆಯರು. ಆ ಪೈಕಿ ಹುಡುಗ ಒಬ್ಟಾಕೆಯನ್ನು ಪ್ರೀತಿಸಲು ಶುರುಮಾಡುತ್ತಾನೆ. ಆ ವಿಷಯ ತಿಳಿದ ಗೆಳತಿ, ಅವರಿಬ್ಬರನ್ನು ಒಂದು ಮಾಡಲು ಏನೆಲ್ಲಾ ಮಾಡುತ್ತಾಳೆ ಎಂಬುದು ಕಥೆ.
ಘಟಿಕಾಚಲಂ ಕಥೆ ಬರೆದು ಸಂಗೀತ ನೀಡಿದ್ದಾರೆ. ಚಂದ್ರು ಆರು ಹಾಡುಗಳಿಗೆ ಗೀತೆ ರಚಿಸಿದ್ದಾರೆ. ಮಾರ್ತಾಂಡ್ ಸಂಕಲನ ಮಾಡಿದರೆ, ಶಶಿಕಿರಣ್ ಸಂಭಾಷಣೆ ಬರೆದಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಾಹಸವಿದೆ. ಹೈದರಾಬಾದ್ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ರಮೇಶ್‌ಭಟ್ ಅವರಿಲ್ಲಿ ನಾಯಕಿಯ ತಂದೆ ಪಾತ್ರ ನಿರ್ವಹಿಸಿದ್ದಾರೆ.