ಗೇರುಬೀಜಕ್ಕೆ, ಹಣ್ಣಿನ ಒಳಗೇ ಇದ್ದೂ ಇದ್ದೂ ಬೇಸರವಾಯಿತು. “ಹೊರಗೆ ಬಂದೊಡನೆ ಯಾರಾದರೂ ನಮ್ಮನ್ನು ತಿನ್ನುತ್ತಾರೆ. ಅಲ್ಲಿಗೆ ನಮ್ಮ ಕತೆ ಮುಗಿಯಿತು. ಛೇ, ಇದೆಂಥಾ ಬಾಳು?’ ಎಂದು ಗೊಣಗುತ್ತಾ ಗೇರು ಹಣ್ಣಿನ ಒಳಗಿದ್ದ ಬೀಜ, ಹೊರಗಿದ್ದ ಎಲೆಯೊಡನೆ ತನ್ನ ದುಃಖ ಹಂಚಿಕೊಳ್ಳುತ್ತಿತ್ತು. ಹಣ್ಣಿನ ಚೊಟ್ಟಿನ ತುದಿಗಿದ್ದ ಎಲೆ, ಗಾಳಿಗೆ ಅಲುಗಾಡುತ್ತಾ “ಹೌದು ಪಾಪ’ ಎಂದು ತಲೆದೂಗುತ್ತಿತ್ತು. “ಹೂವು ಮಳೆ ಬಂದಾಗ ಸಂತಸ ಪಡುತ್ತದೆ, ಹಸಿರೆಲೆ ಸೂರ್ಯನ ಕಿರಣ ತನ್ನ ಮೇಲೆ ಬಿದ್ದಾಗ ನಲಿಯುತ್ತದೆ. ನನಗೇ ಅಂಥ ಯಾವ ಸುಖ ಸಿಗುತ್ತಿಲ್ಲ’ ಎಂದು ಗೇರುಬೀಜ ನಿಟ್ಟುಸಿರು ಬಿಟ್ಟಿತು. ಅದಕ್ಕೆ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿ ಹಣ್ಣಿನ ಒಳಗಿದ್ದುಕೊಂಡೇ ಮುಷ್ಕರ ಹೂಡಿತು.
ಈ ವಿಷಯ ತಿಳಿದ ವನದೇವತೆ ಈ ಪುಟ್ಟ ಬೀಜದ ಮುಂದೆ ಪ್ರತ್ಯಕ್ಷಳಾದಳು. ದೇವತೆ ಮುಂದೆ ಬೀಜ ತನ್ನ ದುಃಖವನ್ನು ತೋಡಿಕೊಂಡಿತು. ಕರಗಿದ ದೇವತೆ ಹೇಳಿದಳು: “ನಿನ್ನ ಇಚ್ಛೆಯನ್ನು ಒಂದು ದಿನದ ಮಟ್ಟಿಗೆ ಪೂರೈಸುತ್ತೇನೆ. ಅದರಂತೆ ಒಂದು ದಿನ ನೀನು ಹಣ್ಣಿನಿಂದ ಹೊರಗೆ ಇದ್ದು ಕಣ್ತುಂಬಿಕೊಳ್ಳಬಹುದು’. ಈ ಮಾತಿನಿಂದ ಸಂತಸಗೊಂಡ ಗೇರುಬೀಜಗಳೆಲ್ಲವೂ ಮರುದಿನ ಗೇರುಹಣ್ಣಿನ ಹೊರಗೆ ಅಂಟಿಕೊಂಡು ಸಭೆ ನಡೆಸಿದ್ದವು.
ಹಿತವಾದ ಬಿಸಿಲು, ಬೆಳಗಿನ ಇಬ್ಬನಿ, ನವಿರಾದ ತಂಗಾಳಿ, ಮುತ್ತಿಕ್ಕುವ ಮಳೆ ಹನಿ ಎಲ್ಲವನ್ನೂ ಕಂಡು, ಕೇಳಿ,ಅನುಭವಿಸಿ ಬೀಜಗಳಿಗಾದ ಸಂತೋಷ ಅಷ್ಟಿಷ್ಟಲ್ಲ. ನೋಡನೋಡುತ್ತಲೇ ರಾತ್ರಿಯಾಯಿತು,ದಿನ ಮುಗಿಯಿತು. ವನದೇವತೆ ಕೊಟ್ಟ ಗಡುವು ಮುಗಿದು ಬೀಜಗಳೆಲ್ಲಾ ಸಂತೃಪ್ತರಾಗಿ ಹಣ್ಣಿನ ಒಳಕ್ಕೆ, ತಮ್ಮ ಸ್ವಸ್ಥಾನಕ್ಕೆ ಮರಳಿದವು.ಆದರೆ ವರ ಪಡೆದ ಗೇರು ಬೀಜಕ್ಕೆ ಮಾತ್ರ ಇನ್ನೂ ಸಿಟ್ಟು. ಏನಾದರಾಗಲಿ, ತಾನು ಒಳಗೆ ಹೋಗುವುದಿಲ್ಲ ಎಂದು ಹಠ ಹೂಡಿತು. ಮುದಿ ಮರ, ಸುಕ್ಕಾದ ಹಣ್ಣು , ಹಣ್ಣೆಲೆ ಎಲ್ಲವೂ ಬುದ್ಧಿ ಹೇಳಲು ಪ್ರಯತ್ನಿಸಿದವು. ಯಾರೇನೇ ಹೇಳಿದರೂ ಗೇರು ಬೀಜ ಮಾತು ಕೇಳಲು ಸಿದ್ಧವಿರಲಿಲ್ಲ. ತಾನೊಂದೇ ಹೊರಗೆ ಉಳಿಯಿತು.
ಮರುದಿನ ಬೆಳಿಗ್ಗೆ ವನದೇವತೆ ಎಂದಿನಂತೆ ವನಸಂಚಾರಕ್ಕೆ ಬಂದಾಗ ಕಂಡಿದ್ದು ಹೊರಗಿದ್ದ ಗೇರು ಬೀಜ.ಸಿಟ್ಟು ಬಂದರೂ ಸುಮ್ಮನಾಗಿ ನೋಡಿಯೂ ನೋಡದಂತೆ ಮುಂದೆ ಸಾಗಿದಳು ವನದೇವತೆ. ಗೇರು ಬೀಜಕ್ಕೆ ತನ್ನ ಮೇಲೆ ಹೆಮ್ಮೆ ಮತ್ತು ಜಂಭ.
ಖುಷಿಯಿಂದ ಬಿಸಿಲಿಗೆ ಮೈಯೊಡ್ಡಿ ಕುಳಿತಿತು.ಸ್ವಲ್ಪ ಹೊತ್ತಿನ ನಂತರ ಸೂರ್ಯ ಆಕಾಶದಲ್ಲಿ ಮೇಲೇರಿದ. ಈಗ ಗೇರು ಬೀಜಕ್ಕೆ ಶಾಖ ಹೆಚ್ಚು ಎನಿಸತೊಡಗಿತು, ಮೈ ಸುಡಲಾರಂಭಿಸಿತು. ಅಷ್ಟರಲ್ಲಿ ಚಿಲಿಪಿಲಿ ಎನ್ನುತ್ತಿದ್ದ ಹಕ್ಕಿಗಳು ಈ ಬೀಜ ಕಂಡು ತಮ್ಮ ಕೊಕ್ಕಿನಿಂದ ಕುಕ್ಕಿ ತಿನ್ನಲು ಪ್ರಯತ್ನಿಸಿದವು. ಮೈಯೆಲ್ಲಾ ಗಾಯವಾಯಿತು ಬೀಜಕ್ಕೆ. ಅಲ್ಲದೆ ಆಟಕ್ಕೆ ಬಂದ ಮಕ್ಕಳು ಹೊರಗಿದ್ದ ಬೀಜ ಕಂಡು ಕಲ್ಲು ಎಸೆಯಲು ಶುರು ಮಾಡಿದರು. ರಾತ್ರಿಯಾದಂತೆ ಎಲ್ಲೆಲ್ಲೂ ಕತ್ತಲು.ನಿದ್ದೆ ಮಾಡಲೂ ಹೆದರಿಕೆ.ಜೋರು ಮಳೆಯಲ್ಲಿ ಮೈ ತೋಯ್ದು ತೊಪ್ಪೆಯಾದರೆ,ಬಿರುಗಾಳಿಯಿಂದ ಗಡಗಡ ನಡುಕ.ಪ್ರಾಣಿ ಪಕ್ಷಿಗಳಿಂದ ಜೀವ ಬೆದರಿಕೆ. ಹಿಂದಿನ ದಿನ ಚೆಂದ ಕಂಡಿದ್ದು ಈಗ ಹೆದರಿಕೆ ಹುಟ್ಟಿಸತೊಡಗಿತು. ಹೇಗೋ ಮಾಡಿ ರಾತ್ರಿ ಕಳೆಯುವಷ್ಟರಲ್ಲಿ ಸಾಕು ಸಾಕಾಯಿತು.
ಅಂತೂ ಮರುದಿನ ವನದೇವತೆ ಬರುವಾಗ ಬಿಕ್ಕಿ ಬಿಕ್ಕಿ ಅಳುತ್ತಿತ್ತು ಗೇರು ಬೀಜ. “ನನ್ನ ತಪ್ಪಿನ ಅರಿವಾಗಿದೆ. ನಾನು ಹಣ್ಣಿನ ಒಳಗೇ ಇರುತ್ತೇನೆ. ಹೊರಗಿನ ಪ್ರಪಂಚವನ್ನು ನೋಡಬೇಕೆಂದಿತ್ತು, ನೋಡಿದೆ. ಅಷ್ಟು ಸಾಕು. ಈಗ ಹಣ್ಣಿನ ಒಳಗೆ ಹೋಗುತ್ತೇನೆ. ನನ್ನ ಮನವಿ ನೆರವೇರಿಸು’ ಎಂದು ದೈನ್ಯದಿಂದ ಬೇಡಿತು.ಆದರೆ ವನದೇವತೆ ಏನೂ ಮಾಡುವಂತಿರಲಿಲ್ಲ. ಏಕೆಂದರೆ ಮನಸ್ಸಿಗೆ ಬೇಕಾದಾಗ ಒಳ ಹೋಗುವ, ಹೊರಬರುವ ಹಾಗೆ ಮಾಡಲು ಆಕೆಯಿಂದ ಸಾಧ್ಯವಿರಲಿಲ್ಲ. ತನ್ನೆಲ್ಲಾ ಶಕ್ತಿಯನ್ನು ಆಕೆ ಈಗಾಗಲೇ ಪ್ರಯೋಗಿಸಿಬಿಟ್ಟಿದ್ದಳು. ಗೇರು ಬೀಜ ಒಂದೇ ಸಮ ಅಳುತ್ತಲೇ ಇತ್ತು ಅಯ್ಯೋ! “ನಾನು ಹೊರಗೇ ಉಳಿದರೆ ಖಂಡಿತವಾಗಿ ಉಳಿಯುವುದಿಲ್ಲ’ ಎಂದು ಗೋಳಾಡಿತು. ಕನಿಕರ ಉಕ್ಕಿ ವನದೇವತೆ “ನೀನು ಮತ್ತೆ ಒಳಹೋಗುವಂತೆ ಮಾಡಲು ಸಾಧ್ಯವಿಲ್ಲ.ಆದರೆ ನಿನ್ನ ಕೋಮಲ ಮೈಗೆ ಕವಚವನ್ನು ಕೊಡಬಲ್ಲೆ.ಅದರಿಂದ ನಿನಗೆ ತಕ್ಕ ಮಟ್ಟಿಗೆ ರಕ್ಷಣೆ ಸಿಗುತ್ತದೆ. ನೆನಪಿಡು,ಸೃಷ್ಟಿಯ ನಿಯಮಗಳು ಎಲ್ಲರ ಹಿತಕ್ಕೆ! ಅದನ್ನು ಅರಿಯದೇ ಉಲ್ಲಂ ಸಿದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿ ಗೇರು ಬೀಜದ ಮೇಲೆ ಕವಚ ಸೃಷ್ಟಿಸಿದಳು.ಅಂದಿನಿಂದ ಕವಚ ಹೊದ್ದ ಗೇರು ಬೀಜ ಹಣ್ಣಿನ ಹೊರಗೇ ಉಳಿಯಿತು!!
ಡಾ. ಕೆ.ಎಸ್. ಚೈತಾ