Advertisement

ಸ್ನೇಹಲೋಕ; ಕ್ಲಬ್‌ ಒಂದು, ಕೆಲಸು ನೂರು…

09:18 AM Feb 13, 2020 | mahesh |

ಲೇಡಿಸ್‌ ಕ್ಲಬ್‌ ಅಂದಾಕ್ಷಣ, ಹರಟೆ ಹೊಡೆಯಲು, ಮೋಜು ಮಸ್ತಿ ಮಾಡಲು ಮಹಿಳೆಯರು ಒಂದೆಡೆ ಸೇರುವ ತಾಣ ಎಂಬ ಕಲ್ಪನೆ ಕೆಲವರಿಗೆ ಇದೆ. ಅಂಥ ಕ್ಲಬ್‌ಗಳಿಂದ ಏನೂ ಪ್ರಯೋಜನವಿಲ್ಲ ಅಂತ ಮೂಗು ಮುರಿಯುವವರೂ ಇದ್ದಾರೆ. ಆದರೆ, ಈ ಮಾತಿಗೆ ಅಪವಾದ ಎನ್ನುವಂತೆ ಬಾಗಲಕೋಟೆ ಜಿಲ್ಲೆಯ ಮುಧೋಳದ “ಸ್ನೇಹಲೋಕ ಲೇಡಿಸ್‌ ಕ್ಲಬ್‌’ ಕೆಲಸ ಮಾಡುತ್ತಿದೆ. ಚೈನ್‌ವರ್ಕ್‌ ಮೂಲಕ, ಮಹಿಳಾ ಸಬಲೀಕರಣದ ಹಾದಿಯಲ್ಲಿ ಶ್ರಮಿಸುತ್ತಿರುವ ಈ ಕ್ಲಬ್‌ನ ಕೆಲಸಗಳು ಶ್ಲಾಘನೀಯ.

Advertisement

ಕ್ಲಬ್‌ ಹಿಂದಿನ ಶಕ್ತಿ
2010ರಲ್ಲಿ ಪ್ರಾರಂಭವಾದ ಈ ಕ್ಲಬ್‌, ಇದುವರೆಗೆ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಆರ್ಥಿಕವಾಗಿ ಗಟ್ಟಿಗೊಳಿಸಿದೆ. ಸರ್ಕಾರದ ಅನುದಾನ, ಬೆಂಬಲದ ನಿರೀಕ್ಷೆಯಿಲ್ಲದೆ ಕೆಲಸ ಮಾಡುತ್ತಿರುವ ಈ ಕ್ಲಬ್‌ನ ಸ್ಥಾಪಕಿ ಸ್ನೇಹಾ ಹಿರೇಮಠ ಎಂಬ ಬಡ ಹೆಣ್ಣುಮಗಳು. 8ನೇ ತರಗತಿಯವರೆಗೆ ಓದಿ, ನಂತರ ಕೂಲಿ ಮಾಡುತ್ತಲೇ ಬಾಹ್ಯವಾಗಿ ಎಸ್ಸೆಸ್ಸೆಲ್ಸಿ ಹಾಗೂ ಎನ್‌ಟಿಸಿ ಕೋರ್ಸ್‌ ಮುಗಿಸಿರುವ ಸ್ನೇಹಾಳ ಕೈ ಹಿಡಿದಿದ್ದು ಹೊಲಿಗೆ ಕೆಲಸ. ಹೊಟ್ಟೆಪಾಡಿಗಾಗಿ ಟೇಲರಿಂಗ್‌ ಕೆಲಸ ಪ್ರಾರಂಭಿಸಿದ ಈಕೆ, ತನ್ನಂತೆಯೇ ಇತರೆ ಹೆಣ್ಣುಮಕ್ಕಳೂ ದುಡಿಯುವಂತಾಗಲಿ ಎಂದು ಹೊಲಿಗೆ ತರಬೇತಿಯನ್ನೂ ನೀಡತೊಡಗಿದರು.

ಆದರೆ, ಸ್ನೇಹಾರ ಬಳಿ ತರಬೇತಿಗೆ ಬರುತ್ತಿದ್ದ ಕೆಲವರು, ಕನಿಷ್ಠ ಶುಲ್ಕವನ್ನೂ ಭರಿಸಲಾಗದೆ, ಅರ್ಧದಲ್ಲಿಯೇ ಕಲಿಕೆ ನಿಲ್ಲಿಸುತ್ತಿದ್ದರು. ಅಂಥವರಿಗೆ ಉಚಿತವಾಗಿ ಹೊಲಿಗೆ ಕಲಿಸತೊಡಗಿದ ಸ್ನೇಹಾ, ಬಡ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಕ್ಲಬ್‌ ಸ್ಥಾಪಿಸಲು ನಿರ್ಧರಿಸಿದರು. ಹಾಗೆ ಶುರುವಾಗಿದ್ದೇ, “ಸ್ನೇಹಲೋಕ ಲೇಡಿಸ್‌ ಕ್ಲಬ್‌’.

ಸ್ವ ಉದ್ಯೋಗ ತರಬೇತಿ
ಪ್ರಾರಂಭದಲ್ಲಿ ಕೆಲವೇ ಮಹಿಳೆಯರಿಂದ ಶುರುವಾದ ಕ್ಲಬ್‌, ಈಗ ಮುಧೋಳ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸ್ವ ಉದ್ಯೋಗ ತರಬೇತಿ ನೀಡುವಷ್ಟು ಬೆಳೆದಿದೆ. ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಕಸೂತಿ, ಕ್ಯಾಂಡಲ್‌ ತಯಾರಿಕೆ, ಹ್ಯಾಂಡ್‌ ಪರ್ಸ್‌ ಮತ್ತು ಗೊಂಬೆ ತಯಾರಿಕೆ, ಮುತ್ತಿನ ಅಲಂಕಾರ, ಮೆಹಂದಿ, ಬ್ಯೂಟಿಷಿಯನ್‌ ಕೋರ್ಸ್‌ ಸೇರಿದಂತೆ ಅನೇಕ ಸ್ವ ಉದ್ಯೋಗ ತರಬೇತಿ ನೀಡಲಾಗುತ್ತಿದೆ.

ಸಮಾಜಮುಖಿ ಕೆಲಸ
ಬಾಲ್ಯವಿವಾಹದ ಕುರಿತು ಜಾಗೃತಿ, ರಕ್ತದಾನ ಶಿಬಿರ, ನೆರೆ-ಬರ ಪರಿಹಾರ ಸಂಗ್ರಹದಲ್ಲಿಯೂ ಈ ಕ್ಲಬ್‌ ಹಿಂದೆ ಬಿದ್ದಿಲ್ಲ. ಸಭೆ- ಸಮಾರಂಭದಲ್ಲಿ ಮಿಕ್ಕಿದ ಆಹಾರವನ್ನು ಸಂಗ್ರಹಿಸಿ ಸ್ಲಂ ನಿವಾಸಿಗಳಿಗೆ, ಕೂಲಿ ಕಾರ್ಮಿಕರಿಗೆ ವಿತರಿಸುವ ಕೆಲಸವನ್ನೂ ಕ್ಲಬ್‌ ಮಾಡುತ್ತಿದೆ. ಸದಸ್ಯರೆಲ್ಲ ಒಟ್ಟಾಗಿ ಪಟ್ಟಣದ ಬೀದಿಗಳನ್ನು ತಿಂಗಳಿಗೊಂದು ಬಾರಿ ಸ್ವತ್ಛಗೊಳಿಸುತ್ತಾರೆ. ಈ ಕ್ಲಬ್‌ನಲ್ಲಿ ಪದಾಧಿಕಾರಿಗಳೇ ಇಲ್ಲ. ನಾವೆಲ್ಲರೂ ಸಮಾನರು ಎಂದು ಹೇಳುವ ಸ್ನೇಹಾ ಮತ್ತು ಅವರ ತಂಡದ ಕೆಲಸಕ್ಕೊಂದು ಸಲಾಂ ಹೇಳಲೇಬೇಕು.

Advertisement

-ಟಿ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next