ಹಾಗೊಂದು ಪ್ರಶ್ನೆ ಬರುವುದು ಸಹಜವೇ. ಏಕೆಂದರೆ, ಮುಂಗಾರು ಮಳೆ 2 ಚಿತ್ರದ ಗಳಿಕೆ ಮತ್ತು ಜನಪ್ರಿಯತೆಗಳೇನೇ ಇರಲಿ, ಚಿತ್ರ ಮಾತ್ರ ಬಹಳ ದೊಡ್ಡ ಹೈಪ್ ಹುಟ್ಟುಹಾಕಿತ್ತು. ಅದರಲ್ಲೂ ಚಿತ್ರದ ನಾಯಕಿ ನೇಹಾ ಶೆಟ್ಟಿ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದರೆ, ಚಿತ್ರ ಬಿಡುಗಡೆಯಾಗಿ ಐದು ತಿಂಗಳಾಗುತ್ತಿವೆ. ಈ ಮಧ್ಯೆ, ಚಂದನ್ ಶೆಟ್ಟಿಯವರ ಚಾಕ್ಲೆಟ್ ಗರ್ಲ್ ಎಂಬ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ನೇಹಾ ಶೆಟ್ಟಿ ಯಾವುದೇ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಬಂದಿಲ್ಲ. ಇಷ್ಟಕ್ಕೂ ಚಾಕ್ಲೆಟ್ ಗರ್ಲ್ ನೇಹಾ ಯಾಕೆ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.
Advertisement
ಮುಂಗಾರು ಮಳೆ-2 ಚಿತ್ರ ಬಿಡುಗಡೆಗೂ ಮುನ್ನವೇ ನನಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಆದರೆ, ನಾನು ಸಿನೆಮಾ ಬಿಡುಗಡೆಯಾದ ಮೇಲೆ ಒಪ್ಪಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಅದರಂತೆ ಈಗ ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದೇನೆ. ಮುಂಗಾರು ಮಳೆ-2 ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದೊಂದು ಬೆಂಚ್ ಮಾರ್ಕ್. ಎರಡನೇ ಚಿತ್ರದ ಪಾತ್ರ ಕೂಡಾ ವಿಭಿನ್ನವಾಗಿರಬೇಕೆಂಬ ಆಸೆ ನನ್ನದು. ಸಿನೆಮಾದಿಂದ ಸಿನೆಮಾಕ್ಕೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು. ಆಗ ಮಾತ್ರ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ನಂಬಿರುವವಳು ನಾನು. ಇಲ್ಲಿವರೆಗೆ ಬಂದ ಆಫರ್‌ಗಳೇನೋ ಚೆನ್ನಾಗಿವೆ. ಆದರೆ ನಾನು ಬಯಸಿರುವಂತಹ ಪಾತ್ರ ಅದರಲ್ಲಿ ಇರಲಿಲ್ಲ. ಹಾಗಾಗಿ, ಮತ್ತೆ ಒಳ್ಳೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ. ಸದ್ಯದಲ್ಲೇ ನನ್ನ ಕಡೆಯಿಂದ ಸಿನೆಮಾ ಸುದ್ದಿ ಬರುತ್ತದೆ’ ಎನ್ನುತ್ತಾರೆ ಅವರು.