ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ನವ ನಟ, ನಟಿ, ತಂತ್ರಜ್ಞರಷ್ಟೇ ಅಲ್ಲ, ಹೊಸ ಗಾಯಕ, ಗಾಯಕಿಯರೂ ಎಂಟ್ರಿಯಾಗುತ್ತಿದ್ದಾರೆ. ಆ ಸಾಲಿಗೆ ಈಗಷ್ಟೇ ಹಾಡುವ ಮೂಲಕ ತನ್ನೊಳಗಿನ ಪ್ರತಿಭೆ ಹೊರಸೂಸಲು ಸಜ್ಜಾಗಿರುವ ಸ್ನೇಹಾ ಸಂಜೀವ ಹೊಸ ಸೇರ್ಪಡೆ. ಈಗಷ್ಟೇ ಸಿನಿಲೋಕ ಸ್ಪರ್ಶಿಸಿರುವ ಸ್ನೇಹಾ ಸಂಜೀವ ಅಪ್ಪಟ ಕನ್ನಡತಿ. ಕನ್ನಡದ ಜೊತೆ ತೆಲುಗು, ತಮಿಳು ಹಾಗು ಹಿಂದಿ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ಪರಭಾಷೆ ಗಾಯಕಿ ಎನಿಸಿಕೊಂಡಿದ್ದಾರೆ. ಕೇವಲ ಸಿನಿಮಾ ಹಾಡುಗಳಷ್ಟೇ ಅಲ್ಲ, ಕನ್ನಡ ಹಾಗು ಹಿಂದಿ ಆಲ್ಬಂಗಳಿಗೂ ಸ್ನೇಹಾ ಧ್ವನಿಯಾಗಿದ್ದಾರೆ. ಅಂದಹಾಗೆ, ಸ್ನೇಹಾ ಮೂಲತಃ ಧಾರವಾಡದವರು. 10ನೇ ವಯಸ್ಸಲ್ಲಿ ಸಂಗೀತ ಲೋಕಕ್ಕೆ ಅಂಬೆಗಾಲಿಟ್ಟ ಅವರು, ಆರಂಭದ ದಿನದಲ್ಲಿ ವತ್ಸಲಾ ಕುಸನೂರ ಅವರ ಬಳಿ ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಹಾಗು ಗ್ವಾಲಿಯರ್ ಘರನಾ ಕಲಿತಿದ್ದಾರೆ. ಸ್ನೇಹಾ ಅವರ ತಾಯಿ ಕೂಡ ಸಂಗೀತ ಪ್ರೇಮಿಯಾಗಿದ್ದು, ದೇವರ ನಾಮ, ಭಜನೆಯನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರಿಂದ ಅವರ ಪ್ರಭಾವ ಸ್ನೇಹಾ ಅವರಿಗೂ ಬೀರಿದೆ. ಹೀಗಾಗಿ ಸ್ನೇಹಾ ಚಿಕ್ಕಂದಿನಲ್ಲೇ ಮುಂಬೈನ ಗಂಧರ್ವ ಮಹಾಮಂಡಲ ವಿದ್ಯಾಲಯದಲ್ಲಿ ಸಂಗೀತ ಮಾಧ್ಯಮ ಪರೀಕ್ಷೆ ತೇರ್ಗಡೆಯಾಗಿ, ನಂತರ ಹಿರಿಯ ಸಂಗೀತ ಕಲಾವಿದರಾದ ಕಟಗೇರಿ ಅನಂತ್ ಆಚಾರ್ಯ ಬಳಿ ದಾಸವಾಣಿ ಕಲಿತಿದ್ದಲ್ಲದೆ, ಧಾರವಾಡದ ಕೆಇ ಬೋರ್ಡ್ ಶಾಲೆಯಲ್ಲಿ ಸಂಗೀತದಲ್ಲಿ ಬಿ.ಎ.ಶಿಕ್ಷಣ ಮುಗಿಸಿ, ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಗೀತ ಡಿಪ್ಲೊಮೊ ಪೂರೈಸಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮ ನೀಡಿ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ವಿದೇಶಗಳಲ್ಲೂ ಇವರ ಸಂಗೀತ ಕಾರ್ಯಕ್ರಮ ವಿಸ್ತರಿಸಿದೆ. ಕಳೆದ ಒಂದು ವರ್ಷದ ಹಿಂದೆ ಚಿತ್ರರಂಗಕ್ಕೂ ಕಾಲಿಟ್ಟ ಸ್ನೇಹಾ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. “ಜಗ್ಗಿ ಜಗನ್ನಾಥ್’ ಚಿತ್ರದಲ್ಲಿ ಸಂಗೀತ ನಿರ್ದೇಶಕ ಎ.ಎಂ.ನೀಲ್ ಸಂಯೋಜನೆಯಲ್ಲಿ ಮೂಡಿಬಂದ ಹಾಡಿಗೆ ಧ್ವನಿಯಾಗಿದ್ದಲ್ಲದೆ, ನೀಲ್ ಸಂಗೀತ ನಿರ್ದೇಶನದಲ್ಲಿ ಹಿಂದಿ ಭಾಷೆಯಲ್ಲಿ ಮೂಡಿ ಬರಲಿರುವ “ತೇರೇಲಿಯೇ’ ಎಂಬ ವಿಡಿಯೋ ಆಲ್ಬಂ ಹಾಗು ಕನ್ನಡದಲ್ಲಿ ತಯಾರಾಗುತ್ತಿರುವ “ಖುಷಿ’ ವಿಡಿಯೋ ಆಲ್ಬಂನಲ್ಲಿ ಸ್ನೇಹಾ ಹಾಡಿದ್ದಾರೆ. ವಿಶೇಷವೆಂದರೆ, ಈ ಹಾಡಿನ ವಿಡಿಯೋ ಚಿತ್ರೀಕರಣ ಹಾಗು ಮಿಕ್ಸಿಂಗ್ ಕೂಡ ಎ.ಆರ್.ರೆಹಮಾನ್ ಸ್ಟುಡಿಯೋದಲ್ಲಿ ನಡೆದಿದೆ. ಆಲ್ಬಂಗೆ ಮಹಾದೇವ್ ಕುಲಕರ್ಣಿ ಮತ್ತು ವಿ. ವಿಜಯ ಅವರ ಸಾಹಿತ್ಯವಿದೆ. ಸದ್ಯಕ್ಕೆ ಸ್ವರ ತರಂಗ ಅಕಾಡೆಮಿ ಸಂಸ್ಥಾಪಕರಾದ ಪಂಡಿತ ಸಂಜೀವ ಕೋರ್ತಿ, ಮಹಾದೇವ್ ಕುಲಕರ್ಣಿ, ಸಮೀರ ಕುಲಕರ್ಣಿ ಅವರ ಪ್ರೋತ್ಸಾಹದಲ್ಲಿ ಸ್ನೇಹಾ ಗಾಯನ ಯಾನ ಶುರು ಮಾಡಿರುವ ಅವರಿಗೆ ಕನ್ನಡದಲ್ಲೇ ಒಳ್ಳೆಯ ಗಾಯಕಿ ಎನಿಸಿಕೊಳ್ಳುವ ಛಲವಿದೆ.