Advertisement
ಇತ್ತೀಚಿಗೆ ಮುನಿರೆಡ್ಡಿ ಪಾಳ್ಯದಲ್ಲಿ ಹಾವು ಕಚ್ಚಿ ಐದು ವರ್ಷ ಬಾಲಕಿ ಸಾವನ್ನಪ್ಪಿದಳು. ಇದರ ಜತೆಗೆ ಬ್ಯಾಟರಾಯನಪುರ ಶಾಲೆಯೊಂದರಲ್ಲಿ ನಿತ್ಯವೂ ಹಾವುಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿದ್ದದ್ದವು. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಈ ವರೆಗೆ ಎಚ್ಚೆತ್ತುಕೊಳ್ಳದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದಲ್ಲದೆ, “ಹಾವುಗಳು ಕಾಣಿಸಿಕೊಂಡಿದೆ ರಕ್ಷಣೆಗೆ ಬನ್ನಿ,’ ಎಂದು ಪಾಲಿಕೆಗೆ ನಗರದ ಹಲವರು ಕರೆ ಮಾಡಿ ದೂರು ನೀಡಿದ್ದರೂ, ಪಾಲಿಕೆಯ ಯಾವೊಬ್ಬ ಸಿಬ್ಬಂದಿಯೂ ಸ್ಥಳಕ್ಕೆ ಹೋಗದೇ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ನಿತ್ಯ ಪಾಲಿಕೆಗೆ 30 ದೂರುಗಳು!: ಹಾವು ಕಾಣಿಸಿಕೊಂಡ ಬಗ್ಗೆ ಕಳೆದ ಒಂದು ತಿಂಗಳಿಂದ ಪಾಲಿಕೆಯ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ನಿತ್ಯ 30ಕ್ಕೂ ಹೆಚ್ಚು ದೂರುಗಳು ಬರುತ್ತಿವೆ. ಆದರೆ, ಪಾಲಿಕೆಯಲ್ಲಿ ಕೇವಲ 6 ಮಂದಿ ಮಾತ್ರ ಸಿಬ್ಬಂದಿ ಇರುವುದರಿಂದ ಸಾರ್ವಜನಿಕರ ಸಹಾಯಕ್ಕೆ ಧಾವಿಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ವಲಯ ಮಟ್ಟದಲ್ಲಿಯೂ ದೂರುಗಳು ಬರುತ್ತಿವೆ. ಆದರೆ, ಪಾಲಿಕೆಯ ಸಿಬ್ಬಂದಿ ಸಕಾಲಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಾರ್ವಜನಿಕರು ನೇರವಾಗಿ ಸ್ವಯಂ ಸೇವಕರನ್ನು ಸಂಪರ್ಕಿಸಬೇಕಾಗುತ್ತಿದೆ.
ಮಕ್ಕಳಿಗೆ ಅನಾಹುತವಾದರೆ ಮೇಯರ್ರೆ ಹೊಣೆ: ನಗರದ ಬ್ಯಾಟರಾಯನಪುರ ಸರ್ಕಾರಿ ಶಾಲೆಗೆ ನಿತ್ಯ ಹಾವುಗಳು ನುಗ್ಗುತ್ತಿರುವುದರಿಂದ ಶಾಲೆಯಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಮಕ್ಕಳು ಶಾಲೆಗೆ ಬರಲು ಆತಂಕ ಪಡುವಂತಾಗಿದೆ. ಆ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ಶಾಲೆಯ ಮುಖ್ಯ ಶಿಕ್ಷಕಿ ಮಹೇಶ್ವರಿ ಅವರು ಸ್ವತಃ ಮೇಯರ್ ಜಿ.ಪದ್ಮಾವತಿ ಅವರಿಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದ್ದರು.
ಶನಿವಾರದೊಳಗೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸುವ ಭರವಸೆಯನ್ನು ಮೇಯರ್ ನೀಡಿದ್ದರು. ಆದರೆ ಈವರೆಗೆ ಯಾವುದೇ ಸಿಬ್ಬಂದಿ ಶಾಲೆಯ ಬಳಿಗೆ ಬಂದಿಲ್ಲ. ಶಾಲೆಯಲ್ಲಿ ಯಾವುದಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಮೇಯರ್ ಅವರೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಪೋಷಕರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಮೇಯರ್ ಅವರನ್ನು ಪ್ರಶ್ನಿಸಿದರೆ, ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದರೊಂದಿಗೆ ಸಿಬ್ಬಂದಿ ಕಡಿಮೆ ಇರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ಸಮಸ್ಯೆಯನ್ನು ಪಾಲಿಕೆಯ ಅರಣ್ಯ ಇಲಾಖೆ ವಿಭಾಗದ ಉಪ ಸಂರಕ್ಷಣಾಧಿಕಾರಿಗಳ ಗಮನಕ್ಕೆ ತರಲು ಸಾರ್ವಜನಿಕರು ಹಲವಾರು ಬಾರಿ ಪ್ರಯತ್ನಿಸಿದ್ದಾರೆ ಎನ್ನಲಾಗಿದ್ದು, ಅವರು ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
* 06- ಪ್ರಾಣಿ ನಿಯಂತ್ರಣಕ್ಕೆ ಬಿಬಿಎಂಪಿ ಬಳಿಸಿರುವ ಸಿಬ್ಬಂದಿ (ಸ್ವಯಂ ಸೇವಕರು – ಖಾಯಂ ಸಿಬ್ಬಂದಿಯಲ್ಲ)
* 30- ಹಾವುಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಿತ್ಯ ಪಾಲಿಕೆ ಕೇಂದ್ರ ಕಚೇರಿಗೆ ಬರುತ್ತಿರುವ ದೂರುಗಳು(ವಲಯ ಮಟ್ಟದ ಮಾಹಿತಿ ಲಭ್ಯವಾಗಿಲ್ಲ)
* 198- ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳು