Advertisement

ಹಾವಿನ ಕುತೂಹಲ ತಣಿಸಿದ ಸ್ನೇಕ್‌ ಶ್ಯಾಮ್‌

11:31 AM Dec 17, 2018 | |

ಕಲಬುರಗಿ: ಹಾವು ಗಂಡೋ, ಹೆಣ್ಣೋ ಹೇಗೆ ತಿಳಿಯುತ್ತದೆ? ಹಾವಿಗೂ ಕೂದಲು ಇರುತ್ತಾ? ಕನಸಲ್ಲಿ ಹಾವು ಬಂದರೆ
ಕೆಡಕು ಆಗುತ್ತಾ? ಹಾವು ಕಂಡರೆ ನಿಮಗೆ ಭಯವಾಗಲ್ವಾ ಸರ್‌? ಹೀಗೆ ಒಂದರ ಮೇಲೊಂದು ಪ್ರಶ್ನೆಗಳನ್ನು ಎದುರಿಸಿದ್ದು ಮೈಸೂರಿನ ಸ್ನೇಕ್‌ ಶ್ಯಾಮ್‌. ಅದೇ ರೀತಿ ಫಟಾಫಟ್‌ ಉತ್ತರವನ್ನು ಕೊಟ್ಟ ಸ್ನೇಕ್ ಶ್ಯಾಮ್‌ ಮಕ್ಕಳ ಕುತೂಹಲ ತಣಿಸಿದರು. 

Advertisement

ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಎರಡನೇ ದಿನವಾದ ರವಿವಾರ ನಡೆದ “ಹಾವುಗಳ ಬಗ್ಗೆ ಅರಿವು’ ಸಂವಾದವು ಸ್ನೇಕ್‌ ಶ್ಯಾಮ್‌ ಮತ್ತು ಮಕ್ಕಳ ಜುಗಲ್‌ಬಂದ್‌ಗೆ ವೇದಿಕೆ ಆಯಿತು. 

ಪ್ರಕೃತಿಯಲ್ಲಿ ಅತಿ ಭಯ ಹುಟ್ಟಿಸುವ ಪ್ರಾಣಿ ಹಾವು. ದೇಶದಲ್ಲಿ 75ಕ್ಕೂ ಹೆಚ್ಚು ವಿವಿಧ ಹಾವುಗಳು ಇವೆ. ನಾಗರಹಾವು,
ನಾಗಮಂಡಲ, ಮಂಡಲ ಹಾವು ಮತ್ತು ಕಟ್ಟು ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತಾನೆ. ಯಾವುದೇ ಹಾವು ತಾನಾಗಿಯೇ ಬಂದು ಕಚ್ಚುವುದಿಲ್ಲ. ನಾವೇ ಅದರ ಬಳಿಗೆ ಹೋಗಿ ಕಚ್ಚಿಸಿಕೊಳ್ಳುತ್ತೇವೆ. ಹಿಂದೆ ಮುಂದೆ ಯೋಚಿಸದೆ ಪೊದೆ, ಗುಂಡಿಯಲ್ಲಿ ಕೈ ಹಾಕಿ, ನಡೆದು ಹೋಗುವಾಗ ತುಳಿದು ಹಾವಿನಿಂದ ಕಚ್ಚಿಕೊಳ್ಳುತ್ತೇವೆ. ಮನುಷ್ಯನ ಮುಂಗೈ ಮತ್ತು ಪಾದಕ್ಕೆ ಹೆಚ್ಚು ಹಾವು ಕಚ್ಚುತ್ತದೆ ಎಂಬುದನ್ನು ಗಮನಿಸಿದ್ದಿರಾ ಎಂದು ಸ್ನೇಕ್‌ ಶ್ಯಾಮ್‌ ಪ್ರಶ್ನಿಸಿದಾಗ ಇಡೀ ಮಕ್ಕಳಲ್ಲಿ ಹೊಸದೊಂದು ಆಲೋಚನೆ ಪುಟಿಯಿತು.

ಹಾವು ಕಚ್ಚಿದಾಗ ಯಾವುದೇ ಅವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸದೆ, ತಕ್ಷಣವೇ ಆಸ್ಪತ್ರೆಗೆ ಸಾಗಿಸಬೇಕು. ನೀರು, ಆಹಾರ ತಿನ್ನಲು ಕೊಡಬಾರದು. ಹಾವು ಕಚ್ಚಿದಾಗ ಬಿಗಿಯಾಗಿ ದಾರ ಕಟ್ಟುವುದು ತಪ್ಪು ಕಲ್ಪನೆ. ಹಾವು ಹಾಲು ಕುಡಿಯುತ್ತದೆ ಎನ್ನುವ ಮೂಢನಂಬಿಕೆ ಎಲ್ಲರಲ್ಲೂ ಇದೆ. ಹಾವಿನ ಆಹಾರ ಹಾಲಲ್ಲ. ಹುತ್ತವನ್ನು ಹಾವು ನೈಸರ್ಗಿಕವಾಗಿ ಮಾಡಿಕೊಂಡಿರುತ್ತದೆ. ಹುತ್ತಕ್ಕೆ ಹಾಲು ಹಾಕಿ, ಪೂಜೆ ಮಾಡಿ ಹಾವು ಕೊಲ್ಲಬೇಡಿ ಎಂದು ಸ್ನೇಕ್‌ ಶ್ಯಾಮ್‌ ಹೇಳಿದರು.

ಸಂತೋಷ-ತಮಾಷೆ ಭರಿತವಾಗಿ ಉತ್ತರ: ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ಜಿಲ್ಲೆಗಳ ಮಕ್ಕಳ ಹಾವುಗಳ ಬಗೆಗಿನ ಕುತೂಹಲಕಾರಿ ಪ್ರಶ್ನೆಗಳಿಗೆ ಸ್ನೇಕ್‌ ಶ್ಯಾಮ ಸಂತೋಷ ಹಾಗೂ ತಮಾಷೆ ಭರಿತವಾಗಿ
ಉತ್ತರಿಸಿದರು. ಹಾವು ಗಂಡೋ, ಹೆಣ್ಣೋ ಎಂದು ಸುಲಭವಾಗಿ ಗೊತ್ತಾಗಲ್ಲ. ಅದನ್ನು ಹಿಡಿದಾಗ ಎರಡು ಚರ್ಮದ ಕಡಿಗಳು ಹೊರ ಬಂದರೆ ಅದು ಗಂಡು ಎಂದರ್ಥ. ಹಾವಿನ ದೇಹದಲ್ಲಿ ರಂಧ್ರಗಳು ಇರುವುದಿಲ್ಲ. ಹೀಗಾಗಿ ಅದಕ್ಕೆ ಕೂದಲು ಬೆಳೆಯುವುದಿಲ್ಲ.

Advertisement

ನೀವು ಹಗಲಲ್ಲಿ ನೋಡಿದ್ದರೆ ಮಾತ್ರ ಕನಸಲ್ಲಿ ಹಾವು ಬರುತ್ತದೆ ಅಷ್ಟೆ. ಅದರಿಂದ ಕೆಡಕು ಹೇಗಾಗುತ್ತದೆ ಎಂದು ಮರು ಪ್ರಶ್ನಿಸಿದ ಶ್ಯಾಮ್‌, ನನಗೆ ಸ್ನೇಕ್‌ ಕಂಡರೆ ಭಯವಿಲ್ಲ, ಹೆಂಡತಿ ಕಂಡರೆ ಮಾತ್ರ ಭಯ ಎಂದರು. ಆಗ ಇಡೀ ಸಂಭಾಂಗಣ ನಗೆಗಡಲಲ್ಲಿ ತೇಲಿತು.  

Advertisement

Udayavani is now on Telegram. Click here to join our channel and stay updated with the latest news.

Next