ಕೊಟ್ಟಿಗೆಹಾರ: ಯುಗಾದಿ ಹಬ್ಬದ ದಿನದಂದೇ ಮನೆಗೆ ಬಂದ ನಾಗರಹಾವು ಮನೆಯಲ್ಲಿದ್ದ ಬೆಕ್ಕಿನ ಮರಿಯನ್ನ ನುಂಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ನಡೆದಿದೆ.
ತರುವೆ ಗ್ರಾಮದ ದೀಕ್ಷಿತ್ ಎಂಬುವರ ಮನೆಗೆ ಬಂದ ನಾಗರಹಾವು ನೇರವಾಗಿ ಮಂಚದ ಕೆಳ ಭಾಗಕ್ಕೆ ಸೇರಿದೆ. ಮನೆಯಲ್ಲಿದ್ದವರು ಹಬ್ಬದ ಸಂಭ್ರಮದಲ್ಲಿದ್ದ ಕಾರಣ ಯಾರು ಅಷ್ಟಾಗಿ ಗಮನಿಸಿಲ್ಲ. ಬೆಕ್ಕಿನ ಮರಿಯನ್ನು ನುಂಗಿದ ನಾಗರಹಾವು ಹೊರ ಬಂದು ಮುಂದಕ್ಕೆ ಸಂಚರಿಸಲಾಗದೆ ಪರದಾಡುತ್ತಿತ್ತು. ಹಾವನ್ನು ಕಂಡು ಮನೆಯವರು ಕೂಗಾಡುತ್ತಿದ್ದಂತೆ ಮರಳಿ ಮನೆಯ ಒಳಗೆ ಹೋಗಲು ಪ್ರಯತ್ನಿಸಿದೆ.
ಮನೆಯವರು ಕೂಡಲೇ ಬಾಗಿಲು ಹಾಕಿದ್ದಾರೆ. ಸ್ಥಳಕ್ಕೆ ಬಂದ ಉರಗತಜ್ಞ ಸ್ನೇಕ್ ಆರೀಫ್ ಬೆಕ್ಕಿನ ಮರಿ ನುಂಗಿದ್ದರಿಂದ ಸುಸ್ತಾಗಿ ಸಂಚರಿಸಲಾಗದೆ ಪರದಾಡುತ್ತಿದ್ದ ಹಾವನ್ನ ಸೆರೆಹಿಡಿದು ನುಂಗಿದ್ದ ಬೆಕ್ಕಿನ ಮರಿಯನ್ನು ಹಾವಿನ ಹೊಟ್ಟೆಯಿಂದ ಕಕ್ಕಿಸಿದ್ದಾರೆ.
ನಾಗರಹಾವು ಬೆಕ್ಕಿನ ಮರಿಯನ್ನ ಹೊರ ಹಾಕುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿ, ಮನೆಯ ಮುಂದೆ ಇದ್ದ ಸೌದೆ ಅಡಿ ಸೇರಿಕೊಳ್ಳಲು ಮುಂದಾಗಿತ್ತು. ಸ್ನೇಕ್ ಆರೀಫ್ ಹಾವನ್ನ ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವನ್ನು ಹಿಡಿದ ಬಳಿಕ ಬೆದರಿದ್ದ ಮನೆಯವರು ಹಾಗೂ ಅಕ್ಕ-ಪಕ್ಕದವರು ನಿಟ್ಟುಸಿರು ಬಿಟ್ಟಿದ್ದಾರೆ.
ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಕಾಡು ಪ್ರಾಣಿಗಳು ಆಹಾರ ಹರಿಸಿ ನಾಡಿಗೆ ಬರುತ್ತಿವೆ. ಈಗಾಗಲೇ ಮಲೆನಾಡಿನದ್ಯಂತ ಆನೆ, ಹುಲಿ, ಚಿರತೆ ಹಾಗೂ ಕಾಡುಕೋಣದ ಹಾವಳಿ ಮಿತಿಮೀರಿದೆ. ಬಿಸಿಲಿನ ತಾಪಕ್ಕೆ ಭೂಮಿಯ ಒಳಭಾಗದಲ್ಲೂ ಬಿಸಿ ಹೆಚ್ಚಾಗಿ ಅರಣ್ಯದಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಹಾಗೂ ಆಹಾರ ಸಿಗದ ಕಾರಣ ನಾಗರಹಾವು ಸೇರಿದಂತೆ ಕಾಳಿಂಗ ಸರ್ಪಗಳು ಗ್ರಾಮಗಳತ್ತ ಬರುತ್ತಿವೆ. ಶೀಘ್ರವೇ ಮಳೆಯಾಗದಿದ್ದರೆ ಮತ್ತಷ್ಟು ಕಾಡುಪ್ರಾಣಿಗಳ ಹಾವಳಿ ಹೆಚ್ಚಾದರೂ ಆಶ್ಚರ್ಯವಿಲ್ಲ.