Advertisement

ವಿಸ್ಮಯ: ಇದು ಸರ್ಪ ದ್ವೀಪ

06:00 AM Sep 27, 2018 | |

ಹಾವು ಅಂದ್ರೆ ಮರಿಗುಬ್ಬೀಗೆ ಭಾರೀ ದಿಗಿಲೇನೆ, ನೆನೆಸಿಕೊಂಡ್ರೆ ಮೈ ನಡುಗತ್ತೆ ಹಾಡೇ ಹಗಲೇನೇ… ಈ ಶಿಶುಗೀತೆಯನ್ನು ಕೇಳಿರುತ್ತೀರಾ. ಹಾವು ಅಂದ್ರೆ ಮರಿಗುಬ್ಬಿಗಷ್ಟೇ ಅಲ್ಲ, ಮನುಷ್ಯರಿಗೂ ದಿಗಿಲಾಗುತ್ತೆ. ಒಂದು ಹಾವನ್ನು ಕಂಡರೇ ನಾವು ಬೆದರುತ್ತೇವೆ. ಅಂಥದ್ದರಲ್ಲಿ, ಒಂದು ದ್ವೀಪದ ತುಂಬೆಲ್ಲಾ ಬರೀ ಹಾವುಗಳೇ ಇದ್ದರೆ? ಈ ಹಾವಿನ ದ್ವೀಪ ಬ್ರೆಝಿಲ್‌ನಲ್ಲಿದೆ.

Advertisement

ಬಹುಶಃ ಮಾನವನಿಗೆ ಕಾಲಿಡೋಕೆ ಸಾಧ್ಯವಾಗದೇ ಇರುವ ಕೆಲವೇ ಕೆಲವು ವಿಸ್ಮಯ ಪ್ರದೇಶಗಳಲ್ಲಿ ಇದೂ ಒಂದಿರಬೇಕು. ಇದರ ಹೆಸರು ಇಲ್ಹಾ ಡ ಕ್ವಿಮಾಡ ಗ್ರಾಂಡೇ. ಇದು ವಿಶ್ವಾದ್ಯಂತ ಹೆಸರುವಾಸಿಯಾಗಿರುವುದು ಹಾವಿನ ದ್ವೀಪವೆಂದೇ. ಬ್ರೆಜಿಲ್‌ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್‌ ದೂರದಲ್ಲಿರುವ ಈ ದ್ವೀಪ ಜನಸಂಪರ್ಕದಿಂದ ದೂರ ಉಳಿದಿದೆ. ಇದಕ್ಕೆ ಕಾರಣ ಈ ದ್ವೀಪ ಬರೀ ವಿಷಪೂರಿತ ಹಾವುಗಳಿಂದ ತುಂಬಿಕೊಂಡಿದೆ.

ಲಕ್ಷ ಲಕ್ಷ ಸರ್ಪಗಳು
110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ ಸುಮಾರು 4,30,000ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಇವೆಯೆಂದು ಗುರುತಿಸಲಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ಹಾವುಗಳ ಸಂಖ್ಯೆಯೇ ಅಧಿಕ. ಪ್ರತಿ ಚದರ ಮೀಟರ್‌ಗೆ ಕನಿಷ್ಠ ಒಂದರಂತೆ ಹಾವುಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ ಈ ದ್ವೀಪ ಹೊಕ್ಕವರು ಹಿಂದಿರುಗುವುದು ಕನಸಿನ ಮಾತೇ ಸರಿ.

ಹೆಚ್ಚಿನವು ವಿಷಪೂರಿತ ಹಾವುಗಳು
ಇಲ್ಹಾ ಡ ಕ್ವಿಮಾಡ ಗ್ರಾಂಡೇ ದ್ವೀಪವು ಮೊದಲು ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಹೊಂದಿತ್ತು. ನಂತರ ಸಮುದ್ರ ಮಟ್ಟ ಏರುಮುಖವಾದ ಹಿನ್ನೆಲೆಯಲ್ಲಿ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಕಡಿದುಕೊಂಡು, ಪ್ರತ್ಯೇಕ ದ್ವೀಪವಾದ ಮೇಲೆ, ಹೊಸಹೊಸ ಜಾತಿಯ ಸರ್ಪಗಳ ವಿಕಸನಕ್ಕೆ ಈ ದ್ವೀಪ ನಾಂದಿಯಾಯಿತು ಎನ್ನಲಾಗುತ್ತದೆ. ಈ ದ್ವೀಪದಲ್ಲಿರುವ ಹಾವುಗಳಲ್ಲಿ ಹೆಚ್ಚಿನವು ವಿಷಪೂರಿತ. ಇಲ್ಲಿಯವರೆಗೆ 2000- 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ.
 
ಮಾಂಸವನ್ನು ಕರಗಿಸಿಬಿಡುವ ಹಾವು
ಗೋಲ್ಡನ್‌ ಲ್ಯಾನ್ಸ್ ಹೆಡ್‌ ಎಂದು ಸಾಮಾನ್ಯವಾಗಿ ಗುರುತಿಸಲ್ಪಡುವ ಬತ್ರೋಸ್ಸ್ ಇಸ್ನಸುಲಾರಿಸ್‌ ಎಂಬ ಜಾತಿಯ ಹಾವಿನ ವಿಷ ಅತಿ ಘೋರ. ಈ ಹಾವಿನ ವಿಷವು ಮಾರಣಾಂತಿಕವಾಗಿದ್ದು, ದೇಹವನ್ನು ಹೊಕ್ಕಿಬಿಟ್ಟರೆ ಚರ್ಮ ಮತ್ತು ಮಾಂಸವನ್ನು ಕರಗಿಸಿಬಿಡುವಷ್ಟು ಶಕ್ತಿ ಹೊಂದಿದೆ. ಗರಿಷ್ಠ ನಾಲ್ಕು ಅಡಿ ಉದ್ದ ಇರುವ ಈ ಜಾತಿಯ ಹಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇವನ್ನು ವಿನಾಶದ ಅಂಚಿನಲ್ಲಿರುವ ಹಾವಿನ ಜಾತಿಯೆಂದು ಪರಿಗಣಿಸಿ ಕಾಪಾಡಲಾಗುತ್ತಿದೆ.

ಸಂಶೋಧಕರಿಗೆ ಮಾತ್ರ ಪ್ರವೇಶ
ಈ ದ್ವೀಪಕ್ಕೆ ಸಾಮಾನ್ಯರ ಪ್ರವೇಶವನ್ನು ನಿಷೇಧಿಸಲಾಗಿದ್ದರೂ, ಈ ದ್ವೀಪದಲ್ಲಿರುವ ಸ್ವಯಂಚಾಲಿತ ಲೈಟ್‌ ಹೌಸ್‌ಅನ್ನು ನೌಕಾಪಡೆಯು ನೋಡಿಕೊಳ್ಳುತ್ತದೆ. ಹಾಗಾಗಿ ನಿರ್ವಹಣಾ ಸಿಬ್ಬಂದಿಗೆ ಹಾಗೂ ಪರಿಸರದ ಅಧ್ಯಯನ ಮಾಡುವ ಸಂಶೋಧಕರಿಗೆ ಸರ್ಕಾರ ವಿಶೇಷ ಪರವಾನಗಿ ನೀಡಿದೆ. ಅವರಿಗೆ ಮಾತ್ರ ಈ ದ್ವೀಪದೊಳಗೆ ಹೋಗಲು ಅನುಮತಿ ಇದೆ. 

Advertisement

ವೆಂಕಿ
 

Advertisement

Udayavani is now on Telegram. Click here to join our channel and stay updated with the latest news.

Next