ಜೈಪುರ: ಸಾವಿನ ದವಡೆಯಿಂದ ಆಗಷ್ಟೇ ಹೊರಗೆ ಬಂದ ವ್ಯಕ್ತಿಯೊಬ್ಬನಿಗೆ ಮತ್ತೆ ಸಾವೇ ಎದುರಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.!
ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಮೆಹ್ರಾನ್‌ಗಢ ಗ್ರಾಮದ ನಿವಾಸಿ ಜಸಾಬ್ ಖಾನ್ (44) ಮೃತ ವ್ಯಕ್ತಿ.
ಜೂ.20 ರಂದು ಜಸಾಬ್ ಖಾನ್ ಅವರ ಕಾಲಿಗೆ ಹಾವು ಕಚ್ಚಿದೆ. ಹಾವು ಕಡಿತದಿಂದ ಅವರನ್ನು ಪೋಖ್ರಾನ್‌ನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ 4 ದಿನ ಚಿಕಿತ್ಸೆ ಪಡೆದ ಬಳಿಕ ಸಾವಿನಿಂದ ಅವರು ಪಾರಾಗಿದ್ದಾರೆ. ಚಿಕಿತ್ಸೆ ಪಡೆದು ಮನೆಗೆ ಬಂದ ಒಂದು ದಿನದ ಬಳಿಕ (ಜೂ.26 ರಂದು) ಅವರಿಗೆ ಮತ್ತೆ ಹಾವು ಕಚ್ಚಿದೆ. ಈ ಬಾರಿ ಅವರ ಮತ್ತೊಂದು ಕಾಲಿಗೆ ಹಾವು ಕಚ್ಚಿದೆ. ಮೊದಲ ಹಾವು ಕಡಿತದಿಂದ ಆಗಷ್ಟೇ ಗುಣಮುಖರಾಗಿ ಬಂದಿದ್ದ ಜಸಾಬ್ ಖಾನ್ ಈ ಬಾರಿಯ ಕಡಿತದಿಂದ ಮತ್ತಷ್ಟು ಗಂಭೀರವಾಗಿದ್ದರು. ಆದರೆ ಎರಡನೇ ಬಾರಿ ಹಾವಿನ ವಿಷ ಅವರ ದೇಹದೊಳಗೆ ಹೆಚ್ಚು ಹೊಕ್ಕಿದ ಪರಿಣಾಮ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: Neeraj Chopra ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ: ಡೈಮಂಡ್ ಲೀಗ್ ಗೆದ್ದ ಬಂಗಾರದ ಹುಡುಗ
ಎರಡೂ ಬಾರಿಯೂ ಖಾನ್ ಅವರಿಗೆ ‘ಬಂಡಿ’ ಎಂದು ಕರೆಯಲ್ಪಡುವ ಹಾವು ಕಚ್ಚಿದೆ ಎಂದು ಹೇಳಲಾಗುತ್ತದೆ, ಇದು ಸಾಮಾನ್ಯವಾಗಿ ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿ ಕಂಡುಬರುವ ವೈಪರ್‌ನ ಉಪ-ಜಾತಿಯ ಹಾವಾಗಿದೆ ಎಂದು ವರದಿ ತಿಳಿಸಿದೆ.
ಜಸಾಬ್ ಅವರು ತಾಯಿ, ಪತ್ನಿ, ನಾಲ್ವರು ಪುತ್ರಿಯರು ಹಾಗೂ 5 ವರ್ಷದ ಪುತ್ರನನ್ನು ಅಗಲಿದ್ದಾರೆ. ಜಸಾಬ್ ಸಾವಿಗೆ ಕಾರಣವಾದ ಹಾವನ್ನು ಕುಟುಂಬಸ್ಥರು ಕೊಂದು ಹಾಕಿದ್ದಾರೆ.
ಈ ದುರಂತ ಮತ್ತು ವಿಲಕ್ಷಣ ಘಟನೆಯನ್ನು ಇದೀಗ ಭನಿಯಾನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.