Advertisement

ವಿಷಪೂರಿತ ಹಾವು ಕಡಿದ ಬಾಲಕರ ರಕ್ಷಣೆ : ಸೂಕ್ತ ಚಿಕಿತ್ಸೆ ನೀಡಿದತಜ್ಞರ ಕಾರ್ಯಕ್ಕೆ ಶ್ಲಾಘನೆ

11:44 AM Oct 08, 2020 | sudhir |

ಭಟ್ಕಳ: ವಿಷಪೂರಿತ ಹಾವು ಕಚ್ಚಿ ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಕ್ಕಳನ್ನು ಇಲ್ಲಿನ ಮಕ್ಕಳ ತಜ್ಞ
ಡಾ| ಸುರಕ್ಷಿತ್‌ ಶೆಟ್ಟಿ ಹಾಗೂ ಸರ್ಜನ್‌ ಡಾ| ಅರುಣಕುಮಾರ ಸೂಕ್ತ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ ಘಟನೆ ವರದಿಯಾಗಿದೆ.

Advertisement

ಕೋವಿಡ್‌-19 ಸಂದರ್ಭದಲ್ಲಿಯೂ ವೈದ್ಯರುಗಳ ಸಕಾಲಿಕ ಚಿಕಿತ್ಸೆ ಶ್ಲಾಘನೀಯವಾಗಿದೆ. ಮಕ್ಕಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಸಕಾಲಿಕ ಚಿಕಿತ್ಸೆ ನೀಡಿರುವುದನ್ನು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್‌ ಶ್ಲಾಘಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಾರುಕೇರಿಯ ಎಂಟು ವರ್ಷದ ಭರತ್‌ ನಾಯ್ಕನಿಗೆ ಮನೆಯೊಳಗೆ ಡಬ್ಬದ್ದಲ್ಲಿಟ್ಟಿದ್ದ ತಿಂಡಿ ತೆಗೆಯುವ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿತ್ತು. ಕೆಲವೇ ನಿಮಿಷದಲ್ಲಿ ಕಾಲಿನಲ್ಲಿ ರಕ್ತ ಸೋರುತ್ತಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದ ಈತನನ್ನು ಮಕ್ಕಳ ತಜ್ಞ ಡಾ| ಸುರಕ್ಷಿತ ಶೆಟ್ಟಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದ್ದರು.

ಭರತನಿಗೆ ಯಾವ ಹಾವು ಕಚ್ಚಿದೆ ಎಂದು ತಿಳಿಯದಿದ್ದರೂ ವಿಷ ಬಾಲಕನ ದೇಹಕ್ಕೆ ಏರದಂತೆ ತೀವ್ರ ನಿಗಾ ವಹಿಸಿದ್ದರು. ರಾತ್ರಿ ಉಸಿರಾಟದಲ್ಲಿ ಏರುಪೇರಾಗಿದ್ದರಿಂದ ವೆಂಟಿಲೇಟರ್‌ ವ್ಯವಸ್ಥೆ ಕಲ್ಪಿಸಿ, ಆಸ್ಪತ್ರೆಯ ಇನ್ನಿತರ ವೈದ್ಯರ ಸಹಕಾರದಿಂದ ಪ್ರಾಣಾಪಾಯದಿಂದ ಪಾರು ಮಾಡಿದ್ದರು. ಭರತನಿಗೆ ವಿಷಪೂರಿತ ನಾಗರ ಹಾವು ಕಚ್ಚಿರುವುದನ್ನು ಖಚಿತಪಡಿಸಿಕೊಂಡ ವೈದ್ಯರು ಒಂದು ವಾರ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದಲ್ಲದೇ ಹಾವು ಕಚ್ಚಿದ ಆತನ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ ಕೀವು ಸಹಿತ ಕಪ್ಪಾದ ಚರ್ಮ ತೆಗೆದಿದ್ದು, ಬಾಲಕ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ.

ಇದನ್ನೂ ಓದಿ :ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಅದರಂತೆ ವೆಂಕಟಾಪುರದ ಶ್ರೇಯಾ ಎನ್ನುವ 7 ವರ್ಷದ ಬಾಲಕಿಯ ಕೈಗೆ ನಾಗರಹಾವು ಕಚ್ಚಿದ್ದು, ಪಾಲಕರು ಜೀವಂತ ಹಾವು ಸಮೇತ ಆಸ್ಪತ್ರೆಗೆ ಬಂದಿದ್ದರಿಂದ ವೈದ್ಯರು ಆಕೆಗೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿ ಆಯಿತು. ಆಕೆಯೂ ಕೂಡ ಆಸ್ಪತ್ರೆಯಲ್ಲೇ ಇದ್ದು ಚೇತರಿಸಿಕೊಳ್ಳುತ್ತಿದ್ದು ಅಪಾಯದಿಂದ ಪಾರಾಗಿದ್ದಾಳೆ.

Advertisement

ಹಾವು ಕಡಿತಕ್ಕೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಇಬ್ಬರೂ ಮಕ್ಕಳನ್ನು ಸೂಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿರುವ ಸರಕಾರಿ ಆಸ್ಪತ್ರೆ ಮಕ್ಕಳ ತಜ್ಞ ಡಾ| ಸುರಕ್ಷಿತ ಶೆಟ್ಟಿ, ಸರ್ಜನ್‌ ಡಾ| ಅರುಣಕುಮಾರ ಹಾಗೂ ಆಡಳಿತ ವೈದ್ಯಾಧಿಕಾರಿ, ಅರವಳಿಕೆ ತಜ್ಞೆ ಡಾ| ಸವಿತಾ ಕಾಮತ್‌ ಮತ್ತು ಸಿಬ್ಬಂದಿ ಕಾರ್ಯಕ್ಕೆ ನಾಗರಿಕರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next