Advertisement
ಹಾವು ಕಡಿತವು ಜಾಗತಿಕವಾಗಿ ಮರಣಕ್ಕೆ ಒಂದು ಪ್ರಧಾನ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು “ಉಷ್ಣ ವಲಯದ ಒಂದು ನಿರ್ಲಕ್ಷಿತ ಕಾಯಿಲೆ’ ಎಂಬುದಾಗಿ ಬಣ್ಣಿಸಿದೆ. ಉಷ್ಣ ವಲಯದ ಪ್ರದೇಶಗಳಲ್ಲಿ ಮನುಷ್ಯರಿಗೆ ಹಾವು ಕಡಿತದ ಪ್ರಮಾಣ ಹೆಚ್ಚಿರುವುದೇ ಇದಕ್ಕೆ ಕಾರಣ. ಒಂದು ವರ್ಷದಲ್ಲಿ ಉಂಟಾಗುವ ಹಾವು ಕಡಿತ ಪ್ರಕರಣಗಳು ಎಷ್ಟು ಎಂಬ ನಿಖರ ಅಂಕಿಅಂಶಗಳು ಲಭ್ಯವಿಲ್ಲ; ಆದರೆ ಸರಿಸುಮಾರು 54 ಲಕ್ಷ ಮಂದಿ ಹಾವು ಕಡಿತಕ್ಕೆ ಒಳಗಾಗುತ್ತಾರೆ, ಇವುಗಳಲ್ಲಿ 27 ಲಕ್ಷದಷ್ಟು ಮಂದಿ ವಿಷಭರಿತ ಹಾವುಗಳ ಕಡಿತ ಅನುಭವಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಹಾವುಗಳ ಕಡಿತದಿಂದ ವಾರ್ಷಿಕವಾಗಿ ಸುಮಾರು 81 ಸಾವಿರದಿಂದ 1.38 ಲಕ್ಷ ಮಂದಿಯವರೆಗೆ ಪ್ರಾಣ ಕಳೆದುಕೊಳ್ಳುತ್ತಾರೆ, ಸುಮಾರು 2.30 ಲಕ್ಷ ಮಂದಿ ಅಂಗಛೇದನ ಮತ್ತು ಇತರ ಶಾಶ್ವತ ವೈಕಲ್ಯಕ್ಕೆ ಒಳಗಾಗುತ್ತಾರೆ. ಭಾರತದಲ್ಲಿ 2000 ಇಸವಿಯಿಂದ 2019ರ ವರೆಗೆ ಪ್ರತೀ ಹಾವು ಕಡಿತ ನಾವು ತಿಳಿದುಕೊಳ್ಳಬೇಕಾದ ವಿಚಾರಗಳು ವರ್ಷ 58 ಸಾವಿರ ಸರಾಸರಿಯಲ್ಲಿ ಸುಮಾರು 12 ಲಕ್ಷ ಮಂದಿ ಹಾವು ಕಡಿತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
Related Articles
Advertisement
ರಸೆಲ್ಸ್ ವೈಪರ್ (ಡಬೋಯಿಯಾ ರಸೆಲಿ) (ಪ್ರಭೇದ: ವೈಪರಿಡೇ)
ಸಾ-ಸ್ಕೇಲ್ಡ್ ವೈಪರ್ (ಎಚಿಸ್ ಕಾರಿನೇಟಸ್) (ಪ್ರಭೇದ: ವೈಪರಿಡೇ)
ಇಂಡಿಯನ್ ಕೋಬ್ರಾ (ನಜಾ ನಜಾ) (ಪ್ರಭೇದ: ಎಲಾಪಿಡೇ) ಇವುಗಳನ್ನು “ನಾಲ್ಕು ಪ್ರಧಾನ ಉರಗ’ ವರ್ಗಗಳು ಎಂದು ಕರೆಯಲಾಗುತ್ತಿದ್ದು, ದೇಶದಲ್ಲಿ ಹಾವು ಕಡಿತದಿಂದ ಉಂಟಾಗುವ ಬಹುತೇಕ ಮೃತ್ಯುಗಳಿಗೆ ಇವುಗಳ ಕಡಿತವೇ ಪ್ರಧಾನ ಕಾರಣವಾಗಿರುತ್ತದೆ. ಈ ನಾಲ್ಕು ಪ್ರಧಾನ ವರ್ಗಗಳಲ್ಲದೆ ಕಾಳಿಂಗ ಸರ್ಪ (ಕಿಂಗ್ ಕೋಬ್ರಾ-ಒಫಿಯೊಫೇಗಸ್ ಹನ್ನಾ) ಮತ್ತು ಮಲಬಾರ್ ಗುಳಿಮಂಡಲದ ಹಾವು (ಮಲಬಾರ್ ಪಿಟ್ ವೈಪರ್- ಟ್ರಿಮೆಸೆರಸ್ ಮಲಬಾರಿಕಸ್) ಕೂಡ ವೈದ್ಯಕೀಯವಾಗಿ ಪ್ರಮುಖ ಎಂದು ಪರಿಗಣಿಸಲಾಗುತ್ತದೆ.
ಹಾವಿನ ಜೊಲ್ಲೇ ಪರಿವರ್ತನೆಯಾಗಿ ವಿಷವಾಗುತ್ತದೆ. ಹಾವು ಯಾವುದೇ ಬಲಿಯನ್ನು ತನ್ನ ಬೇಟೆ ಎಂದು ಭಾವಿಸಿ ಕಚ್ಚಿ ವಿಷವನ್ನು ಚುಚ್ಚುತ್ತದೆ, ಕೆಲವು ಪ್ರಕರಣಗಳಲ್ಲಿ ಕಡಿತವನ್ನು ಅದು ಆತ್ಮರಕ್ಷಣೆಯ ತಂತ್ರವಾಗಿ ಬಳಸಿಕೊಳ್ಳುತ್ತದೆ. ವಿಷಕಾರಿ ಎಂದು ಖಚಿತವಾಗಿರುವ ಹಾವಿನ ಕಡಿತಕ್ಕೆ ಎಎಸ್‌ವಿ ಮಾತ್ರವೇ ನಿರ್ದಿಷ್ಟ ಚಿಕಿತ್ಸೆಯಾಗಿದೆ.
ಹಾವು ಕಡಿತವನ್ನು ತಡೆಯುವುದು ಹೇಗೆ?
ಹಾವುಗಳ ಸ್ವಭಾವ, ವರ್ತನೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಬಹುತೇಕ ವಿಷಕಾರಿ ಹಾವುಗಳ ಕಡಿತಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.
ಹಾವುಗಳ ಬಗ್ಗೆ ತಿಳಿದುಕೊಳ್ಳಿ: ಹಾವುಗಳು ನಾಚಿಕೆ ಸ್ವಭಾವದವು. ಅವು ಇತರ ಪ್ರಾಣಿಗಳು ಮತ್ತು ತಮ್ಮನ್ನು ಬೇಟೆಯಾಡಬಲ್ಲ ಇತರ ಪ್ರಾಣಿಗಳಿಂದ ಅಡಗಿಕೊಳ್ಳಲು ಬಯಸುತ್ತವೆ. ಅವುಗಳು ಬಿಲ, ಕಲ್ಲುಸಂಧಿ, ಮರದ ದಿಮ್ಮಿ, ಕತ್ತಲಿನ ಪ್ರದೇಶದಂತಹ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ. ತರಗೆಲೆಗಳಿಂದ ಕೂಡಿದ ಸ್ಥಳದಲ್ಲಿ ನಡೆದಾಡುವಾಗ ಎಚ್ಚರಿಕೆಯಿಂದ ಇರಬೇಕು.
ರಾತ್ರಿ ಬೆಳಕು ಉಪಯೋಗಿಸಿ: ಕೆಲವು ಹಾವುಗಳು ಮುಸ್ಸಂಜೆ ಮತ್ತು ರಾತ್ರಿ ಸಕ್ರಿಯವಾಗಿರುತ್ತವೆ. ರಾತ್ರಿ ನಡೆದಾಡುವಾಗ ಹಾವು ತುಳಿದು ಕಡಿತಕ್ಕೊಳಗಾಗುವುದನ್ನು ತಡೆಯಲು ಟಾರ್ಚ್ ಲೈಟ್ ಉಪಯೋಗಿಸಿ.
ರಕ್ಷಣಾತ್ಮಕ ಉಡುಗೆ –ತೊಡುಗೆ ಧರಿಸಿ: ಹಾವುಗಳ ಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಬೂಟುಗಳು ಮತ್ತು ರಕ್ಷಣಾತ್ಮಕ ಉಡುಗೆ ತೊಡುಗೆ ಧರಿಸಿ.
ನೆಲದಲ್ಲಿ/ ಬಯಲಿನಲ್ಲಿ ಮಲಗಬೇಡಿ: ಅನಿವಾರ್ಯವಲ್ಲದಿದ್ದಲ್ಲಿ ನೆಲದಲ್ಲಿ/ ಬಯಲಿನಲ್ಲಿ ಮಲಗಿ ನಿದ್ದೆ ಮಾಡಬೇಡಿ. ಅದು ಅನಿವಾರ್ಯವಾದರೆ ಪೂರ್ಣ ಮುಚ್ಚುವ ಶಿಬಿರ ಟೆಂಟ್, ಸೊಳ್ಳೆ ಪರದೆ ಇತ್ಯಾದಿ ಉಪಯೋಗಿಸಿ.
ಮನೆಯನ್ನು ಮೂಷಿಕ ಮುಕ್ತಗೊಳಿಸಿ: ನಿಮ್ಮ ಮನೆ ಮತ್ತು ಪರಿಸರವನ್ನು ಇಲಿ ಹೆಗ್ಗಣ ಮತ್ತಿತರ ಮೂಷಿಕ ಮುಕ್ತಗೊಳಿಸಿ. ಇವುಗಳು ಹಾವುಗಳ ಆಹಾರವಾಗಿದ್ದು, ಇವುಗಳಿದ್ದರೆ ಅವುಗಳನ್ನು ಹುಡುಕಿ ಹಾವುಗಳು ಬರುವ ಸಾಧ್ಯತೆಯಿರುತ್ತದೆ.
ಮನೆ ಮತ್ತು ಸುತ್ತಮುತ್ತಲಿನ ಸ್ಥಳವನ್ನು ಶುಚಿಯಾಗಿ ಇರಿಸಿ: ನಡೆದಾಡುವ ದಾರಿಯಲ್ಲಿ ಕಸ, ತರಗೆಲೆಗಳು ಇತ್ಯಾದಿ ಇಲ್ಲದೆ ಶುಚಿಯಾಗಿ ಇರಿಸಿ. ಬಿರುಕು, ಬಿಲಗಳನ್ನು ಮುಚ್ಚಿ. ಇಲ್ಲವಾದರೆ ಇವುಗಳಡಿ ಹಾವುಗಳು ಸೇರಿಕೊಳ್ಳುತ್ತವೆ.
ಹಾವುಗಳನ್ನು ಗೌರವಿಸಿ: ಹಾವನ್ನು ಕಂಡರೆ ಅದನ್ನು ಹಿಡಿಯಲು, ಕೊಲ್ಲಲು ಅಥವಾ ಪೂಜಿಸಲು ಹೋಗಬೇಡಿ. ತಮ್ಮನ್ನು ಕೆಣಕದ ವಿನಾ ಅವು ಕೆರಳುವುದಿಲ್ಲ, ಸೌಮ್ಯವಾಗಿರುತ್ತವೆ. ಹಾವು ಕಂಡರೆ ಅಥವಾ ಎದುರಾದರೆ ದೂರದಿಂದಲೇ ಗಮನಿಸಿ. ಮನೆಯೊಳಗೆ ಹಾವು ಬಂದಿದ್ದರೆ ಸ್ಥಳೀಯವಾಗಿ ಇರುವ ಹಾವು ಹಿಡಿಯುವವರನ್ನು ಸಂಪರ್ಕಿಸಿ.
ಶಾಲಾ ವಿದ್ಯಾರ್ಥಿಗಳು, ಮಕ್ಕಳು, ಕೃಷಿಕರು ಮತ್ತಿತರರಲ್ಲಿ ಹಾವುಗಳು ಮತ್ತು ಹಾವು ಕಡಿತದ ಬಗ್ಗೆ ತಿಳಿವಳಿಕೆ ಮೂಡಿಸಿ.
ಹಾವು ಕಡಿತವಾದಾಗ…
ಹೀಗೆ ಮಾಡಿ:
ಶೇ. 70ರಷ್ಟು ಹಾವು ಕಡಿತಗಳು ವಿಷರಹಿತ ಹಾವು ಗಳಿಂದ ಉಂಟಾಗಿರುತ್ತವೆ ಎಂದು ಕಡಿತಕ್ಕೀಡಾದ ವ್ಯಕ್ತಿಗೆ ಧೈರ್ಯ ತುಂಬಿ. ವ್ಯಕ್ತಿ ಶಾಂತಚಿತ್ತನಾಗಿರಲು ನೆರವಾಗಿ.
ಹಾವಿನಿಂದ ವ್ಯಕ್ತಿಯನ್ನು ದೂರಕ್ಕೆ ಕರೆದೊಯ್ಯಿರಿ/ ಸರಿಸಿರಿ. ಆಸ್ಪತ್ರೆಗೆ ದಾಖಲಾಗುವವರೆಗೆ ರೋಗಿಗೆ ಬಾಯಿಯ ಮೂಲಕ ಯಾವುದೇ ಆಹಾರ, ಪಾನೀಯ ಕೊಡಬೇಡಿ. ರೋಗಿ ಒಂದು ಪಾರ್ಶ್ವಕ್ಕೆ ಮಲಗಿಕೊಳ್ಳುವಂತೆ ಮಾಡಿ ಮತ್ತು ಕಡಿತವಾದ ಭಾಗವನ್ನು ಸಾಧ್ಯವಾದಷ್ಟು ನಿಶ್ಚಲಗೊಳಿಸಿ.
ವಿಷ ಪ್ರತಿರೋಧಕ ಔಷಧ ಲಭ್ಯವಿರುವ ಆದಷ್ಟು ಹತ್ತಿರದ ಆರೋಗ್ಯ ಸೇವಾ ಕೇಂದ್ರಕ್ಕೆ ರೋಗಿಯನ್ನು ಆದಷ್ಟು ಬೇಗನೆ ಕರೆದೊಯ್ಯಿರಿ. ಕಡಿತವಾದ ಸ್ಥಳವನ್ನು ಹಾಗೆಯೇ ಬಿಡಿ.
ಊತದ ಒತ್ತಡ ಹೆಚ್ಚುವಂತಹ ಬಿಗಿಯಾದ ಬೂಟುಗಳು, ಉಂಗುರು, ಕೈಗಡಿಯಾರ, ಒಡವೆ ಇತ್ಯಾದಿಗಳನ್ನು ತೆಗೆಯಿರಿ. ಹಾವು ಕಡಿತವಾದಾಗ…
ಹೀಗೆ ಮಾಡಬೇಡಿ
ಹಾವು ಕಡಿತದ ಬಗ್ಗೆ ಭಯ ಹುಟ್ಟಿಸುವಂತಹ ಸಂಗತಿ, ವಿಚಾರಗಳನ್ನು ಹೇಳುವುದು.
ಹಾವನ್ನು ಕೊಲ್ಲಲು ಅಥವಾ ಹಿಡಿಯಲು ಪ್ರಯತ್ನಿಸುತ್ತ ಸಮಯ ವ್ಯರ್ಥ ಮಾಡುವುದು.
ನಾಟಿ ಔಷಧದ ಭಾಗವಾಗಿ ಕುಡಿಯಲು, ತಿನ್ನಲು ಕೊಡುವುದು.
ಆಸ್ಪತ್ರೆಗೆ ರೋಗಿ ತಾನೇ ಓಡುವುದು ಅಥವಾ ವಾಹನ ಚಲಾಯಿಸುವುದು.
ನಾಟಿವೈದ್ಯರ ಬಳಿಗೆ ಕರೆದೊಯ್ಯುವುದು. ಹಾವು ಕಡಿತಕ್ಕೆ ನಾಟಿ ವೈದ್ಯ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಹಾವು ಕಡಿತದಿಂದಾದ ಗಾಯವನ್ನು ತೊಳೆಯುವುದು, ಕತ್ತರಿಸುವುದು, ಬಾಯಿಯಿಂದ ಅಥವಾ ಇತರ ವಿಧಾನದಿಂದ ಹೀರುವುದರಿಂದ ಸೋಂಕು ಉಂಟಾಗಬಹುದು. ದೇಹವು ವಿಷವನ್ನು ಹೀರಿಕೊಳ್ಳಬಹುದು ಅಥವಾ ಅಧಿಕ ರಕ್ತಸ್ರಾವ ಉಂಟಾಗಬಹುದು.
ರಕ್ತಸ್ರಾವವನ್ನು ನಿಲ್ಲಿಸಲು ಬಿಗಿಯಾದ ಕಟ್ಟು ಹಾಕುವುದು, ಹಗ್ಗ, ಬೆಲ್ಟ್, ದಾರ ಅಥವಾ ಬಟ್ಟೆಯಿಂದ ಕಟ್ಟುವುದು.
ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆ
ವಿಷವುಳ್ಳ ಹಾವಿನ ಕಡಿತಕ್ಕೆ ವಿಷ ನಿರೋಧಕ ಔಷಧ (ಆ್ಯಂಟಿ-ಸ್ನೇಕ್ ವೆನಮ್-ಎಎಸ್‌ವಿ) ಏಕೈಕ ಚಿಕಿತ್ಸೆಯಾಗಿರುತ್ತದೆ. ಹಾವು ಕಡಿತ ಖಚಿತವಾದ ಬಳಿಕ ಸಾಧ್ಯವಾದಷ್ಟು ಬೇಗನೆ ಎಎಸ್‌ವಿಯನ್ನು ಒದಗಿಸಬೇಕು. ಕಚ್ಚಿದ ಹಾವನ್ನು ಗುರುತಿಸುವುದು ಕಷ್ಟಸಾಧ್ಯವಾಗಿರುತ್ತದೆ. ರಕ್ತದಲ್ಲಿ ಹಾವಿನ ವಿಷಕ್ಕೆ ಪ್ರತಿರೋಧಕಗಳನ್ನು ಗುರುತಿಸುವುದಕ್ಕೆ ಸಾಕಷ್ಟು ಕಾಲ ಹಿಡಿಯುತ್ತದೆ. ಹೀಗಾಗಿ ಸಮಸ್ಯೆ ಗಂಭೀರವಾಗುವುದನ್ನು ತಡೆಯಲು ಪಾಲಿವೇಲೆಂಟ್ ಹಾವಿನ ವಿಷ ನಿರೋಧಕವನ್ನು ನೀಡಲಾಗುತ್ತದೆ. ಎಎಸ್‌ವಿ ನೀಡುವುದಕ್ಕೆ ಮೊದಲೇ ವಿಷದಿಂದ ಉಂಟಾಗುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಎಎಸ್‌ವಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ನೀಡಬೇಕು. ಪಾಲಿವೇಲೆಂಟ್ ಹಾವಿನ ವಿಷ ನಿರೋಧಕ ವಿಶಾಲ ವ್ಯಾಪ್ತಿಯದ್ದಾಗಿದ್ದು, ಬಹುತೇಕ ಹಾವುಗಳ ವಿಷವನ್ನು ನಿಷ್ಕ್ರಿಯಗೊಳಿಸಬಲ್ಲುದು.
-ಮುಂದಿನ ವಾರಕ್ಕೆ
-ಡಾ| ಶಂಕರ್ ಎಂ. ಬಕ್ಕಣ್ಣವರ್, ಅಸೋಸಿಯೇಟ್ ಪ್ರೊಫೆಸರ್, ಫೊರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
-ನಾಗೇಂದ್ರ ಕೆ., ರಿಸರ್ಚ್ ಸ್ಕಾಲರ್, ಫೊರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಜನರಲ್ ಮೆಡಿಸಿನ್ ಮತ್ತು ಎಮೆರ್ಜೆನ್ಸಿ ಮೆಡಿಸಿನ್ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)