Advertisement

ಹಾವು ಸಾಹಸಿಗರಿಗೆ ಬೇಕಿದೆ ಸಹಕಾರ

09:42 AM Jun 15, 2019 | Suhan S |

ಬಾಗಲಕೋಟೆ: ನಿತ್ಯ ಜೀವದ ಹಂಗು ತೊರೆದು ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಯುವಕರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯ ಸಹಕಾರ ಬೇಕಿದೆ.

Advertisement

ಹೌದು, ನಗರದ ಐದು ಜನ ಸಮಾನಮನಸ್ಕ ಯುವಕರು, ತಮ್ಮ ದೈನಂದಿನ ಕೆಲಸದ ಜತೆಗೆ ಹಾವು ಹಿಡಿಲು ಸಾಹಸ ಪಡುತ್ತಾರೆ. ನಿತ್ಯ ಹಾವು ಹಿಡಿದು ಕಾಡಿಗೆ ಬಿಡುವ ಇವರ ಕಾರ್ಯಕ್ಕೆ ಹಲವಾರು ಗಣ್ಯರು, ನಾಗರಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಲೇ ಇದೆ. ಇವರು ಎಲ್ಲೆ ಹಾವೂ ಹಿಡಿದರೂ, ಒಂದು ಪೈಸೆ ಕೂಡ ಹಣ ಪಡೆಯಲ್ಲ. ಹೀಗಾಗಿ ಈ ಹಾವು ಹಿಡಿಯುವ ಯುವಕರ ಕಂಡರೆ ಜನರಿಗೆ ಮತ್ತಷ್ಟು ಗೌರವ. ಎಷ್ಟೋ ಜನರು, ಇವರ ಓಡಾಟಕ್ಕೆ ಸ್ವಂತ ವಾಹನ ಇಲ್ಲವೇ ಆರ್ಥಿಕ ನೆರವು ನೀಡಲು ಮುಂದಾರೂ ಇವರು ಪಡೆದಿಲ್ಲ. ನಮಗೆ ಜನರಿಂದ ಹಣ-ನೆರವು ಬೇಡ. ಅರಣ್ಯ ಇಲಾಖೆ, ನಾವು ನಡೆಸುವ ಸಾರ್ವಜನಿಕ ಕಾರ್ಯಕ್ಕಾಗಿ ಸಹಕಾರ ಕೊಟ್ಟರೆ ಸಾಕು ಎಂಬುದು ಇವರ ಬೇಡಿಕೆ.

ಏನಿದು ಬಿಬಿಎಂಪಿ ಮಾದರಿ: ಬೆಂಗಳೂರು ಮಹಾನಗರದಲ್ಲಿ ನಿತ್ಯ ಕಾಣಿಸುವ ಹಾವುಗಳನ್ನು ಹಿಡಿದು ಕಾಡಿಗೆ ಬಿಡಲೆಂದೇ, ಬಿಬಿಎಂಪಿ ಹಾವು ಹಿಡಿಯುವ ನುರಿತ ವ್ಯಕ್ತಿಗಳನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಂಡಿದೆ. ಇದು ಕೇರಳ ರಾಜ್ಯದಲ್ಲಿ ಕಡ್ಡಾಯವೂ ಇದೆ. ಹಾವು ಹಿಡಿಯುವವರಿಗೆ ಒಂದು ವಾಹನ ಕೊಡುವ ಜತೆಗೆ ಗುರುತಿನ ಚೀಟಿ ಕೊಟ್ಟಿದೆ. ಅಪಾಯಕಾರಿ ಸ್ಥಳ ಅಥವಾ ವಿಷಕಾರಿ ಹಾವು ಹಿಡಿಯಲು ಸೂಕ್ತ ತರಬೇತಿ ಕೊಡಿಸಿದೆ. ಅಲ್ಲದೇ ವೈದ್ಯಕೀಯ ಸಲಹೆ- ಮಾರ್ಗದರ್ಶಗಳನ್ನೂ ಬಿಬಿಎಂಪಿ ಕೊಟ್ಟಿದೆ. ಅದೇ ಮಾದರಿಯಲ್ಲಿ ಅರಣ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ತಮ್ಮ ಇಲಾಖೆಯ ಕಾರ್ಯ ಮಾಡುವ ಹಾವು ಹಿಡಿಯುವ ಸಾಹಸಿಗರಿಗೆ ಸಹಕಾರ ಕೊಡಬೇಕು ಎಂಬುದು ಇಲ್ಲಿನ ಸ್ನೇಕ್‌ ರೆಸ್‌ಕ್ಯೂ ತಂಡದ ಮನವಿ.

ಯಾವ ಸಹಕಾರ: ಹಿಡಿದ ಹಾವನ್ನು ಜೋಪಾನವಾಗಿ ತಂದು ಕಾಡಿಗೆ ಬಿಡಲು ಒಂದು ಬ್ಯಾಗ್‌, ಹಾವು ಹಿಡಿಯಲು ಹುಕ್‌ ಮಾದರಿಯ ಕೋಲು, ರಾತ್ರಿ ವೇಳೆಯ ಕಾರ್ಯಾಚರಣೆಗೆ ಟಾರ್ಚ್‌, ರೋಪ್‌ವೇ ಮಾದರಿ ಬೆಲ್r, ರಾತ್ರಿ ಹೊತ್ತು ಹಿಡಿದ ಹಾವನ್ನು ಬೆಳಗ್ಗೆ ಕಾಡಿಗೆ ಬಿಡುವವರೆಗೂ ಇಡಲು ಒಂದು ಸುಸಜ್ಜಿತ ಬಾಕ್ಸ, ಎಲ್ಲೇ ಹಾವು ಕಂಡರೂ ಹೋಗಿ ಹಿಡಿಯಲು ಅರಣ್ಯ ಇಲಾಖೆ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಒಂದು ವಾಹನ, ವಿಷಕಾರಿ ಹಾವು ಹಿಡಿಯಲೆಂದೇ ಅರಣ್ಯ ಇಲಾಖೆ ನುರಿತ ಉರಗತಜ್ಞರಿಂದ ತರಬೇತಿ ಕೊಡುತ್ತಿದ್ದು ಆ ತರಬೇತಿ ಬಾಗಲಕೋಟೆಯ ಯುವಕರಿಗೂ ಕೊಡಿಸುವುದು, ಗುರುತಿನ ಚೀಟಿ, ಬಿಬಿಎಂಪಿ ಮಾದರಿ ಹಾವು ಹಿಡಿಯುವವರಿಗೆ ಸೂಕ್ತ ಗೌರವಧನ (ಬಿಬಿಎಂಪಿಯಲ್ಲಿ ಒಬ್ಬರಿಗೆ 13,500 ರೂ. ಗೌರವಧನ ಕೊಡುತ್ತಿದೆ), ಹಾವು ಹಿಡಿದ ದಾಖಲೆ ಅರಣ್ಯ ಇಲಾಖೆಗೆ ಒಪ್ಪಿಸಲು ಒಂದು ಕ್ಯಾಮೆರಾ. ಹೀಗೆ ಸಾಮಾನ್ಯ-ಕನಿಷ್ಠ ಬೇಡಿಕೆ ಪಟ್ಟಿಯನ್ನು ನಗರದ ಸ್ನೇಕ್‌ ರೇಸ್‌ಕ್ಯೂ ತಂಡದ ಡ್ಯಾನಿಯಲ್ ನ್ಯೂಟನ್‌, ಅರಣ್ಯ ಇಲಾಖೆಗೆ ನೀಡಿದ್ದಾರೆ.

ವೈಯಕ್ತಿಕ ಬದುಕು ಉಳಿದಿಲ್ಲ: ನಗರದ ಸ್ನೇಕ್‌ ರೇಸ್‌ಕ್ಯೂ ಎಂದೇ ಕರೆಸಿಕೊಳ್ಳುವ (ಉರಗ ತಜ್ಞ ಅಲ್ಲ) ಡ್ಯಾನಿಯಲ್ ನ್ಯೂಟನ್‌ ಕಳೆದ 15 ವರ್ಷಗಳಿಂದ ಬಾಗಲಕೋಟೆ ನಗರ, ತಾಲೂಕಿನ ಯಾವುದೇ ಹಳ್ಳಿಯಲ್ಲಿ ಹಾವು ಕಂಡರೂ ಹಿಡಿದು, ಕಾಡಿಗೆ ಬಿಡುವ ಕಾಯಕ ಮಾಡುತ್ತಿದ್ದಾರೆ. ಇವರ ಇನ್ನೊಂದು ವಿಶೇಷ ಅಂದರೆ, ಒಮ್ಮೆಯೂ ಇವರು ಬೈಕ್‌ ಅಥವಾ ನಾಲ್ಕು ಚಕ್ರದ ವಾಹನ ಬಳಸಿಲ್ಲ. ನಿತ್ಯವೂ ಸೈಕಲ್ ಮೇಲೆಯೇ ತಿರುಗಾಟ ಇವರ ಪದ್ಧತಿ. ಹೀಗಾಗಿ ಹಿಡಿಯಲು ಕರೆ ಮಾಡುವವರೇ ಇವರನ್ನು ವಾಹನದಲ್ಲಿ ಬಂದು ಕರೆದುಕೊಂಡು ಹೋಗಬೇಕು. ಈ ವರೆಗೆ ಒಟ್ಟು 2,169 ಹಾವು ಹಿಡಿದ ಅನುಭವ ಹೊಂದಿರವ ಡ್ಯಾನಿಗೆ ವೈಯಕ್ತಿಕ ಬದುಕು ಉಳಿದಿಲ್ಲ. ಒಂದು ಕಡೆ ಹಾವು ಹಿಡಿದು ಸಾಗಿಸುವಷ್ಟರಲ್ಲಿ, ಮತ್ತೂಂದು ಕಡೆಯಿಂದ ಕರೆ ಬರುತ್ತದೆ. ಹೀಗಾಗಿ ನಿತ್ಯ ಹಾವು ಹಿಡಿದು, ಅವುಗಳ ಪ್ರಾಣ ಉಳಿಸುವುದೇ ನಿತ್ಯದ ಸೇವೆಯಾಗಿದೆ.

Advertisement

ಹಾವು ಸಾಯಿಸಬೇಡಿ: ಭಾರತದಲ್ಲಿ 251 ಜಾತಿಯ ಹಾವುಗಳಿವೆ. ಅದರಲ್ಲಿ 54 ಹಾವು ಅತ್ಯಂತ ವಿಷಕಾರಿಯಾಗಿವೆ. ಉಳಿದ ಬಹುತೇಕ ಹಾವು ಕಡಿದರೂ ಯಾವ ಸಮಸ್ಯೆಯಾಗಲ್ಲ. ಆದರೆ, ಜನರಿಗೆ ಹಾವಿನ ಬಗ್ಗೆ ಭಯವಿದೆ. ಪ್ರತಿವರ್ಷ ಹಾವು ಕಡಿತದಿಂದ 1.30ರಿಂದ 2 ಲಕ್ಷ ಜನ ಸಾಯುತ್ತಿದ್ದಾರೆ. ಇದರಲ್ಲಿ ಶೇ.30ರಷ್ಟು ಜನ ವಿಷಕಾರಿಯಲ್ಲದ ಹಾವು ಕಡಿತದಿಂದ ಸತ್ತಿದ್ದಾರೆ. ನೈಜವಾಗಿ ವಿಷಕಾರಿಯಲ್ಲದ ಹಾವು ಕಡಿತ ಬಳಿಕ ಅವರು ಗಾಬರಿಗೊಂಡು ಹೃದಯಾಘಾತ ಅಥವಾ ಅನ್ಯ ಕಾರಣದಿಂದ ಸತ್ತ ಉದಾಹರಣೆ ಬಹಳಷ್ಟಿವೆ. ಹೀಗಾಗಿ ಜನರಿಗೆ ಹಾವು ಕಡಿತ ತಕ್ಷಣ ಏನು ಮಾಡಬೇಕು ಎಂಬ ಅರಿವು ಮೂಡಿಸುವ ಕೆಲಸವನ್ನೂ ಡ್ಯಾನಿಯಲ್ ನ್ಯೂಟನ್‌ ಮಾಡುತ್ತಿದ್ದಾರೆ. ಮುಖ್ಯವಾಗಿ ಈಚಿನ ದಿನಗಳಲ್ಲಿ ಉತ್ತಮ ಜಾತಿಯ ಹಾವುಗಳು ಕಾಣುವುದು ವಿರಳವಾಗಿದ್ದು, ಹಾವಿಗೂ ಬದುಕುವ ಹಕ್ಕಿದೆ. ಅದನ್ನು ಸಾಯಿಸಬೇಡಿ ಎಂಬ ಮನವಿಯನ್ನೂ ಅವರು ಜನರಿಗೆ ಮಾಡುತ್ತಾರೆ.

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next