Advertisement

ನಿಂತಿಲ್ಲ ಆಫ್ರಿಕನ್‌ ಬಸವನ ಹುಳು ಹಾವಳಿ

02:30 AM Jun 30, 2018 | Karthik A |

ವಿಶೇಷ  ವರದಿ – ಸವಣೂರು: ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಆಫ್ರಿಕನ್‌ ಬಸವನ ಹುಳು ಈಗ ಪುತ್ತೂರಿನ ಸವಣೂರು ಪ್ರದೇಶದ ಸುತ್ತಮುತ್ತ ಕಾಣಿಸಿಕೊಂಡಿದೆ. ಇದರ ಹಾವಳಿಯಿಂದ ಕೃಷಿಕರು ಹೈರಾಣಾಗಿದ್ದಾರೆ. ಈ ಬಸವನ ಹುಳು ಕೃಷಿಯನ್ನು ನಾಶ ಮಾಡುವುದರ ಜತೆಗೆ ಮಾನವನಲ್ಲೂ ವಿವಿಧ ಖಾಯಿಲೆಗೆ ಕಾರಣವಾಗುತ್ತಿದೆ. ಇದರಿಂದ ಕೃಷಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಈ ಆಫ್ರಿಕನ್‌ ಹುಳುವಿನ ಬಾಧೆ ಈ ವರ್ಷವೂ ಕಾಣಿಸಿಕೊಂಡಿದೆ. ಗಾತ್ರದಲ್ಲಿ ದೊಡ್ಡದಿರುವ ಈ ಆಫ್ರಿಕನ್‌ ಬಸವನ ಹುಳು ಹಲವೆಡೆ ಕೃಷಿ ತೋಟದಲ್ಲಿ ತುಂಬಿಕೊಂಡಿದೆ. ಹೊಳೆ, ನದಿ ಪಾತ್ರದಲ್ಲಿರುವ ತೋಟದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಸವಣೂರು ಗ್ರಾಮದ ಇಡ್ಯಾಡಿ, ಕುಕ್ಕುಜೆ, ಪೆರಿಯಡ್ಕ ಪರಿಸರದ ಹಲವು ತೋಟಗಳಲ್ಲಿ ಇವುಗಳ ಹಾವಳಿ ಜೋರಾಗಿದೆ.

Advertisement

ಗಿಡ ನಾಶ
ಈ ಹುಳು ಯಾವುದೇ ಗಿಡವನ್ನು ಆಕ್ರಮಿಸಿದರೆ ಅದರಲ್ಲಿನ ಎಲ್ಲ ಎಲೆಗಳನ್ನು ಸೇವಿಸುತ್ತದೆ. ಪರಿಣಾಮವಾಗಿ ಗಿಡ ಕ್ರಮೇಣ ಸಾಯುತ್ತದೆ. ಗದ್ದೆಗೆ ಇಳಿದು ಪೈರುಗಳನ್ನು ನಾಶಮಾಡುತ್ತಿವೆ. ಅಲ್ಲದೆ ತೆಂಗಿನ ಮರದ ಬೇರುಗಳನ್ನು ತಿಂದು ಮರವೇರುವ ಈ ಹುಳಗಳು ತೆಂಗಿನ ಹಿಂಗಾರ, ಅಡಿಕೆ ಹಿಂಗಾರವನ್ನು ತಿಂದು ಮರವನ್ನು ಕೊಂದುಬಿಡುತ್ತದೆ. ತೋಟದಲ್ಲಿನ ಉಪಬೆಳೆಯಾದ ಬಾಳೆ ಗಿಡವನ್ನು ಸಂಪೂರ್ಣವಾಗಿ ಆವರಿಸಿ ಬಾಳೇ ಗಿಡದ ಒಟ್ಟಾರೆ ಬೆಳವಣಿಗೆಯನ್ನು ಹಾಳು ಮಾಡುತ್ತದೆ.


ಒಂದು ಹುಳು- ನೂರಕ್ಕೂ ಹೆಚ್ಚು ಮೊಟ್ಟೆ ?

ಕೃಷಿ ತೋಟದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಈ ಹುಳು ಸುಮಾರು ನೂರಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತಿವೆ. ಇದರಿಂದ ಇವುಗಳ ಸಂತತಿ ಕ್ಷಿಪ್ರವಾಗಿ ಹೆಚ್ಚುತ್ತಿವೆ. ಈಗಾಗಲೇ ವಿವಿಧ ಕಾರಣಗಳಿಂದ ನಷ್ಟ ಅನುಭವಿಸಿರುವ ಕೃಷಿರಿಗೆ ಈ ಹುಳದ ಬಾಧೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಲ ವರ್ಷದ ಹಿಂದೆ ಈ ಹುಳದ ಬಾಧೆ ತೀವ್ರವಾಗಿತ್ತು. ಬಳಿಕ ಕೃಷಿ, ತೋಟಗಾರಿಕೆ ಇಲಾಖಾಧಿಕಾರಿಗಳು ಪರಿಶೀಲಿಸಿ ತೆರಳಿದ್ದರು.

ಆಫ್ರಿಕನ್‌ ಕೊಕ್ಕರೆಯಿಂದ ನಾಶ
ಈ ಆಫ್ರಿಕನ್‌ ಬಸವನಹುಳುವಿನ ಚಿಪ್ಪು ಗಟ್ಟಿಯಿರುವುದರಿಂದ ಇಲ್ಲಿನ ಯಾವುದೇ ಪಕ್ಷಿಗಳು ತಿನ್ನುವುದಿಲ್ಲ. ಬೇಸಗೆ ಆರಂಭದಲ್ಲಿ ವಲಸೆ ಬರುವ ದೊಡ್ಡಗಾತ್ರದ ಆಫ್ರಿಕನ್‌ ಕೊಕ್ಕರೆಗಳು ಮಾತ್ರ ತಿನ್ನುತ್ತವೆ. ಈ ಕೊಕ್ಕರೆಯ ಕೊಕ್ಕು ಚೂಪಾಗಿರುವುದರಿಂದ ಈ ಆಫ್ರಿಕನ್‌ ಹುಳಗಳನ್ನು ತಿನ್ನಲು ಸಾಧ್ಯವಾಗುತ್ತದೆ. ಈ ಹುಳದ ಬಾಧೆಯಿಂದ ಕೃಷಿಯ ಜತೆಗೆ ಮಾನವ ಸಂಕುಲಕ್ಕೆ ವಿವಿಧ ರೋಗಗಳು ಬಾಧಿಸುತ್ತಿದೆ. ಆಫ್ರಿಕನ್‌ ಮೂಲದ ಹುಳವೆಂದು ಹೇಳಲಾಗಿರುವ ಈ ಹುಳು ಅಪಾಯಕಾರಿ ಜೀವಿಗಳ ಪಟ್ಟಿಯಲ್ಲಿದೆ. 

ಬಾಳೆ ಎಲೆಯ ಕೊರತೆ
ಬಾಳೆಗಿಡದ ಎಲೆಯನ್ನು ಸಂಪೂರ್ಣವಾಗಿ ಈ ಹುಳ ತಿನ್ನುತ್ತದೆ. ಇದರಿಂದ ಶುಭ ಸಮಾರಂಭಗಳಿಗೆ ಬಾಳೆ ಎಲೆಯ ಕೊರತೆಯ ಜತೆಗೆ ತೋಟದಲ್ಲಿ ಬಾಳೆಗಿಡ ನಾಶವಾಗುತ್ತಿದೆ. ಕೃಷಿಕರಿಗೆ ಮಾರುಕಟ್ಟೆಯ ಕೊರತೆಯ ಜತೆಗೆ ಬೆಳೆಗಳಿಗೂ ಹಾನಿಯುಂಟಾಗುತ್ತಿದ್ದು, ಕೃಷಿಕನ ಸಮಸ್ಯೆ ಇಮ್ಮಡಿಗೊಂಡಿದೆ ಎನ್ನುತ್ತಾರೆ ಕೃಷಿಕ ಗಂಗಾಧರ ಪೆರಿಯಡ್ಕ ಹಾಗೂ ಗಣಪಯ್ಯ ಭಟ್‌ ಕುಕ್ಕುಜೆ.

Advertisement

ನಿಯಂತ್ರಣ ಸಾಧ್ಯ
ಭೋಪಾಲ್‌ನ ಸಂಸ್ಥೆಯೊಂದು ‘ಸ್ನೇಯ್ಲ ಕಿಲ್‌ ಕೆಮಿಕಲ್‌ ಕಂಪೋಸಿಷನ್‌’ ಎಂಬ ಔಷಧವನ್ನು ಕಂಡು ಹಿಡಿದಿದೆ. ಈ ಔಷಧದಲ್ಲಿ ಆಲ್ಕೋಹಾಲ್‌ ಅಂಶವಿರುವುದರಿಂದ ಹುಳಗಳು ಆಕರ್ಷಿತವಾಗಿ ಔಷಧದ ಬಳಿಗೆ ಬರುತ್ತವೆ. ಬಿಳಿ ಬಣ್ಣದಲ್ಲಿ ತುಂಡು ತುಂಡಾಗಿರುವ ಈ ನಾಶಕವನ್ನು 250-300 ಗಿಡಗಳ ಮಧ್ಯೆ ಹಾಕಿ ಹುಳಗಳನ್ನು ನಾಶ ಮಾಡಬಹುದು. ಈ ಕೀಟನಾಶಕವನ್ನು ನಿರಂತರವಾಗಿ ಒಂದು ವರ್ಷ ಬಳಸಿದರೆ ಸಂಪೂರ್ಣ ನಾಶ ಮಾಡಲು ಸಾಧ್ಯ.
– ಕೆ.ತಿಮ್ಮಪ್ಪ ಗೌಡ, ಸಹಾಯಕ ಕೃಷಿ ಅಧಿಕಾರಿ, ಕಡಬ ಹೋಬಳಿ

Advertisement

Udayavani is now on Telegram. Click here to join our channel and stay updated with the latest news.

Next