Advertisement
ಛೇ… ಈ ವಿಷಯ ಗಮನಿಸಿ ಯಾರೂ ನನ್ನನ್ನು ಹೊಗಳಲಿಲ್ವಲ್ಲ? ಹೋಗಲಿ, ನನ್ನ ಬೆನ್ನು ನಾನೇ ತಟ್ಟಿಕೊಳ್ಳೋಣ ಅಂದುಕೊಳ್ಳುತ್ತಿದ್ದೆ ಅಷ್ಟರಲ್ಲಿ, ಅಣ್ಣನ ಮಗ ಬಂದವನೇ, ನನ್ನ ವಿಜಯೋತ್ಸಾಹವನ್ನು ಟುಸ್ ಎನಿಸಿಬಿಟ್ಟ. “ಅಯ್ಯೋ, ಇದು ತುಂಬಾ ಹಳೆಯ ಮೆಸೇಜು. ಈಗಲೂ ಫಾರ್ವರ್ಡ್ ಆಗುತ್ತಲೇ ಇದೆ. ಆ ಮಾರ್ಕ್ಸ್ ಕಾರ್ಡ್ ಕಳೆದುಕೊಂಡಿದ್ದ ಹುಡುಗ ಈಗಾಗಲೇ ಓದು ಮುಗಿಸಿ ಕೆಲಸ ಹುಡುಕುತ್ತಿರಬಹುದು’ ಅಂದ ಜೋರಾಗಿ ನಗುತ್ತಾ. ಥತ್ತೇರಿಕೆ! ಸರಿಯಾಗಿ ಬೇಸ್ತು ಬಿದ್ದಿದ್ದೆ.
Related Articles
Advertisement
ಈ ವಾಟ್ಸಾಪ್‌ನ ಫಾರ್ವರ್ಡ್‌ಮೆಸೇಜುಗಳಿಂದ ಆಗುವ ಅನಾಹುತಗಳು ಒಂದೆರೆಡಲ್ಲ. ಪೇಪರ್, ಮ್ಯಾಗಜೀನುಗಳಂತೆ ಬರವಣಿಗೆ ರೂಪದಲ್ಲಿರುವ ಮೆಸೇಜುಗಳು ಸಹ ಸತ್ಯವೇ ಅಂತ ನಂಬುತ್ತಾರೆ ಜನ. ಹಾಗಾಗಿ, ತಮಗೆ ಬಂದ ಕೂಡಲೇ ತಮ್ಮವರಿಗೆ ಫಾರ್ವರ್ಡ್ ಮಾಡಿಬಿಡುತ್ತಾರೆ. ಚಿಕ್ಕ ಪುಟ್ಟ ವಿಷಯಗಳಾದರೆ ಹೇಗೋ ಸಮಜಾಯಿಷಿ ಕೊಟ್ಟುಕೊಳ್ಳಬಹುದು. ಆದರೆ, ಸೀರಿಯಸ್‌ವಿಷಯದಲ್ಲಿ ತಗುಲಿ ಹಾಕಿಕೊಂಡರೆ? ಒಮ್ಮೆ ಅಂಥ ಅನುಭವವೂ ಆಗಿಯೇ ಬಿಟ್ಟಿತು. ಜನರ ಆಕ್ರೋಶ ಕೇವಲ ತಮಗೆ ಮೆಸೇಜ್ ಫಾರ್ವರ್ಡ್ ಮಾಡಿದವರ ಮೇಲೆ ಇರುತ್ತದೆಯೇ ಹೊರತೂ, ಆ ಸುಳ್ಳು ಮೆಸೇಜ್ ಸೃಷ್ಟಿಸಿದವನ ಮೇಲಲ್ಲ ಅಂತ ಅರ್ಥವಾಗಿದ್ದು ಆಗಲೇ. ಆದದ್ದಿಷ್ಟೇ. ಒಂದು ದಿನ ಬೆಳ್ಳಂಬೆಳಗ್ಗೆಯೇ, ಅಮೆರಿಕದವರು ಕೋವಿಡ್ 19 ಕ್ಕೆ ಔಷಧಿ ಕಂಡುಹಿಡಿದಿದ್ದಾರೆ ಎಂಬ ಸುದ್ದಿ ವಾಟ್ಸಾéಪಿನಲ್ಲಿ ಬಂತು. ಎದ್ದ ಕೂಡಲೇ ಕಂಡ ಆ ಸುದ್ದಿ ನೋಡಿ ನನಗೆ ಕುಣಿದಾಡುವಷ್ಟು ಸಂತಸವಾಯ್ತು.
ಸತ್ಯಾಸತ್ಯತೆ ಪರೀಕ್ಷಿಸದೆ, ಆ ಮೆಸೇಜನ್ನು ಎಲ್ಲರಿಗೂ ಫಾರ್ವರ್ಡ್ ಮಾಡಿದ್ದಲ್ಲದೇ, ಫೇಸ್‌ಬುಕ್ ಅಲ್ಲಿ ಕೂಡ ಹಾಕಿಬಿಟ್ಟೆ. ಅಂತೂ ಆ ಕಾಯಿಲೆಗೆ ಔಷಧಿ ಕಂಡುಹಿಡಿದರಲ್ಲ ಎಂಬ ಖುಷಿ ಬಿಟ್ಟರೆ, ಬೇರೆ ಉದ್ದೇಶ ಇರಲಿಲ್ಲ. ಆದರೆ, ಮುಂದೆ ನಡೆದದ್ದೇ ಬೇರೆ. ಈಗಾಗಲೇ ಕೊರೊನಾದಿಂದ ಹತಾಶರಾಗಿದ್ದ ಜನರು, ಈ ಮೆಸೇಜಿನಿಂದ ಮತ್ತಷ್ಟು ಕ್ರುದ್ಧರಾದರು. ಸೋಷಿಯಲ್ ಮೀಡಿಯಾದಲ್ಲಿ ಯಾರೊಬ್ಬರೂ ಈ ಸಂದೇಶವನ್ನು ನಂಬಲಿಲ್ಲ. ಬದಲಿಗೆ, ನನ್ನ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
“ಔಷಧ ಕಂಡುಹಿಡಿದಿದ್ದಾರೆ ಅನ್ನುವುದಕ್ಕೆ ಏನು ಸಾಕ್ಷಿ?’, “ಔಷಧ ಕಂಡು ಹಿಡಿದಿದ್ದರೆ ಅದನ್ನು ಪ್ರಸರಣ ಮಾಧ್ಯಮಕ್ಕೆ ಯಾಕೆ ಬಿಡುಗಡೆ ಮಾಡಲಿಲ್ಲ?’, “ಈ ವಿಷಯವನ್ನು ವೈದ್ಯಕೀಯ ಅನ್ವೇಷಕರು ಯಾಕೆ ಹೊರಗೆಡವಿಲ್ಲ?’ - ಈ ಯಾವ ಪ್ರಶ್ನೆಗೂ ನನ್ನಲ್ಲಿ ಉತ್ತರವಿರಲಿಲ್ಲ. ಸಂದೇಶವನ್ನು ಫಾರ್ವರ್ಡ್ ಮಾಡುವ ಮುನ್ನ ಈ ಪ್ರಶ್ನೆಗಳು ನನ್ನಲ್ಲಿ ಮೂಡಲೂ ಇಲ್ಲ. ಉತ್ಸಾಹದ ಭರದಲ್ಲಿ ಇವೆಲ್ಲ ಯೋಚಿಸದೆ ಮೆಸೇಜ್ ಫಾರ್ವರ್ಡ್ ಮಾಡಿದ್ದು ನನ್ನ ತಪ್ಪು. ನ್ಯೂಸ್ ಚಾನೆಲ್‌ಗಳ ಹಾಗೆ, ಈ ವಿಷಯ ಮೊದಲು ನಾವೇ ಬಿತ್ತರಿಸಿದ್ದು ಅಂತಸಾರುವ ಹಪಹಪಿ ನನಗೆ ಯಾಕೆ ಬಂತು ಅಂತ ಬೈದುಕೊಂಡೆ.
ಈಗಲೂ ದಿನಕ್ಕೆ ಮೂರು ನಾಲ್ಕು ಬಾರಿ ಕೋವಿಡ್ 19 ತಡೆಗಾಗಿ ದೇಸಿ ಔಷಧಿ ಇದೆ ಅನ್ನುವ ಮೆಸೇಜುಗಳು ಫಾರ್ವರ್ಡ್ ಆಗುತ್ತಲೇ ಇರುತ್ತದೆ. ಆದರೆ, ಫಾರ್ವರ್ಡ್ ಮೆಸೇಜುಗಳ ಮೇಲಿನ ವಿಶ್ವಾಸವೇ ಹೊರಟು ಹೋಗಿದೆ. ನಾನೇ ನಂಬದಿದ್ದ ಮೇಲೆ, ಬೇರೆಯವರಿಗೆ ಕಳಿಸುವುದಾದರೂ ಹೇಗೆ ಅಂತ ಸುಮ್ಮನಾಗುತ್ತೇನೆ. ಮುಂದೊಮ್ಮೆ ಈ ಮೆಸೇಜುಗಳಲ್ಲಿ ಸತ್ಯವೇ ಪ್ರಸಾರವಾದರೂ, ಅದು ಸತ್ಯ ಅಂತ ನಂಬುವುದು ಹೇಗೆ ಎಂಬ ಆತಂಕ ಕಾಡುತ್ತದೆ.
-ಕೆ.ಎ. ಸೌಮ್ಯ, ಮೈಸೂರು