Advertisement

ಪೇಜಾವರ-ಸಿದ್ಧಗಂಗಾ ಶ್ರೀ ನೆನಪಿಗೆ ಸ್ಮೃತಿ ವನ : ಬಜೆಟ್‌ನಲ್ಲಿ ಘೋಷಣೆಗೆ ಶಿಫಾರಸು

01:52 AM Feb 12, 2021 | Team Udayavani |

ಬೆಂಗಳೂರು : ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಸ್ಮರಣಾರ್ಥ ಉಡುಪಿಯಲ್ಲಿ ಮತ್ತು ಸಿದ್ಧಗಂಗಾ ಶ್ರೀಗಳ ನೆನಪಿನಲ್ಲಿ ತುಮಕೂರಿನಲ್ಲಿ “ಸ್ಮತಿ ವನ’ ನಿರ್ಮಿಸುವಂತೆ ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ.

Advertisement

ಇದಲ್ಲದೆ ಜೀವವೈವಿಧ್ಯ ಮಂಡಳಿ, ಪರಿಸರ -ಅರಣ್ಯ ಮತ್ತಿತರ ಇಲಾಖೆಗಳ ಮೂಲಕ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಜೀವ ವೈವಿಧ್ಯ ವನ-ಹಸುರು ವಲಯ ರಕ್ಷಣೆ, ದೇಸೀ ಜಾನುವಾರು ತಳಿ ಸಂರಕ್ಷಣೆ, ಬಯೋಗ್ಯಾಸ್‌ ಘಟಕಗಳ ಸ್ಥಾಪನೆ ಸಹಿತ ಹಲವು ಹಸುರು ಯೋಜನೆಗಳನ್ನು ಮಂಡಳಿ ಶಿಫಾರಸು ಮಾಡಿದೆ.

ಹಾಸನದ ಗೆಂಡೆಕಟ್ಟೆಯಲ್ಲಿ ರಾಷ್ಟ್ರಮಟ್ಟದ “ಜೀವವೈವಿಧ್ಯ ವನ’ ರೂಪಿಸಬೇಕು. ರಾಜ್ಯಾದ್ಯಂತ ನೂರು ಸಣ್ಣ ಕೆರೆಗಳನ್ನು ಆಯ್ಕೆ ಮಾಡಿ, ಹೂಳೆತ್ತಿ, ಸುತ್ತಲೂ ಹಸುರು ವಲಯ ನಿರ್ಮಿಸಿ, ಸ್ಥಳೀಯರ ಸಹಭಾಗಿತ್ವದೊಂದಿಗೆ ನಿರ್ವಹಿಸಬೇಕು. ಈಗಾಗಲೇ ಜಾರಿಯಾಗಿರುವ ಕಾನು ಸಂರಕ್ಷಣ ಯೋಜನೆಯನ್ನು ಮಲೆನಾಡು, ಕರಾವಳಿಯ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಿ, ಅಲ್ಲಿರುವ ಅಪೂರ್ಣ ಕಾನು-ದೇವರಕಾಡು ಪ್ರದೇಶಗಳನ್ನು ಸಂರಕ್ಷಿಸುವ ಯೋಜನೆ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿದೆ.

“ಸುಸ್ಥಿರ ಅಭಿವೃದ್ಧಿ ಆಶಯ’ದ ಉದ್ದೇಶ  ಗಳನ್ನು ಸಾಧಿ ಸುವ ನಿಟ್ಟಿನಲ್ಲಿ ವರದಿ ಸಲ್ಲಿ ಸಲು ಮುಖ್ಯ ಮಂತ್ರಿ ಸೂಚಿ ಸಿದ್ದರು. ಅದಕ್ಕೆ ಪೂರಕವಾಗಿ ಶಿಫಾರಸು ಮಾಡಲಾಗಿದೆ. ಜನರ ಸಹ ಭಾಗಿತ್ವ ದಲ್ಲಿ ಯೋಜನೆ ಜಾರಿಗೊಳಿಸಲು ಸಲಹೆ ಮಾಡಿದ್ದೇವೆ.
– ಅನಂತ ಹೆಗಡೆ ಅಶೀಸರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ

ಬಯೋಗ್ಯಾಸ್‌ ಘಟಕ ಯೋಜನೆ
ನಗರಗಳ ಹಸಿತ್ಯಾಜ್ಯ ವಿಲೇವಾರಿಗೆ ಬಯೋಗ್ಯಾಸ್‌ ಘಟಕವು ಅತ್ಯಂತ ಕಡಿಮೆ ವೆಚ್ಚದ, ಸರಳ ಮತ್ತು ಪರಿಸರ ಪೂರಕ ಮಾರ್ಗವಾಗಿದೆ. ಇದರಿಂದ ತ್ಯಾಜ್ಯದ ಸಮಸ್ಯೆಯೂ ತಗ್ಗಿ, ಅಡುಗೆಗಾಗಿ ಬಳಸಲು ಇಂಧನವೂ ದೊರಕುತ್ತದೆ. ರಾಜ್ಯದ ಎಲ್ಲ ಮಹಾನಗರ ಮತ್ತು ನಗರ ಪಾಲಿಕೆಗಳಲ್ಲಿ ಹಸಿತ್ಯಾಜ್ಯದಿಂದ ಬಯೋಗ್ಯಾಸ್‌ ತಯಾರಿಸುವ ಘಟಕಗಳನ್ನು ಖಾಸಗಿ-ಸಾರ್ವಜನಿಕ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಸ್ಥಾಪಿಸಬೇಕು. ಜತೆಗೆ ಸುಮಾರು 1 ಲಕ್ಷ ರೈತ ಕುಟುಂಬಗಳಿಗೆ ದೀಪ ಮತ್ತು ನೀರು ಕಾಯಿಸುವ ಉದ್ದೇಶದ ಸೋಲಾರ್‌ ಘಟಕ ಸ್ಥಾಪಿಸಲು ಅನುಕೂಲವಾಗುವಂತೆ ಕನಿಷ್ಠ ಶೇ. 50ರಷ್ಟು ಸಹಾಯಧನ ನೀಡುವ “ಸುಸ್ಥಿರ ಇಂಧನ ಅಭಿವೃದ್ಧಿ’ ಯೋಜನೆಯನ್ನು ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next