Advertisement

ಐಸಿಸಿ ವಾರ್ಷಿಕ ಕ್ರಿಕೆಟ್‌ ಪ್ರಶಸ್ತಿ ಘೋಷಣೆ: ಮಂಧನಾ, ಅಫ್ರಿದಿ ವರ್ಷದ ಕ್ರಿಕೆಟಿಗರು

10:52 PM Jan 24, 2022 | Team Udayavani |

ದುಬಾೖ: ಐಸಿಸಿಯ ವಾರ್ಷಿಕ ಪ್ರಶಸ್ತಿಗಳ ಘೋಷಣೆಯಾಗಿದೆ. 2021ನೇ ಸಾಲಿನ ಸಾಧಕ ಕ್ರಿಕೆಟಿಗರ ಯಾದಿಯನ್ನು ಪ್ರಕಟಿಸಲಾಗಿದೆ.

Advertisement

ವನಿತಾ ತಂಡದ ಎಡಗೈ ಓಪನರ್‌ ಸ್ಮತಿ ಮಂಧನಾ ಈ ಯಾದಿಯಲ್ಲಿರುವ ಭಾರತದ ಏಕೈಕ ಕ್ರಿಕೆಟರ್‌ ಆಗಿದ್ದಾರೆ. ಭಾರತದ ಪುರುಷ ಕ್ರಿಕೆಟಿಗರಿಗೆ ಯಾವ ಪ್ರಶಸ್ತಿಯೂ ಒಲಿದಿಲ್ಲ.

ಸ್ಮತಿ ಮಂಧನಾ ವನಿತಾ ವಿಭಾಗದ “ವರ್ಷದ ಆಟಗಾರ್ತಿ’ ಗೌರವಕ್ಕೆ ಭಾಜನರಾಗಿದ್ದು, “ರಶೆಲ್‌ ಹೇವೊ ಫ್ಲಿಂಟ್‌ ಟ್ರೋಫಿ’ಯೊಂದಿಗೆ ಸಂಭ್ರಮಿ ಸಿದ್ದಾರೆ. ಪುರುಷರ ವಿಭಾಗದ “ವರ್ಷದ ಆಟಗಾರ’ ಪ್ರಶಸ್ತಿ ಪಾಕಿಸ್ಥಾನದ ಶಾಹೀನ್‌ ಶಾ ಅಫ್ರಿದಿ ಪಾಲಾಗಿದ್ದು, “ಸರ್‌ ಗ್ಯಾರ್‌ಫೀಲ್ಡ್‌ ಟ್ರೋಫಿ’ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಂಧನಾ ಸಾಧನೆಯ ಹಾದಿ
ವರ್ಷದ ಐಸಿಸಿ ವನಿತಾ ಟಿ20 ತಂಡದಲ್ಲೂ ಸ್ಥಾನ ಪಡೆದಿರುವ ಸ್ಮತಿ ಮಂಧನಾಗೆ “ವರ್ಷದ ಆಟಗಾರ್ತಿ’ ರೇಸ್‌ನಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಇಂಗ್ಲೆಂಡ್‌ನ‌ ಟಾಮಿ ಬ್ಯೂಮಂಟ್‌, ದಕ್ಷಿಣ ಆಫ್ರಿಕಾದ ಲಿಜೆಲ್‌ ಲೀ, ಐರ್ಲೆಂಡ್‌ನ‌ ಗ್ಯಾಬಿ ಲೂಯಿಸ್‌ ಅವರೆಲ್ಲ ಇಲ್ಲಿನ ಪ್ರಮುಖ ಸ್ಪರ್ಧಿಗಳಾಗಿದ್ದರು. ಈ ರೇಸ್‌ನಲ್ಲಿ ಮಂಧನಾ ಜಯಶಾಲಿಯಾದರು.

ಇದು ಸ್ಮತಿ ಮಂಧನಾಗೆ ಒಲಿದ 2ನೇ “ವರ್ಷದ ಆಟಗಾರ್ತಿ’ ಗೌರವ. 2018ರಲ್ಲಿ ಮೊದಲ ಸಲ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಜತೆಗೆ ಅಂದು ವರ್ಷದ ಏಕದಿನ ಆಟಗಾರ್ತಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು. ಹಾಗೆಯೇ ಮಂಧನಾ ಈ ಗೌರವಕ್ಕೆ ಪಾತ್ರರಾದ ಭಾರತದ ಕೇವಲ ಎರಡನೇ ಆಟಗಾರ್ತಿ. 2007ರಲ್ಲಿ ಜೂಲನ್‌ ಗೋಸ್ವಾಮಿಗೆ ಈ ಉನ್ನತ ಪ್ರಶಸ್ತಿ ಒಲಿದು ಬಂದಿತ್ತು.

Advertisement

ದಕ್ಷಿಣ ಆಫ್ರಿಕಾ ಎದುರಿನ ಸೀಮಿತ ಓವರ್‌ಗಳ ತವರಿನ ಸರಣಿಯಲ್ಲಿ ಮಂಧನಾ ಗಮನಾರ್ಹ ಪ್ರದರ್ಶನ ನೀಡಿದ್ದರು. 8 ಪಂದ್ಯಗಳಲ್ಲಿ ಭಾರತ ಕೇವಲ ಎರಡರಲ್ಲಿ ಜಯಿಸಿತ್ತು, ಈ ಎರಡರಲ್ಲೂ ಮಂಧನಾ ಕೊಡುಗೆ ಮಹತ್ವದ್ದಾಗಿತ್ತು. ಕ್ರಮವಾಗಿ 80 ಹಾಗೂ 48 ರನ್‌ ಹೊಡೆದು ಅಜೇಯರಾಗಿ ಉಳಿದಿದ್ದರು. ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ 78 ರನ್‌ ಬಾರಿಸಿದರೆ, ಏಕದಿನದ ಏಕೈಕ ಗೆಲುವಿನ ವೇಳೆ 49 ರನ್‌ ಮಾಡಿದ್ದರು.

ಆಸ್ಟ್ರೇಲಿಯ ವಿರುದ್ಧ ಕ್ಯಾನ್‌ಬೆರಾ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಶತಕ (127) ಬಾರಿಸಿದ ಮಂಧನಾ ಪಂದ್ಯಶ್ರೇಷ್ಠರಾಗಿಯೂ ಮೂಡಿಬಂದಿದ್ದರು.

ಅಫ್ರಿದಿ 78 ವಿಕೆಟ್‌ ಬೇಟೆ
ಪುರುಷರ ವಿಭಾಗದಲ್ಲಿ ವರ್ಷದ ಕ್ರಿಕೆಟಿಗನೆನಿಸಿಕೊಂಡ ಶಾಹೀನ್‌ ಶಾ ಅಫ್ರಿದಿ, 2021ರ 36 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22.20 ಸರಾಸರಿಯೊಂದಿಗೆ 78 ವಿಕೆಟ್‌ ಉರುಳಿದ ಸಾಧನೆಗೈದಿದ್ದಾರೆ. ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅಫ್ರಿದಿ ಸಾಧನೆ ಉನ್ನತ ಮಟ್ಟದಲ್ಲಿತ್ತು. ಅದರಲ್ಲೂ ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ಘಾತಕವಾಗಿ ಪರಿಣಮಿಸಿದ್ದರು. ಇಲ್ಲಿ ಭಾರತವನ್ನು ಸೋಲಿಸುವಲ್ಲಿ ಅಫ್ರಿದಿ ಪಾತ್ರ ಮಹತ್ವದ್ದಾಗಿತ್ತು.

ಐಸಿಸಿ ಪ್ರಶಸ್ತಿ ಪುರಸ್ಕೃತರು-2022
– ವರ್ಷದ ಕ್ರಿಕೆಟಿಗ: ಶಾಹೀನ್‌ ಶಾ ಅಫ್ರಿದಿ (ಪಾಕಿಸ್ಥಾನ)
– ಟೆಸ್ಟ್‌ ಆಟಗಾರ: ಜೋ ರೂಟ್‌ (ಇಂಗ್ಲೆಂಡ್‌)
– ಏಕದಿನ ಆಟಗಾರ: ಬಾಬರ್‌ ಆಜಂ (ಪಾಕಿಸ್ಥಾನ)
– ಟಿ20 ಆಟಗಾರ: ಮೊಹಮ್ಮದ್‌ ರಿಜ್ವಾನ್‌ (ಪಾಕಿಸ್ಥಾನ)
– ಉದಯೋನ್ಮುಖ ಆಟಗಾರ: ಜಾನೆಮನ್‌ ಮಲಾನ್‌ (ದಕ್ಷಿಣ ಆಫ್ರಿಕಾ)
– ಅಸೋಸಿಯೇಟ್‌ ದೇಶದ ಆಟಗಾರ: ಜೀಶನ್‌ ಮಕ್ಸೂದ್‌ (ಒಮಾನ್‌)
– ಅಂಪಾಯರ್‌: ಮರಾçಸ್‌ ಎರಾಸ್ಮಸ್‌ (ದಕ್ಷಿಣ ಆಫ್ರಿಕಾ)
– ವರ್ಷದ ಆಟಗಾರ್ತಿ: ಸ್ಮತಿ ಮಂಧನಾ (ಭಾರತ)
– ಏಕದಿನ ಆಟಗಾರ್ತಿ: ಲಿಜೆಲ್‌ ಲೀ (ದಕ್ಷಿಣ ಆಫ್ರಿಕಾ)
– ಟಿ20 ಆಟಗಾರ್ತಿ: ಟಾಮಿ ಬ್ಯೂಮಂಟ್‌ (ಇಂಗ್ಲೆಂಡ್‌)
– ಉದಯೋನ್ಮುಖ ಆಟಗಾರ್ತಿ: ಫಾತಿಮಾ ಸನಾ (ಪಾಕಿಸ್ಥಾನ)
– ಅಸೋಸಿಯೇಟ್‌ ದೇಶದ ಆಟಗಾರ್ತಿ: ಮೇ ಝೆಪೆಡಾ (ಆಸ್ಟ್ರಿಯಾ)

 

Advertisement

Udayavani is now on Telegram. Click here to join our channel and stay updated with the latest news.

Next