Advertisement

ಮಂಧನಾ ಭಾರತ ತಂಡದ ಚಂದನ

11:51 AM Jul 15, 2017 | |

ಅದು ಮಾಹಾರಾಷ್ಟ್ರದ ಸಾಂಗ್ಲಿ ಎಂಬ ಊರು. ಅಪ್ಪ ಮತ್ತು ಮಗನಿಗೆ ಕ್ರಿಕೆಟ್‌ ಹುಚ್ಚು. ಪ್ರತಿದಿನ ತಪ್ಪದೇ ಅಭ್ಯಾಸ ನಡೆಸುತ್ತಿದ್ದರು. ಆದರೆ ಅಭ್ಯಾಸದ ವೇಳೆ ಶ್ರೀನಿವಾಸ್‌ ತಮ್ಮ ಪುಟ್ಟ ಮಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಮಗು ಅಪ್ಪ, ಮಗ ಕ್ರಿಕೆಟ್‌ ಆಡುವುದನ್ನು ನೋಡಿ ತಾನು ಬ್ಯಾಟ್‌ ಹಿಡಿದು ಅಂಕಣಕ್ಕೆ ನುಗ್ಗುತ್ತಿತ್ತು. ನಿಧಾನಕ್ಕೆ ಚೆಂಡು ಎಸೆದರೆ, ಅಪ್ಪಾ ನನಗೂ ಅಣ್ಣನಿಗೆ ವೇಗವಾಗಿ ಎಸೆಯುವಂತೆ ಎಸೆ ಎನ್ನುತ್ತಿತ್ತು. ಹೀಗೆ ಅಪ್ಪ ಮತ್ತು ಅಣ್ಣನೊಂದಿಗೆ ಕ್ರಿಕೆಟ್‌ ಆಡುತ್ತ ಬೆಳೆದವಳು, ಭಾರತ ಮಹಿಳಾ ತಂಡದ ಸೆಹವಾಗ್‌ ಎಂದೇ ಕರೆಯಿಸಿಕೊಳ್ಳುತ್ತಿರುವ ಸ್ಮೃತಿ ಮಂಧನಾ.

Advertisement

ನೀನು ಹೆಣ್ಣು ಮಗು ಕ್ರಿಕೆಟ್‌ ಆಡುವುದು ಬೇಡ ಎಂದು ಆಕೆಯ ಅಪ್ಪ ಮತ್ತು ಅಣ್ಣ ಪ್ರೋತ್ಸಾಹಿಸದಿದ್ದರೆ ಮಹಿಳಾ ಕ್ರಿಕೆಟ್‌ ಒಂದು ಮುತ್ತನ್ನೇ ಕೆಳೆದುಕೊಂಡು ಬಿಡುತ್ತಿತ್ತು. ಮಹಿಳಾ ಕ್ರಿಕೆಟ್‌ ಎಂದರೆ ಮೂಗು ಮುರಿಯುತ್ತಿದ್ದವರು ತಿರುಗಿ ನೋಡುವಂತಾಗಿದೆ.

ಶಾಲೆಗೆ ತಡವಾದರೂ ತರಬೇತಿಗೆ ತಡಮಾಡಿದವರಲ್ಲ
ಎಲ್ಲರಂತೆ ಸ್ಮತಿ ಕ್ರಿಕೆಟ್‌ ಎಂದರೆ ಗಂಡು ಮಕ್ಕಳ ಆಟ ಎಂದು ಕೈಕಟ್ಟಿ ಕುಳಿತು ಕೊಳ್ಳಲಿಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಸ್ಮತಿ ಚಿಕ್ಕವಳಿರುವಾಗಲೇ ಟೆನಿಸ್‌ ಬಾಲ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದರು.

ಅಪ್ಪ ಇವಳ ಧೈರ್ಯವನ್ನು ನೋಡಿ ಮನೆಯಲ್ಲಿ ಇವಳ ಬಗ್ಗೆಯೇ ಮಾತನಾಡುತ್ತಿದ್ದರಂತೆ. ಒಮ್ಮೆ ಮಗಳು ಅಪ್ಪ, ನಾನು ಕ್ರಿಕೆಟ್‌ನಲ್ಲಿಯೇ ಮುಂದುವರಿಯುವೆ ಎಂದಾಗ ಅವರ ತಂದೆ ತೆಗೆದುಕೊಂಡ ನಿರ್ಧಾರ ಏನು ಗೊತ್ತೆ? ಆ ದಿನವೇ ಕ್ರಿಕೆಟ್‌ ಕೋಚ್‌ ಅನಂತ್‌ತಾಂಬ್ವೆà ವೇಕರ್‌ ಬಳಿ ಮಾತನಾಡಿ ವಾರಾಂತ್ಯದಲ್ಲಿ ತರಬೇತಿ ಕೊಡಿಸಲು ಶುರು ಮಾಡಿದರು. ಇದಕ್ಕೆ ತಕ್ಕಂತೆ ಸ್ಮತಿ ಕೂಡಾ ಶಾಲೆಗೆ ತಡವಾಗಿ ಹೋದರೂ ಮೈದಾನಕ್ಕೆ ಮಾತ್ರ ಎಂದೂ ತಡವಾಗಿ ಹೋದವರಲ್ಲ. ಇದರೊಂದಿಗೆ ತಾವೇ ಉಳಿಸಿದ ದುಡ್ಡಿನಿಂದಲೇ ಕಾಂಕ್ರೀಟ್‌ ಪಿಚ್‌ ಮಾಡಿಸಿಕೊಂಡು ಅಭ್ಯಾಸ ಮಾಡಿದರು ಎಂದರೆ ಅವರ ಆಸಕ್ತಿ ಎಷ್ಟಿತ್ತೆಂದು ತಿಳಿಯುತ್ತದೆ.

ಪೇಪರ್‌ನಲ್ಲಿ ಕಾಣಿಸಿಕೊಳ್ಳುವ ಆಸೆ
ಸ್ಮತಿ ಅಣ್ಣ ಶ್ರವಣ್‌ ಕೂಡ ಕ್ರಿಕೆಟಿಗ, ಆತ ಜಿಲ್ಲಾ ಮಟ್ಟದ ಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸ್ಥಳೀಯ ಮಟ್ಟದ ಪತ್ರಿಕೆಯಲ್ಲಿ ಸುದ್ದಿಯಾಗುತ್ತಿದ್ದ. ಇದನ್ನು ನೋಡುತ್ತಿದ್ದ ಸ್ಮತಿ ಪೇಪರ್‌ ಕಟಿಂಗ್ಸ್‌ ಅನ್ನು ಸಂಗ್ರಹಿಸುತ್ತಿದ್ದರು. ತಾನೂ ಕೂಡ ಪತ್ರಿಕೆಯಲ್ಲಿ ಬರಬೇಕು ಅನ್ನುವ ಆಸೆಯನ್ನು ಹೊಂದಿದ್ದರು. ಇದನ್ನು ಅಣ್ಣ ಮತ್ತು ತಂದೆಯ ಜತೆಗೆ ಕೇಳಿಕೊಳ್ಳುತ್ತಿದ್ದರಂತೆ. ಆದರೆ ಶ್ರವಣ್‌ಗೆ ಹೆಚ್ಚು ಯಶಸ್ಸು ಸಿಗಲಿಲ್ಲ. ರಣಜಿಯಲ್ಲಿ ಆಡಬೇಕು ಅನ್ನುವ ಅವರ ಕನಸು ಕೂಡ ಈಡೇರಲಿಲ್ಲ. ಆದರೆ ಸ್ಮತಿ ಪ್ರತಿಭೆಗೆ ಅದೃಷ್ಟಿ ಕೈಹಿಡಿಯಿತು.

Advertisement

9 ವರ್ಷ ಇರುವಾಗಲೇ ರಾಜ್ಯ ತಂಡಕ್ಕೆ ಆಯ್ಕೆ
ಸ್ಮತಿ ಆಟ ಚಿಕ್ಕವಳಿರುವಾಗಲೇ ಹೇಗಿತ್ತು ಅಂದರೆ, ಆಕೆ 9ನೇ ವರ್ಷದಲ್ಲಿರುವಾಗಲೇ ಮಹಾರಾಷ್ಟ್ರದ 15 ವರ್ಷದೊಳಗಿನ ತಂಡಕ್ಕೆ ಆಯ್ಕೆ ಆಗಿರುವುದೇ ಸಾಕ್ಷಿಯಾಗಿದೆ. 11ನೇ ವಯಸ್ಸಿಗೆ ಮಹಾರಾಷ್ಟ್ರದ 19 ವರ್ಷದೊಳಗಿನ ತಂಡಕ್ಕೆ ಆಯ್ಕೆಯಾಗಿದ್ದರು. ಈ ಎಲ್ಲಾ ಟೂರ್ನಿಯಲ್ಲಿಯೂ ಮಂಧನಾ ಭರ್ಜರಿ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರು.

ಏಕದಿನದಲ್ಲಿ ದ್ವಿಶತಕ
ಅದು ಮಹಾರಾಷ್ಟ್ರ ಮತ್ತು ಗುಜರಾತ್‌ ನಡುವಿನ ಏಕದಿನ ಪಂದ್ಯ. ಆರಂಭಿಕ ಆಟಗಾರ್ತಿಯಾಗಿ ಕಣಕ್ಕೆ ಇಳಿದ ಮಂಧನಾ 150 ಎಸೆತದಲ್ಲಿ ಅಜೇಯ 224 ರನ್‌ ದಾಖಲಿಸಿದರು. ಈ ಮೂಲಕ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿದರು. 2013ರಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸ್ಮತಿ 
ಆ ನಂತರ ತಿರುಗಿ ನೋಡಿದ್ದು, ಇಲ್ಲ. 

ಸದ್ಯ ಭಾರತ ತಂಡದ ಸ್ಟಾರ್‌ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸೆಹವಾಗ್‌ ತರಹ ಸ್ಫೋಟಕ ಆಟ ಆಡುವುದರಿಂದ ಇವರನ್ನು ಮಹಿಳಾ ತಂಡದ ಸೆಹವಾಗ್‌ ಎಂದು ಕರೆಯುತ್ತಾರೆ. ಆಸ್ಟ್ರೇಲಿಯಾದ ಬಿಗ್‌ಬಾಷ್‌ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಮಹಿಳೆ ಎಂಬ ದಾಖಲೆಯು ಇವರ ಹೆಸರಲ್ಲಿದೆ.

ವಿಶ್ವಕಪ್‌ನಲ್ಲಿ ಮಿಂಚು
ಪ್ರಸಕ್ತ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸ್ಮತಿ ಅಬ್ಬರಿಸುತ್ತಿದ್ದಾರೆ. ಆರಂಭಿಕ ಪಂದ್ಯದಲ್ಲಿಯೇ ಪ್ರಬಲ ಎದುರಾಳಿ ಇಂಗ್ಲೆಂಡ್‌ ವಿರುದ್ಧ ಶತಕದಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾದರು. ಆದರೆ ಮುಂದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕೇವಲ 20 ವರ್ಷದ ಸ್ಮತಿ ಭವಿಷ್ಯದಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ಎಲ್ಲಾ ಸಾಧ್ಯತೆಗಳು ಇವೆ.

 ಚಂದ್ರಶೇಖರ ಜಿ.

Advertisement

Udayavani is now on Telegram. Click here to join our channel and stay updated with the latest news.

Next